Advertisement

75 ವರ್ಷದ ಬಳಿಕ ಬಸವೇಶ್ವರಸ್ವಾಮಿ ಅದ್ಧೂರಿ ತೆಪ್ಪೋತ್ಸವ

02:39 PM Dec 17, 2019 | Team Udayavani |

ಕಡೂರು: ತಾಲೂಕಿನ ಸಿಂಗಟಗೆರೆ ಹೋಬಳಿ ಶೆಟ್ಟಿಹಳ್ಳಿ ಗ್ರಾಮ ದೇವತೆ ಶ್ರೀ ಬಸವೇಶ್ವರ ಸ್ವಾಮಿ, ಕಂಚುಗಲ್ಲು ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಕರಿಯಮ್ಮ ದೇವಿಯರ ತೆಪ್ಪೋತ್ಸವ ಕಾರ್ಯಕ್ರಮ ಸೋಮವಾರ ಅದ್ದೂರಿಯಾಗಿ ನೆರವೇರಿತು.

Advertisement

ಗ್ರಾಮದ ಹಿರಿಯರು ಹೇಳುವಂತೆ ಸುಮಾರು 75 ವರ್ಷಗಳ ಹಿಂದೆ ಇದೇ ರೀತಿ ತೆಪ್ಪೋತ್ಸವ ನಡೆದಿತ್ತು. ನಂತರ ಕಾರಣಾಂತರಗಳಿಂದ ಈ ಸೇವೆ ನಡೆದಿರಲಿಲ್ಲ. ಈ ಬಾರಿ ಉತ್ತಮ ಮಳೆ ಬಂದು, 45 ಹೇಕ್ಟೇರ್‌ ವಿಸ್ತೀರ್ಣದ ಶೆಟ್ಟಿಹಳ್ಳಿ ಕೆರೆ ತುಂಬಿದ್ದರಿಂದ ಹರ್ಷಗೊಂಡ ಭಕ್ತಾದಿ ಗಳು ಹಾಗೂ ಗ್ರಾಮಸ್ಥರು ತೆಪ್ಪೋತ್ಸವ ನಡೆಸಲು ತೀರ್ಮಾನಿಸಿದರು. ಈ ಹಿನ್ನೆಲೆಯಲ್ಲಿ ತೆಪ್ಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಂಚಗಲ್ಲು ಶ್ರೀ ವೀರಭದ್ರಸ್ವಾಮಿ, ಶೆಟ್ಟಿಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಕರಿಯಮ್ಮ ದೇವರ ಉತ್ಸವ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ನಂತರ ಕೆರೆಯಲ್ಲಿ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿದ್ದ ತೆಪ್ಪದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ಸುಮಾರು ಒಂದು ಕಿ.ಮೀ. ಸುತ್ತಳತೆಯಲ್ಲಿ ತೆಪ್ಪವನ್ನು ಸುತ್ತಿಸಲಾಯಿತು. ಈ ವೇಳೆ ಶ್ರೀ ಬಸವೇಶ್ವರ ಸ್ವಾಮಿಗೆ, ವೀರಭದ್ರಸ್ವಾಮಿಗೆ ಜಯವಾಗಲಿ ಎಂಬ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು.

ಕಲ್ಲಸಾದರಹಳ್ಳಿ, ಬಾಣವರ, ಪಂಚನಹಳ್ಳಿ, ಚಿಕ್ಕನಾಯ್ಕನಹಳ್ಳಿ, ಅರಸೀಕೆರೆ, ಕೆ.ಬಿದರೆ, ಸಿಂಗಟಗೆರೆ, ಕಡೂರು, ತರೀಕೆರೆ, ಹೋಸದುರ್ಗದಿಂದ ಬಂದಿದ್ದ ಸಾವಿರಾರು ಭಕ್ತರು ಅದರಲ್ಲೂ ಕೆರೆ ಏರಿಯ ಮೇಲೆ ಯುವಕರು, ಯುವತಿಯರು, ಮಕ್ಕಳು, ಮಹಿಳೆಯರು, ಹಿರಿಯರು ಜಾತಿ ಭೇದವಿಲ್ಲದೆ ಕುಳಿತು ತೆಪ್ಪೋತ್ಸವ ವೀಕ್ಷಿಸಿದರು. ಕನ್ನಡ- ಸಂಸ್ಕೃತಿ ಇಲಾಖೆಯಿಂದ ವೀರಗಾಸೆ, ಚಿಟ್ಟಿಮೇಳ ಕಾರ್ಯಕ್ರಮಗಳು ನಡೆದವು. ನಂತರ ಸುಮಾರು 4 ಸಾವಿರ ಭಕ್ತರಿಗೆ ಅನ್ನದಾಸೋಹ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next