ನಾರಾಯಣಪುರ: ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದರಿಂದ ಮಂಗಳವಾರ ಸಂಜೆ ಜಲಾಶಯದ 20 ಕ್ರಸ್ಟ್ ಗೇಟ್‌ಗಳನ್ನು ತೆರದು ಹಾಗೂ ಖಾಸಗಿ ಜಲವಿದ್ಯುತ್ ಸ್ಥಾವರದ ಮೂಲಕ ಒಟ್ಟು 1.20 ಲಕ್ಷ ಕ್ಯೂಸೆಕ್‌ನಷ್ಟು ಭಾರೀ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತಿದೆ.
ಕಳೆದೊಂದು ವಾರದಿಂದಲು ಕೃಷ್ಣಾ ಜಲಾನಯನ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ, ಹೀಗಾಗಿ ಉಭಯ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ, ಜಲಾಶಯಗಳ ಗರಿಷ್ಠ ಮಟ್ಟಕ್ಕೂ ಮೀರಿ ಬರುತ್ತಿರುವ ಹೆಚ್ಚುವರಿ ನೀರನ್ನು (ಒಳಹರಿವು) ಮುಂಜಾಗ್ರತ ಕ್ರಮವಾಗಿ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರೀ ಜಲಾಶಯದಿಂದ 1.20 ಲಕ್ಷ ಕ್ಯೂಸೆಕ್‌ನಷ್ಟು ನೀರನ್ನು ಬಸವಸಾಗರಕ್ಕೆ ಹರಿಬಿಡಲಾಗಿದ್ದು, ಅಷ್ಟೇ ಪ್ರಮಾಣದ ನೀರನ್ನು ಬಸವಸಾಗರದಿಂದ ಕೃಷ್ಣಾ ನದಿಗೆ ಹರಿಸಲಾಗುತಿದೆ ಎಂದು ಕೆಬಿಜೆಎನ್‌ಎಲ್ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ :ಬಣಕಲ್: ಮತ್ತಿಕಟ್ಟೆಯಲ್ಲಿ ಮಳೆಗೆ ಮನೆ ಕುಸಿತ : ಅತಂತ್ರ ಸ್ಥಿತಿಯಲ್ಲಿ ಕುಟುಂಬ
ಪ್ರವಾಹದ ಬೀತಿ: ಯಾವಾಗ ಕೃಷ್ಣಾ ನದಿಗೆ 1 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಹರಿಬಿಡಲಾಗಿದ್ದರಿಂದ ನದಿಯಲ್ಲಿ ನೀರಿನ ಹರಿವು ಪ್ರವಾಹದ ರೂಪ ಪಡೆದಿದೆ, ಇದರಿಂದ ಯಾದಗಿರಿ, ರಾಯಚೂರು ಜಿಲ್ಲೆಗಳ ವ್ಯಾಪ್ತಿಯ ನದಿ ತೀರದ ಗ್ರಾಮಗಳಿಗೆ ಪ್ರವಾಹದ ಬೀತಿ ಶುರುವಾಗಿದ್ದು, ನದಿ ಮಾರ್ಗವಾಗಿ ಬರುವ ಕೆಳ ಹಂತದ ಸೇತುವೆಗಳು ಮುಳುಗುವ ಸಾಧ್ಯತೆ ಇದೆ ಹೀಗಾಗಿ ನದಿ ತೀರದ ಗ್ರಾಮಗಳ ಜನ, ಜಾನುವಾರಗಳು ನದಿಗೆ ಇಳಿಯದಂತೆ ಎಚ್ಚರ ವಹಿಸಬೇಕು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಆಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಬಸವಸಾಗರ ಜಲಾಶಯದಲ್ಲಿ 491.80 ಮೀಟರ್‌ಗೆ ನೀರು ಇದ್ದು, 31.23 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಿದೆ. ಮುಂಗಾರು ಹಂಗಾಮಿಗೆ ನೀರಾವರಿ ಮುಖ್ಯ ಕಾಲುವೆಗಳಿಗೆ 4500 ಕ್ಯೂಸೆಕ್‌ನಷ್ಟು ನೀರು ಹರಿಸಲಾಗುತಿದೆ.