ಬೆಂಗಳೂರು: ಕಟುಸತ್ಯ ಹೇಳುವುದಕ್ಕೆ ಇವತ್ತಿನ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಸಹಿತ ಬಹುತೇಕರಿಗೆ ಸಾಧ್ಯವಿಲ್ಲ. ರಾಜಕಾರಣಿಗಳು ದೇವರ ಜಗಲಿಯಲ್ಲೇ ಆತ್ಮ ಸಾಕ್ಷಿಗೆ ಗಂಟುಹಾಕಿ ಹೋಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರವಿವಾರ ಗಾಂಧಿ ಭವನದಲ್ಲಿ ಬಸವ ವೇದಿಕೆ ಬೆಂಗಳೂರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರಿಗೆ ಈ ಸಾಲಿನ “ಬಸವಶ್ರೀ’ ಮತ್ತು ರಾಯಚೂರಿನ ಪಂಡಿತ್ ಅಂಬಯ್ಯ ನುಲಿ ಅವರಿಗೆ “ವಚನ ಸಾಹಿತ್ಯ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಬಸವಣ್ಣ ಎಂದರೆ ಜೀವಾವೃತ, ಅಲ್ಪಾಯುಷಿ. ಕಲ್ಯಾಣ ಕ್ರಾಂತಿಯ ಬಳಿಕ ಬಹಳ ದಿನ ಅವರು ಬದುಕಲಿಲ್ಲ. ಅವರು ಮನಸು ಮಾಡಿದ್ದರೆ, ಕಲ್ಯಾಣದಲ್ಲಿ ಬಿಜ್ಜಳನ ಆಸ್ಥಾನದಲ್ಲಿ ಮುಖ್ಯಮಂತ್ರಿಯಾಗಿ ಇರಬಹುದಿತ್ತು. ಆದರೆ ಅವರು ತಾವು ನಂಬಿದ ತತ್ವಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದರು ಎಂದರು.
ಈಗಿನ ಪರಿಸ್ಥಿತಿಯಲ್ಲಿ ಸತ್ಯವನ್ನು ಹೇಳಲು ಎಲ್ಲರೂ ಹಿಂಜರಿಯುತ್ತಾರೆ. ಬಸವಣ್ಣ ಕಾಯಕ ಮತ್ತು ದಾಸೋಹದ ಬಗ್ಗೆ ಹೇಳುತ್ತಾರೆ. ನಾವು ಕಾಯಕ ಬಿಟ್ಟು ದಾಸೋಹದ ಬಗ್ಗೆ ಮಾತನಾಡುತ್ತೇವೆ. ಉತ್ಪಾದನೆ ಇಲ್ಲದೆ ದಾಸೋಹ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಬಸವಣ್ಣ ಸತ್ತಿರಬಹುದು. ಆದರೆ ಇಂದಿಗೂ ಜೀವಂತವಾಗಿದ್ದಾರೆ. ಬಸವಣ್ಣನವರು ಮಾಡಿದ ಹೋರಾಟದ ಅಂಶಗಳು ಈಗಲೂ ಜೀವಂತ ಆಗಿವೆ ಎಂದು ಹೇಳಿದರು.
ಬಸವ ಸಮಿತಿ ಅಧ್ಯಕ್ಷ ಡಾ| ಸಿ.ಸೋಮಶೇಖರ್ ಮಾತನಾಡಿ, ಆರ್ಥಿಕ, ಸಾಮಾಜಿಕ ಅಸಮಾನತೆ ಸೇರಿದಂತೆ ಸಮಗ್ರ ಬದಲಾವಣೆಗೆ ಬಸವಣ್ಣ ಹೋರಾಟ ನಡೆಸಿದರು. ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪರಿಚಯಿಸಿದರು. ಸಮಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಸಿದೌœಷಧಿ ನೀಡಿದರು ಎಂದು ಸ್ಮರಿಸಿದರು.
ಈ ವೇಳೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಇಸ್ರೋ ಮಾಜಿ ಅಧ್ಯಕ್ಷ ಡಾ| ಎ.ಎಸ್.ಕಿರಣ್‌ಕುಮಾರ್, ನಿವೃತ್ತ ನ್ಯಾಯಮೂರ್ತಿ ರತ್ನಕಲಾ, ಬಸವ ವೇದಿಕೆ ಉಪಾಧ್ಯಕ್ಷ ಎಸ್. ಷಡಕ್ಷರಿ, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮುಂತಾದವರಿದ್ದರು.
ಸಿಎಂ ಆಗಿದ್ದಾಗ ಪಾರದರ್ಶಕ ಸಮಿತಿ ರಚಿಸಿದ್ದೆ
ಕೆಲವರು ನಮ್ಮ ಸರಕಾರದ ಮೇಲೆ 30 ಪರ್ಸೆಂಟ್, 40 ಪರ್ಸೆಂಟ್ ಆರೋಪ ಮಾಡಿದ್ದರು. ಅವರು ಈಗ ಎಲ್ಲಿದ್ದಾರೊ ಗೊತ್ತಿಲ್ಲ. ನಾನು ಈ ಬಗ್ಗೆ ಪಾರದರ್ಶಕತೆ ಕಾಪಾಡಲು ಯಾವುದೇ ಟೆಂಡರ್ ನೀಡುವ ಮೊದಲು ಹೈಕೋರ್ಟಿನ ನ್ಯಾ| ರತ್ನಕಲಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದೆ. ರತ್ನಕಲಾ ಅವರು ಪಾರದಶìಕವಾಗಿ ಪರಿಶೀಲನೆ ನಡೆಸುವುದರಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂ ಉಳಿಸಿದ್ದಾರೆ ಎಂದು ಹೇಳಿದರು.