ನವದೆಹಲಿ: ಭಾರತದಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆ ಅಪಾರ ಪ್ರಮಾಣದ್ದಾಗಿದೆ. ಆದರೆ ಅದನ್ನು ಭಾರತ ಮುಚ್ಚಿಟ್ಟಿದೆ ಎಂಬ ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಸಾರಸಗಟಾಗಿ ತಳ್ಳಿಹಾಕಿರುವ ಕೇಂದ್ರ ಸರ್ಕಾರ ಇದೊಂದು ಆಧಾರ ರಹಿತ ಮತ್ತು ಸುಳ್ಳು ಮಾಹಿತಿಯ ವರದಿ ಎಂದು ಹೇಳಿದೆ.
ಇದನ್ನೂ ಓದಿ:ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಔಷಧಿ ಆಂಫೊಟೆರಿಸಿನ್ ಬಿ ಪ್ರತಿ ಬಾಟಲಿಗೆ 1200 ರೂ..!
ಕೋವಿಡ್ 19 ಸಾವಿನ ವಿಷಯದಲ್ಲಿ ಭಾರತ ಸರ್ಕಾರ ನೀಡಿರುವ ಅಂಕಿಅಂಶಕ್ಕಿಂತ ಹೆಚ್ಚಾಗಿರುವುದಾಗಿ ವರದಿ ಮಾಡಿರುವ ನ್ಯೂಯಾರ್ಕ್ ಟೈಮ್ಸ್ ವರದಿ ಸತ್ಯಕ್ಕೆ ದೂರವಾದದ್ದು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲುವ್ ಅಗರ್ವಾಲ್ ತಿಳಿಸಿದ್ದಾರೆ.
ಕೋವಿಡ್ ಗೆ ಸಂಬಂಧಿಸಿದಂತೆ ನ್ಯೂಯಾರ್ಕ್ ಟೈಮ್ಸ್ ನ ಸಂಪೂರ್ಣ ವರದಿ ಆಧಾರ ರಹಿತವಾದದ್ದು, ಅವರು ಯಾವ ಆಧಾರದ ಮೇಲೆ ಸಾವಿನ ಲೆಕ್ಕಾಚಾರ ಹಾಕಿದ್ದಾರೆ ಎಂಬುದು ನಮಗೆ ತಿಳಿಯುತ್ತಿಲ್ಲ. ಕೋವಿಡ್ ಪ್ರಕರಣ ಮತ್ತು ಸಾವಿನ ಲೆಕ್ಕದ ಬಗ್ಗೆ ನಮ್ಮಲ್ಲಿಯೂ ಒಂದು ವ್ಯವಸ್ಥೆ ಇದೆ ಎಂಬುದಾಗಿ ಅಗರ್ವಾಲ್ ತಿರುಗೇಟು ನೀಡಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ನ ವರದಿಗೆ ಯಾವುದೇ ಪುರಾವೆ ಇಲ್ಲ. ಇದೊಂದು ಅಂದಾಜಿನ ಲೆಕ್ಕಾಚಾರದ ವರದಿಯಾಗಿದೆ ಎಂದು ಭಾರತದ ಕೋವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ, ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ್ದ ವರದಿಯಲ್ಲಿ, ಭಾರತದಲ್ಲಿ ಕೋವಿಡ್ ನಿಂದ 3ಲಕ್ಷ ಮಂದಿ ಮಾತ್ರ ಅಲ್ಲ ಅದರ ಮೂರು ಪಟ್ಟು ಸಾವನ್ನಪ್ಪಿದ್ದಾರೆ ಎಂದು ತಿಳಿಸಿತ್ತು. ಈ ವರದಿಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು. ಅದಕ್ಕೆ ಕೇಂದ್ರ ಸಚಿವ ಹರ್ಷವರ್ಧನ್ ಕಟುವಾದ ಪ್ರತಿಕ್ರಿಯೆ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.