Advertisement

ಮಳೆಗೆ ಬಸವೇಶ್ವರ ದೇಗುಲ ತಡೆಗೋಡೆ ಕುಸಿತ

03:54 PM Sep 12, 2022 | Team Udayavani |

ಮುಳಗುಂದ: ಇತ್ತೀಚೆಗೆ ಸುರಿದ ರಣಭೀಕರ ಮಳೆಗೆ ಜನಜೀವನದ ಅಸ್ತವ್ಯಸ್ತಗೊಂಡು ಜಮೀನು ಹಾಳಾಗುವುದರ ಜೊತೆಗೆ ಹಲವು ದೇವಸ್ಥಾನಗಳಿಗೂ ವರುಣಾಘಾತ ಉಂಟಾಗಿದೆ. ಸಮೀಪದ ಸುಕ್ಷೇತ್ರ ಹರ್ತಿ ಬಸವೇಶ್ವರ ದೇವಸ್ಥಾನದ ತಡೆಗೋಡೆ ಸಂಪೂರ್ಣ ಹಾಳಾಗಿದ್ದು, ತಡೆಗೋಡೆ ಪಕ್ಕದ ಎತ್ತರದ ಗುಡ್ಡದಲ್ಲಿರುವ ದೇವಾಲಯಕ್ಕೆ ಅಪಾಯ ಉಂಟಾಗುವ ಭೀತಿ ಎದುರಾಗಿದೆ.

Advertisement

ಜಾಗೃತ ದೈವಿ ಕ್ಷೇತ್ರ: ಹರ ಸತಿ ಪುರ ಹರ ಗಣಂಗಳ ಪುರವೆಂದು ಕರೆಯುವ ಹರ್ತಿ ಗ್ರಾಮ, ಐತಿಹಾಸಿಕ,ಧಾರ್ಮಿಕ ಹಾಗೂ ಸಂತರು, ಶರಣರು ನಡೆದಾಡಿದ ಜಾಗೃತ ದೈವಿ ಕ್ಷೇತ್ರವಾಗಿದೆ. ಗ್ರಾಮದ ಉತ್ತರ ದಿಕ್ಕಿನ ಕಲ್ಲು ಗುಡ್ಡದ ಮೇಲೆ ನೆಲೆ ನಿಂತು, ನಂಬಿ ಬಂದ ಭಕ್ತರ ಕಾಪಾಡುವ ಗ್ರಾಮದ ಅಧಿದೇವತೆ ಬಸವಣ್ಣ ದೈವೀ ಜಾಗೃತ ಸ್ಥಳವಾಗಿದ್ದು, ಧಾರ್ಮಿಕ ಪಾವನ ಕ್ಷೇತ್ರವಾಗಿದೆ.

ಪ್ರತಿ ವರ್ಷ ಶ್ರಾವಣ ಮಾಸದ ಕೊನೆ ಸೋಮವಾರ ನಡೆವ ಬಸವಣ್ಣ ದೇವರ ಜಾತ್ರೆ ನಾಡಿನ ಅದ್ಧೂರಿ ಜಾತ್ರೆಗಳಲ್ಲಿ ಒಂದು. ನಾಡಿನಾದ್ಯಂತ ಅಪಾರ ಭಕ್ತರು ಭಾಗವಹಿಸಿ ವಿಶೇಷ ಪೂಜಾ ಕೈಂಕರ್ಯ, ಉತ್ಸವಗಳು ಸಂಭ್ರಮದಿಂದ ಜರುಗುತ್ತವೆ. ಇತ್ತೀಚೆಗೆ ದೇವಸ್ಥಾನದ ಅಭಿವೃದ್ಧಿ, ಸಮುದಾಯ ಭವನ, ದಾಸೋಹ ಭವನ ಸೇರಿದಂತೆ ವಿವಿಧ ಸೌಲಭ್ಯಗಳು ಸ್ಥಳೀಯ ಶಾಸಕ ಎಚ್‌. ಕೆ. ಪಾಟೀಲ ಅವರ ಅನುದಾನದಡಿ ಅಭಿವೃದ್ಧಿಗೊಂಡಿವೆ. ಆದರೆ, ಮಹಾಮಳೆಗೆ ಬೃಹತ್‌ ಗೋಡೆ ಕುಸಿದು ದೇವಾಲಯ ಕಟ್ಟಡಕ್ಕೆ ಧಕ್ಕೆಯಾಗಿದೆ.

ಬೇಕಿದೆ ವಿಶೇಷ ನೆರವು: ಗುಡ್ಡದ ತುತ್ತ ತುದಿಯಲ್ಲಿರುವ ಬಸವಣ್ಣ ದೇವರ ದೇವಸ್ಥಾನ ಈಗ ಬೀಳುವ ಆತಂಕ ಎದುರಾಗಿದೆ. ಸರ್ಕಾರದ ವಿಶೇಷ ಆರ್ಥಿಕ ನೆರವಿನಿಂದ ಮಾತ್ರ ದೇವಾಲಯಕ್ಕೆ ಎದುರಾಗಿರುವ ಕಂಟಕವನ್ನು ಪರಿಹರಿಸಲು ಸಾಧ್ಯ ಎನ್ನುವುದು ದೇವಾಲಯದ ಭಕ್ತರ ಅನಿಸಿಕೆ. ಸದ್ಯ ಹಾಳಾಗಿರುವ ಗೋಡೆಯನ್ನು ಪುನಃ ನಿರ್ಮಿಸಿ ದೇವಾಲಯ ಕಟ್ಟಡ ಸುರಕ್ಷಿತವಾಗಿಡಲು ಕೋಟ್ಯಂತರ ರೂ. ಅವಶ್ಯಕತೆಯಿದೆ. ಆದ್ದರಿಂದ, ಸರ್ಕಾರ ದೇವಸ್ಥಾನಕ್ಕೆ ಎದುರಾಗಿರುವ ಕಂಟಕವನ್ನು ಬಗೆಹರಿಸಬೇಕಿದೆ.

ಭಕ್ತರ ಆರಾಧ್ಯ ದೈವ ಹರ್ತಿ ಬಸವಣ್ಣ ದೇವರ ದೇವಸ್ಥಾನದ ಗೋಡೆ ಕುಸಿದು ದೇವಸ್ಥಾನ ಬೀಳುವ ಆತಂಕ ಎದುರಾಗಿದೆ. ಹಾಗಾಗಿ, ಕೂಡಲೇ ಅಂದಾಜು ಎರಡು ಕೋಟಿ ರೂ. ವಿಶೇಷ ಅನುದಾನವನ್ನು ನಮ್ಮ ಗ್ರಾಮಕ್ಕೆ ಆತ್ಮೀಯ ಸಂಬಂಧ ಹೊಂದಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒದಗಿಸಬೇಕು. ಜಿಲ್ಲಾಡಳಿತ ಈ ದೇವಸ್ಥಾನದ ಉಳಿವಿಗೆ ಗಮನ ಹರಿಸಬೇಕು. –ಅಂದಾನೆಪ್ಪ ಕೊಟ್ಟೂರಶೆಟ್ರ, ಬಿ.ಟಿ. ಸೋಮರಡ್ಡಿ, ದೇವಸ್ಥಾನ ಆಡಳಿತ ಮಂಡಳಿ ಮುಖ್ಯಸ್ಥರು

Advertisement

-ಮಹೇಶ ನೀಲಗುಂದ

Advertisement

Udayavani is now on Telegram. Click here to join our channel and stay updated with the latest news.

Next