ಮಂಗಳೂರು:ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಕೊಟ್ಟಾರ ಚೌಕಿಯಲ್ಲಿ ಬಶೀರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿರುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿಆರ್ ಸುರೇಶ್ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಜಿತ್ ಪಿಕೆ, ಕಿಷನ್ ಪೂಜಾರಿ, ಧನುಶ್ ಪೂಜಾರಿ ಹಾಗೂ ಸಂದೇಶ್ ಕೋಟ್ಯಾನ್ ಸೇರಿದಂತೆ ನಾಲ್ವರನ್ನು ಬಂಧಿಸಿರುವುದಾಗಿ ತಿಳಿಸಿದರು. ಆರೋಪಿಗಳು ಕೇರಳ ಹಾಗೂ ಮಂಗಳೂರಿನ ಅಡ್ಯಾರ್ ನಿವಾಸಿಗಳಾಗಿದ್ದಾರೆ.
ಆರೋಪಿ ಧನುಷ್ ಮನೆಯಲ್ಲಿದ್ದ ಆಯುಧಗಳನ್ನು ತೆಗೆದುಕೊಂಡು ಯಾರನ್ನಾದರೂ ಹತ್ಯೆ ಮಾಡಬೇಕೆಂದು ಸುರತ್ಕಲ್ ಕಡೆ ಹೊರಟಿದ್ದರು, ಈ ಸಂದರ್ಭದಲ್ಲಿ ಕೊಟ್ಟಾರ ಚೌಕಿಯಲ್ಲಿ ಸಿಕ್ಕ ಬಷೀರ್ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿರುವುದಾಗಿ ಮಾಹಿತಿ ನೀಡಿದರು.
ಇವರೆಲ್ಲ ಬೇರೆ, ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರೆಲ್ಲಾ ಯಾವ ಸಂಘಟನೆಗೆ ಸೇರಿದವರು ಎಂಬುದು ಇನ್ನೂ ನಿಖರವಾಗಿಲ್ಲ. ತನಿಖೆಯ ನಂತರ ಯಾವ ಸಂಘಟನೆ ಎಂದು ಹೇಳುತ್ತೇವೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಷೀರ್ ಅವರ ಆರೋಗ್ಯ ಸ್ಥಿತಿ ನಿನ್ನೆ ಮತ್ತು ಇವತ್ತು ತುಂಬಾ ಉತ್ತಮವಾಗಿದೆ ಎಂದು ಹೇಳಿದರು.