ಆಲಮಟ್ಟಿ: ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದಿಂದ ನದಿ ಪಾತ್ರಕ್ಕೆ ನೀರು ಲಕ್ಷಾಂತರ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಬಸವಸಾಗರ ಹಿನ್ನೀರಿನಲ್ಲಿ ಏರಿಕೆಯಾಗಿ ನದಿ ತೀರದ ಜಮೀನಿನಲ್ಲಿರುವ ಬೆಳೆಗಳು ಜಲಾವೃತವಾಗಿವೆ.
519.60ಮೀ. ಎತ್ತರದಲ್ಲಿ 123.081ಟಿಎಮ್ ಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದಲ್ಲಿ ಬುಧವಾರ 516.78ಮೀ. ಎತ್ತರದಲ್ಲಿ 81.776ಟಿಎಮ್ ಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 4,12,492ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಜಲಾಶಯದ ಬಲಬದಿಯಲ್ಲಿರುವ ಕೆಪಿಸಿಎಲ್ ನ ಆಲಮಟ್ಟಿ ಜಲವಿದ್ಯುತ್ ಘಟಕದಿಂದ 42,500ಕ್ಯೂಸೆಕ್, ಜಲಾಶಯದ ಎಲ್ಲ 26ಗೇಟುಗಳು ಹಾಗೂ ಜಲಾಶಯ ವ್ಯಾಪ್ತಿಯ ಕಾಲುವೆಗಳು ಸೇರಿ 2,98,303 ಕ್ಯೂಸೆಕ್ ಸೇರಿದಂತೆ ಜಲಾಶಯದಿಂದ ಒಟ್ಟು 3,40,803 ಕ್ಯೂಸೆ ಕ್ ನೀರನ್ನು ಹೊರಬಿಡಲಾಗುತ್ತಿದೆ.
ಬೆಳೆಗಳು ಜಲಾವೃತ: ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ವ್ಯಾಪಕವಾಗಿ ಮಳೆಯಾಗಿರುವದರಿಂದ ಶಾಸ್ತ್ರಿ ಜಲಾಶಯಕ್ಕೆ ವ್ಯಾಪಕ ನೀರು ಹರಿದುಬರುತ್ತಿರುವದರಿಂದ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ 3.40ಲಕ್ಷಕ್ಯೂಸೆಕ್ ನೀರನ್ನು ನದಿಪಾತ್ರಕ್ಕೆ ಹರಿದುಬಿಟ್ಟಿರುವದರಿಂದ ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ವ್ಯಾಪಕ ಏರಿಕೆಯಾಗಿ ವಿಜಯಪುರ ಜಿಲ್ಲೆಯ ತಾಳಿಕೋಟೆ, ಮುದ್ದೇಬಿಹಾಳ ಹಾಗೂ ನಿಡಗುಂದಿ ತಾಲೂಕಿನ ಮತ್ತು ಬಾಗಲಕೋಟ ಜಿಲ್ಲೆಯ ಹುನಗುಂದ ಹಾಗೂ ಬಾಗಲಕೋಟ ತಾಲೂಕಿನ ನದಿ ದಡದಲ್ಲಿರುವ ಗ್ರಾಮಗಳ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ತೊಗರಿ, ಸಜ್ಜೆ, ಸೂರ್ಯಕಾಂತಿ, ತರಕಾರಿ ಬೆಳೆ, ಬಾಳೆ ಹಾಗೂ ಕಬ್ಬು ಬೆಳೆಗಳು ಹಿನ್ನೀರಿನಿಂದ ಜಲಾವೃತವಾಗಿವೆ.
ಇದನ್ನೂ ಓದಿ :ಸಿಎಂ ಬದಲಾಗಿದ್ದಾರೆಯೇ ಹೊರತು ಪಕ್ಷವಲ್ಲ : ಬಿ.ಸಿ.ಪಾಟೀಲ್
ತಹಶೀಲ್ದಾರ ಭೇಟಿ: ಬಸವಸಾಗರ ಹಿನ್ನೀರಿನಿಂದ ಜಲಾವೃತಗೊಂಡಿರುವ ಅರಳದಿನ್ನಿ, ಯಲಗೂರ, ಕಾಶಿನಕುಂಟಿ, ಯ.ಬೂದಿಹಾಳ, ಮಸೂತಿ ಹಾಗೂ ಬಳಬಟ್ಟಿ ಗ್ರಾಮಗಳಿಗೆ ತಹಶೀಲ್ದಾರ ಸತೀಶ ಕೂಡಲಗಿಯವರು ಕಂದಾಯ ನಿರೀಕ್ಷಕ ಸಲೀಂ ಯಲಗೋಡ, ಗ್ರಾಮಲೆಕ್ಕಾಧಿಕಾರಿಗಳೊಂದಿಗೆ ಜಲಾವೃತ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದರು.
ಪ್ರತಿ ಬಾರಿಯೂ ಮಳೆಗಾಲದಲ್ಲಿ ನದಿದಡದಲ್ಲಿರುವ ಗ್ರಾಮಗಳ ರೈತರ ಜಮೀನಿನಲ್ಲಿರುವ ಬೆಳೆಗಳು ಜಲಾವೃತವಾಗಿ ಹಾನಿ ಅನುಭವಿಸುವಂತಾಗಿದೆ. ಆದ್ದರಿಂದ ಸರ್ಕಾರ ನೆರೆಹಾವಳಿಗೀಡಾಗುವ ಪ್ರದೇಶವನ್ನು ಭೂಸ್ವಾಧೀನಪಡಿಸಿಕೊಂಡು ಯೋಜನಾ ನಿರಾಶ್ರಿತ ಸಂತ್ರಸ್ತರಿಗೆ ನೀಡುವ ಎಲ್ಲ ಪರಿಹಾರ ನೀಡಬೇಕು ಇಲ್ಲವೇ ನದಿ ದಡದಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ತಾ.ಪಂ.ಮಾಜಿಸದಸ್ಯ ಮಲ್ಲು ರಾಠೋಡ, ಸುರೇಶ ಗುಮತಿಮಠ, ಬಸವರಾಜ ಹೆರಕಲ್ಲ, ಮಹಾಂತೇಶ ಬೆಳಗಲ್ಲ, ಮೈಬೂಬಸಾಬ ಚಾಂದ ಆಗ್ರಹಿಸಿದ್ದಾರೆ.