Advertisement

ಪೊಲೀಸ್‌ ಮಕ್ಕಳ ಶಾಲೆ ಮುಚ್ಚುವ ಯತ್ನಕ್ಕೆ ಹೊರಟ್ಟಿ ತೀವ್ರ ವಿರೋಧ

12:07 PM Nov 03, 2015 | sudhir |

ಹುಬ್ಬಳ್ಳಿ: ಉತ್ತರ ಕರ್ನಾಟಕದ ಏಕೈಕ ಹಾಗೂ ಮಾದರಿ ಶಾಲೆಯಾಗಿರುವ ಎನ್‌.ಎ.ಮುತ್ತಣ್ಣ ಪೊಲೀಸ್‌ ಮಕ್ಕಳ ವಸತಿ ಶಾಲೆಯ ಪ್ರವೇಶಾತಿ ಹಾಗೂ ಸಿಬ್ಬಂದಿಗೆ ವೇತನಾನುದಾನ ನೀಡಬೇಕು. ನಿಮ್ಮ ತಂದೆ ಎಸ್‌.ಆರ್‌.ಬೊಮ್ಮಾಯಿ ಅವರು
ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ ಶಾಲೆಯನ್ನು ನೀವು ಗೃಹಮಂತ್ರಿಯಾಗಿ ಮುಚ್ಚುವ ಕೆಲಸ ಆಗಬಾರದೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಅವರು ಒತ್ತಾಯಿಸಿದ್ದಾರೆ.
ಈ ಕುರಿತಾಗಿ ಗೃಹ ಸಚಿವರಿಗೆ ಪತ್ರ ಬರೆದಿರುವ ಅವರು, ಉತ್ತರ ಕರ್ನಾಟಕದ ಏಕೈಕ ಶಾಲೆ ಎನ್ನುವ ಕಾರಣಕ್ಕೆ ನಿಮಗೆ ಹಾಗೂ
ಸಂಬಂಧಿಸಿದವರಿಗೆ ನೂರಾರು ಪತ್ರಗಳನ್ನು ಬರೆಯಲಾಗಿದೆ. ಇಲ್ಲಿನಂತೆಯೇ ಬೆಂಗಳೂರು-ಮೈಸೂರಿನಲ್ಲಿ ಶಾಲೆಗಳು ಗೃಹ ಇಲಾಖೆ ಅಡಿಯಲ್ಲಿ ನಡೆಯುತ್ತಿವೆ.

Advertisement

ಆ ಭಾಗದ ಶಾಲೆಗಳು ಮುಚ್ಚುವುದಿಲ್ಲ. ಆದರೆ ಕೆಲ ಪೊಲೀಸ್‌ ಅಧಿಕಾರಿಗಳು ಉತ್ತರ ಕರ್ನಾಟಕದ ಏಕೈಕ ಪೊಲೀಸ್‌ ಮಕ್ಕಳ ಶಾಲೆಯನ್ನು ವ್ಯವಸ್ಥಿತವಾಗಿ ಮುಚ್ಚುವ ಕೆಲಸ ಮಾಡಲಾಗಿದೆ. ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಖುದ್ದಾಗಿಯೂ ಭೇಟಿಯಾಗಿದ್ದಾನೆ.
ಹಿರಿಯ ಸದಸ್ಯನಾಗಿ, ಮಾಜಿ ಸಭಾಪತಿಯಾಗಿ ಈ ವಿಷಯವಾಗಿ ಪದೇ ಪದೇ ಕಚೇರಿಗಳಿಗೆ ಹೋಗುವುದು ಚ್ಯುತಿ ತರುವಂಥ ವಿಷಯ. ಉತ್ತರ ಕರ್ನಾಟಕದ ಶಾಲೆ ಎನ್ನುವ ಕಾರಣಕ್ಕೆ ಇದನ್ನು ಇಷ್ಟೊಂದು ನಿಕೃಷ್ಟವಾಗಿ ಕಾಣುವುದು ಸರಿಯಲ್ಲ. ಬೆಂಗಳೂರಿನಲ್ಲಿ ಕುಳಿತಿರುವ ಅಧಿಕಾರಿಗಳಿಗೆ ಉತ್ತರ ಕರ್ನಾಟಕವೆಂದರೆ ಅಲರ್ಜಿಯಂತಾಗಿದೆ. ಸರಕಾರಿ ಕಚೇರಿ ಸ್ಥಳಾಂತರ, ಉಪಕುಲಪತಿ ನೇಮಕ, ಹೆಚ್ಚುವರಿ ಅಡ್ವೋಕೇಟ್‌ ಜನರಲ್‌, ಕೆಪಿಸಿಸಿ ಸದಸ್ಯ ನೇಮಕ ಸೇರಿದಂತೆ ಪ್ರತಿಯೊಂದರಲ್ಲೂ ಈ ಭಾಗಕ್ಕೆ ಅನ್ಯಾಯ ಮಾಡಲಾಗುತ್ತಿದೆ.

ಇದನ್ನೂ ಓದಿ: ಖರೀದಿದಾರರ ಕಣ್ಣಲ್ಲಿ ನೀರು!: ಮುಂಬೈ, ಪೂನಾದಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ…

ಈ ಎಲ್ಲಾ ಬೆಳವಣಿಗೆ ನೋಡಿದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವುದು ಒಳಿತು ಎನ್ನುವ ಭಾವನೆ
ಬರುವಂತಾಗಿದೆ. ಇಲ್ಲಿನ ಶಿಕ್ಷಕರಿಗೆ ಕಳೆದ ಎಂಟು ತಿಂಗಳಿಂದ ವೇತನ ಇಲ್ಲದೆ ಹಣಕಾಸು ತೊಂದರೆ ಅನುಭವಿಸುತ್ತಿದ್ದಾರೆ. ಓರ್ವ
ಶಿಕ್ಷಕ ಮನೆ ನಡೆಸುವುದು ಕಷ್ಟವಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಯಾದರೂ ಹಣಕಾಸು ಹಾಗೂ ಕೆಲ ಪೊಲೀಸ್‌ ಅಧಿಕಾರಿಗಳು ಶಾಲೆ ಮುಚ್ಚುವುದಾಗಿ ಹೇಳುತ್ತಿದ್ದಾರೆ.
ನೀವು ಗೃಹ ಮಂತ್ರಿಯಾಗಿರುವ ಕಾರಣಕ್ಕೆ ಅಧಿಕಾರಿಗಳು ಶಾಲೆಯನ್ನು ವೆಂಟಿಲೇಟರ್‌ ಮೇಲೆ ಇಟ್ಟಿದ್ದಾರೆ. ಯಾವಾಗ ವೆಂಟಿಲೇಟರ್‌ ತೆಗೆಯುತ್ತಾರೆ ಗೊತ್ತಿಲ್ಲ. ನೀವು ಅಧಿಕಾರಕ್ಕೆ ಬಂದ ನಂತರದಿಂದ ಈ ಬಗ್ಗೆ ತಮ್ಮ ಗಮನಕ್ಕೆ ತರುತ್ತಿದ್ದೇನೆ. ಸಣ್ಣ ವಿಷಯವನ್ನು ಸರಿಪಡಿಸುವ ಕೆಲಸ ಆಗುತ್ತಿಲ್ಲ. ಅಲ್ಲಿನ ಸಿಬ್ಬಂದಿಯ ಕರುಣಾಜನಕ ಪರಿಸ್ಥಿತಿ ನಿಮಗೆ ಕಾಣಿಸುತ್ತಿಲ್ಲ. ಅಧಿಕಾರಿಗಳ ಈ ನಿರ್ಲಕ್ಷಕ್ಕೆ ಬೇಸತ್ತು ಹೋರಾಟ ಮಾಡುವುದು ಅನಿವಾರ್ಯ ಎಂದು ಬಸವರಾಜ ಹೊರಟ್ಟಿ ಅವರು ಖಾರವಾಗಿ
ಪತ್ರ ಬರೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next