ಕುಷ್ಟಗಿ: ಕುಷ್ಟಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ನಾನಲ್ಲ. ಆಕಸ್ಮಾತ್ ಬಿಜೆಪಿ ಹೈಕಮಾಂಡ್ ನನಗೆ ಟಿಕೆಟ್ ಕೊಟ್ಟರೆ ವಿಚಾರ ಮಾಡುವೆ ಎಂದು ಬಿಜೆಪಿ ತಾಲೂಕಾ ಮಂಡಲ ಅಧ್ಯಕ್ಷ ಬಸವರಾಜ ಹಳ್ಳೂರು ಹೇಳಿದ್ದಾರೆ.
ಇಲ್ಲಿನ ಹಳೆಯ ಪ್ರವಾಸಿ ಮಂದಿರದಲ್ಲಿ ವಿಜಯ ಸಂಕಲ್ಪ ಅಭಿಯಾನ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ನಮ್ಮ ಪಕ್ಷ ಕೇಡರ್ ಪಕ್ಷವಾಗಿದ್ದು, ಬೇರೆ ಪಕ್ಷದಂತೆ ಅರ್ಜಿ ಸ್ವೀಕರಿಸಿ ಟಿಕೆಟ್ ನೀಡುವ ಪಕ್ಷವಲ್ಲ. ಚುನಾವಣೆ ಇನ್ನೂ ಮೂರ್ನಾಲ್ಕು ತಿಂಗಳ ಇದೆ. ಪಕ್ಷದ ಹೈಕಮಾಂಡ್ ಕ್ಷೇತ್ರದ ಅಭ್ಯರ್ಥಿಯನ್ನು ನಿರ್ಧರಿಸಲಿದೆ ಎಂದರು.
ನಮ್ಮ ನಾಯಕರಾದ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಅವರನ್ನು ಈ ಬಾರಿ ಗೆಲ್ಲಿಸುವಂತೆ ಕುಷ್ಟಗಿಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅವರು ಕರೆ ಕೊಟ್ಟಿದ್ದರು. ಅವರಿಗೆ ಬಿಜೆಪಿ ಟಿಕೆಟ್ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು, ಅವರೇ ಬಿಜೆಪಿ ಅಭ್ಯರ್ಥಿ ಆಗುವುದು ಪಕ್ಕಾ ಆಗಿದೆ.
ದೊಡ್ಡನಗೌಡ ಪಾಟೀಲ ಅವರು ನನ್ನ ಪತ್ನಿ ಜಿ.ಪಂ. ಸದಸ್ಯರಾಗಲು ಬೆಂಬಲಿಸಿದ್ದರು. ಸದ್ಯ ಪಕ್ಷದ ಮಂಡಲ ಅಧ್ಯಕ್ಷರಾಗಿದ್ದು ಯಾವೂದೇ ಕಾರಣಕ್ಕೂ ಜನಾರ್ದನ ರೆಡ್ಡಿ ಪಕ್ಷಕ್ಕೆ ಹೋಗಲಾರೆ. ಬಿಜೆಪಿ ದೊಡ್ಡನಗೌಡ ಪಾಟೀಲ ಅವರ ಪರವಾಗಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುವೆ ಎಂದು ಸ್ಪಷ್ಟಪಡಿಸಿದ ಅವರು ಜನಾರ್ದನ ರೆಡ್ಡಿ ಪಕ್ಷ KRPP ಸೇರುವ ಊಹಾಪೋಹದ ಬಗ್ಗೆ ತೆರೆ ಎಳೆದರು. ವಿಜಯ ಸಂಕಲ್ಪ ಅಭಿಯಾನದ ಜಿಲ್ಲಾ ಸಮಿತಿ ಸದಸ್ಯ ಅಮೀನುದ್ದೀನ ಮುಲ್ಲಾ, ಸಂಚಾಲಕಿ ಭಾರತೀ ನೀರಗೇರಿ, ವೀರಣ್ಣ ಸೊಬರದ, ದೊಡ್ಡಬಸವ ಸುಂಕದ ಮತ್ತೀತರಿದ್ದರು.
ಇದನ್ನೂ ಓದಿ: ಮತ ಮಾರಾಟಕ್ಕೆ ಇಲ್ಲ ಎಂಬ ತತ್ವಕ್ಕೆ ಮತದಾರರು ಬದ್ದರಾಗಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ