ಹುಬ್ಬಳ್ಳಿ: ಎಂತಹದ್ದೇ ಕಷ್ಟಗಳು ಎದುರಾದರೂ ಸರಿ ಜೀವ ಇರುವವರೆಗೆ ಬಸವತತ್ವದ ಹೋರಾಟಕ್ಕೆ ಸಿದ್ಧ ಎಂದು ಮುಂಡರಗಿ ತೋಂಟದಾರ್ಯಮಠದ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು. ಇಲ್ಲಿನ ವಿದ್ಯಾನಗರದ ಬಿವಿಬಿ ಕಾಲೇಜ್ ಕ್ಯಾಂಪಸ್‌ನ ಐಎಂಎಸ್‌ಆರ್ ಸಭಾಭವನದಲ್ಲಿ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರೊ|ಎಸ್ .ವಿ.ಪಟ್ಟಣಶೆಟ್ಟಿಯವರ 75ನೇ ಜನ್ಮದಿನಾಚರಣೆ ಹಾಗೂ ಅವರ ಕೃತಿ ‘ವಚನ ಶ್ರೀಗಂಧ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮಲ್ಲಿನ ಜಾತಿ ವಾಸನೆ ಇನ್ನು ಹೋಗಿಲ್ಲ. ದಲಿತರು ಹೋಟೆಲ್ ಇಟ್ಟರೆ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಪರದೇಶದಿಂದ ಬಂದವರು ಹೊಟೇಲ್ ಇಟ್ಟರೆ ತಿಂದು ಬರುತ್ತಾರೆ. ಈ ಸತ್ಯ ಹೇಳಲು ಹೋದರೆ ನನ್ನ ಮೇಲೆ ಗದಾಪ್ರಹಾರ, ಹತ್ಯೆಯ ಸಂಚು ನಡೆದಿದೆ ಎಂದರು.
ಬಸವಣ್ಣನವರ ವಚನಗಳ ಶಬ್ದಗಳು ನಮಗೆ ಅರ್ಥವಾಗಲ್ಲ ಹಾಗೂ ಅದನ್ನು ಆಳವಾಗಿ ತಿಳಿದುಕೊಳ್ಳುವುದಕ್ಕೂ ಹೋಗಲ್ಲ. ಹೀಗಾಗಿ ಇನ್ನಿಲ್ಲದ ಅರ್ಥ ಕಲ್ಪಿಸಿಕೊಳ್ಳುತ್ತಿದ್ದಾರೆ ಎಂದರಲ್ಲದೇ ನಾವಿಂದು ಬಸವಣ್ಣನವರ ತತ್ವಗಳನ್ನು ಹೇಳಬೇಕಾದರೆ ಹಾಗೂ ಅವರನ್ನು ಒಪ್ಪಬೇಕಾದರೆ ಕಷ್ಟವಾಗಿದೆ ಎಂದರು.
ನಾವು ಹತಾಶರಾದಾಗ ವಚನಗಳು ಧೈರ್ಯ ತುಂಬುತ್ತವೆ. ಪ್ರಾದೇಶಿಕವಾಗಿ ನಾವು ಹಿಂದೂಗಳು, ಧರ್ಮಯುಕ್ತವಾಗಿ ನಾವು ಹಿಂದೂಗಳಲ್ಲ ಎಂದಿದ್ದೆ. ಆದರೆ ನಾವು ಹಿಂದೂಗಳಲ್ಲ ಎಂಬುದನ್ನಷ್ಟೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ನಮ್ಮನ್ನು ಹಿಂದೂ ವಿರೋಧಿಗಳನ್ನಾಗಿ ಮಾಡಲಾಗಿದೆ ಎಂದರು.
ನಿಷ್ಠೆಗೆ ಬೆಲೆ ಇಲ್ಲವೆಂಬ ಬೇಸರ: ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಿಂಗಾಯತ ಪರ ಹೋರಾಟಗಾರನೆಂಬ ಕಾರಣದಿಂದ ನನಗೆ ಸಿಗಬೇಕಾದ ಸಚಿವ ಸ್ಥಾನ ತಪ್ಪಿದೆ. ಮಂತ್ರಿ ಪದವಿ ಹೋದರೂ ಪರವಾಗಿಲ್ಲ. ಆದರೆ ಬಸವಣ್ಣನವರ ತತ್ವಗಳನ್ನು ಬಿಡಲಾರೆ. ಸಮಾಜಕ್ಕಾಗಿ ಹೋರಾಟ ಮುಂದುವರಿಸುವೆ ಎಂದರು. ಪಾಲಕರು ಮಕ್ಕಳಿಗೆ ಸಂಸ್ಕೃತಿ, ಉತ್ತಮ ಸಂಸ್ಕಾರ ಕಲಿಸಬೇಕು. ಪಾಲಕರನ್ನು ನಿರ್ಲಕ್ಷಿಸುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ. ಸಂಸಾರ ಉತ್ತಮವಾಗಿದ್ದರೆ, ಸಮಾಜ ಉತ್ತಮವಾಗಿರಲು ಸಾಧ್ಯ ಎಂದರು.
ಲಕ್ಷ್ಮೀ ಸಿಂಗಶೆಟ್ಟಿ ಪ್ರಾರ್ಥಿಸಿದರು. ಬಸವರಾಜ ಕೆಂಧೂಳಿ ವಚನ ಗಾಯನ ಪ್ರಸ್ತುತಪಡಿಸಿದರು. ಸುರೇಶ ಹೊರಕೇರಿ ಸ್ವಾಗತಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಡಾ| ಶ್ಯಾಮಸುಂದರ ಬಿದರಕುಂದಿ ಗ್ರಂಥ ಪರಿಚಯಿಸಿದರು. ಪ್ರೊ| ಕೆ.ಎಸ್. ಕೌಜಲಗಿ ನಿರೂಪಿಸಿದರು.
ಲಿಂಗಾಯತ ಹೋರಾಟದಲ್ಲಿ ತೊಡಗಿದ್ದರಿಂದ ಬಸವರಾಜ ಹೊರಟ್ಟಿ ಅವರಿಗೆ ಸಚಿವ ಸ್ಥಾನ ತಪ್ಪಿದೆ. ಪಕ್ಷ ನಿಷ್ಠೆ, ವಿಧಾನ ಪರಿಷತ್ತು ಹಿರಿಯ ಸದಸ್ಯ ಹಾಗೂ ಅವರ ಅನುಭವನ್ನು ಪರಿಗಣಿಸಿಯಾದರೂ ಅವರಿಗೆ ಸಚಿವ ಸ್ಥಾನ ನೀಡಲೇಬೇಕಿತ್ತು. ಹೊರಟ್ಟಿಯವರು ಬೇಸರ ಪಟ್ಟುಕೊಳ್ಳುವುದು ಬೇಡ. ಸಮಾಜ ಕಾರ್ಯಕ್ಕೆ ಮುಂದಾಗಲಿ.
ಸಮಾಜ ಅವರ ಬೆನ್ನಿಗಿದೆ.
ಶ್ರೀ ನಿಜಗುಣ ಪ್ರಭು
ತೋಂಟದಾರ್ಯ ಸ್ವಾಮೀಜಿ, ಮುಂಡರಗಿ
ನನಗೆ ಸಚಿವ ಸ್ಥಾನ ತಪ್ಪಿರುವುದಕ್ಕೆ ಬೇಸರವಿಲ್ಲ. ಆದರೆ, ರಾಜಕಾರಣದಲ್ಲಿ ಪ್ರಾಮಾಣಿಕತೆ, ಪಕ್ಷ ನಿಷ್ಠೆಗೆ ಯಾವುದೇ ಬೆಲೆ ಇಲ್ಲವಲ್ಲ ಎಂಬ ಬೇಜಾರಿದೆ. ಈ ನೋವನ್ನು ನಿಮ್ಮ ಮುಂದಲ್ಲದೆ ಇನ್ನೆಲ್ಲಿ ಹೇಳಿಕೊಳ್ಳಲಿ.
ಬಸವರಾಜ ಹೊರಟ್ಟಿ,
ವಿಧಾನ ಪರಿಷತ್ ಸದಸ್ಯ