ವಿಜಯಪುರ : ಇಷ್ಟಾರ್ಥ ಸಿದ್ಧಿಗಾಗಿ ಹಿಂದೂಗಳಲ್ಲಿ ಇರುವ ನಂಬಿಕೆಯಂತೆ ದೇವರಿಗೆ ಹರಕೆ ಹೊತ್ತು ನಾನು ಗಡ್ಡ ಬಿಟ್ಟಿದ್ದೇನೆ. ಜುಲೈ ಕೊನೆಯ ದಿನದ ಬಳಿಕ ರಾಜ್ಯದಲ್ಲಿ ಆಗುವ ಬದಲಾವಣೆಯಿಂದ ನನ್ನ ಗಡ್ಡದ ಮಹಿಮೆ ರಾಜ್ಯಕ್ಕೆ ತಿಳಿಯಲಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೊಮ್ಮೆ ದಿನಾಂಕದ ಗಡುವು ಪ್ರಕಟಿಸಿದ್ದಾರೆ.
ಇಂದು(ಸೋಮವಾರ, ಜುಲೈ 19) ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಖಾಸಗಿತನಕ್ಕೆ, ವ್ಯಕ್ತಿಯ ಗೌಪ್ಯತೆಗೆ ರಕ್ಷಣೆ ಇಲ್ಲದಂತಾಗಿದೆ. ಕರ್ನಾಟಕದ ಇಂದಿನ ಸರ್ಕಾರದಲ್ಲಿ ಏನುಬೇಕಾದರೂ ನಡೆಯಲು ಸಾಧ್ಯ ಎಂಬ ದುಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಅಕ್ರಮ ಗಣಿಯಲ್ಲಿ ಭಾರಿ ಸ್ಫೋಟಕ್ಕೆ ಸಿದ್ಧತೆ : ಪೊಲೀಸ್ ದಾಳಿಯಿಂದ ತಪ್ಪಿದ ಅಪಾಯ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಖಾಸಗಿ ಸಂಭಾಷಣೆಯನ್ನು ಆಡಿಯೋ ಮೂಲಕ ದಾಖಲಿಸಿ, ಸೋರಿಕೆ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವುದು ವ್ಯಕ್ತಿಯ ಖಾಸಗಿತನ ಸ್ವಾತಂತ್ರ್ಯ ಹರಣವಾಗಿದೆ. ಹೀಗಾಗಿ ಕೂಡಲೇ ಸದರಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ಆಪ್ತರೇ ಸಿಸಿಬಿ ತನಿಖಾ ತಂಡದಲ್ಲಿರುವ ಕಾರಣ ಮಾದಕ ವಸ್ತು ಪ್ರಕರಣ, ಯುವರಾಜ ವಂಚನೆ ಪ್ರಕರಣಗಳ ತನಿಖೆ ಸ್ಥಗಿತಗೊಂಡಿದೆ. ಸರ್ಕಾರ ನಡೆಸುವವರು ಇಂಥ ಪ್ರಶ್ನೆಗಳಿಗೆ ಉತ್ತರದಾಯಿ ಆಗಬೇಕು ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ಕಟೀಲ್ ಆಡಿಯೋ ತಮ್ಮದಲ್ಲ ಎಂದಿರುವಾಗ ಈ ಬಗ್ಗೆ ಮಾತನಾಡುವ ಅವಶ್ಯಕತೆಯಿಲ್ಲ:ಅಶ್ವತ್ಥ್ ನಾರಾಯಣ್