Advertisement

ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ: ಸಿಎಂ ಬೊಮ್ಮಾಯಿ

09:15 PM Sep 23, 2022 | Team Udayavani |

ಬೆಂಗಳೂರು: ಕಾಂಗ್ರೆಸ್‌ ಪಕ್ಷದವರದ್ದು ಹೆಜ್ಜೆ ಹೆಜ್ಜೆಗೂ ಸ್ಕ್ಯಾಮ್‌ಗಳಿವೆ. ಕಾಂಗ್ರೆಸ್ಸಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್‌ನವರ ಭ್ರಷ್ಟಾಚಾರದ ಬಗ್ಗೆ ಪಕ್ಷದ ವತಿಯಿಂದ ಪುಸ್ತಕ ಬಿಡುಗಡೆ ಮಾಡಿದ್ದೆವು. ಅವರು ಭ್ರಷ್ಟರಾಗಿದ್ದುಕೊಂಡು ಅಭಿಯಾನ ಮಾಡುತ್ತಾರಂತೆ. ಯಾವ ಅಭಿಯಾನವನ್ನಾದರೂ ಮಾಡಲಿ, ಕೊನೆಗೆ ಸತ್ಯಕ್ಕೆ ಜಯ ಸಿಗಲಿದೆ ಎಂದು ಹೇಳಿದರು.

ಒಂದು ಸಣ್ಣ ಪುರಾವೆ ಇಲ್ಲದೆ ಮಾತನಾಡುವ ಈ ಪ್ರವೃತ್ತಿ ಬಹಳ ದಿನ ನಡೆಯುವುದಿಲ್ಲ. ಗುತ್ತಿಗೆದಾರರ ಸಂಘದ ವಿಷಯದಲ್ಲಿ ಈಗಾಗಲೇ ಉತ್ತರ ನೀಡಲಾಗಿದೆ. ಒಂದು ವಿಚಾರವನ್ನು ಪದೇ ಪದೆ ಹೇಳಿದರೆ ಅದು ಸತ್ಯವಾಗುವುದು ಎಂದು ಕಾಂಗ್ರೆಸ್‌ ತಿಳಿದುಕೊಂಡಂತಿದೆ. ಆ ಕಾಲ ಹೋಗಿದೆ. ಜನಕ್ಕೆ ಸತ್ಯ ಏನೆಂದು ತಿಳಿದಿದೆ.

ಈಗಲೂ ಗುತ್ತಿಗೆದಾರರ ಸಂಘದವರು ದೂರು ಕೊಟ್ಟರೆ ಅದರ ಬಗ್ಗೆ ತನಿಖೆಗೆ ಆದೇಶಿಸಲಾಗುವುದು. ಲೋಕಾಯುಕ್ತಕ್ಕೆ ಪ್ರಕರಣ ವಹಿಸಲಾಗುವುದು ಎಂದು ಹೇಳಿದರು.

ಚರ್ಚೆ ಮಾಡುವ ಮೂಲಕ ಅದೇನು ಸರಕಿದೆ ಹೊರಗೆ ಬರಬೇಕು. ಸುಮ್ಮನೆ ಹಿಟ್‌ ಅಂಡ್‌ ರನ್‌ ಮಾಡುವುದಲ್ಲ. 40 ಪರ್ಸೆಂಟ್‌ ಯಾರು ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಬೇಕು. ನಾವು ಕೇಳುವುದಕ್ಕೆ ತಯಾರಿದ್ದೇವೆ. ಈ ವಿಷಯವನ್ನು ಅವರು ಮೊದಲೇ ತೆಗೆದುಕೊಳ್ಳಬಹುದಾಗಿತ್ತು. ಕೊನೆಗೆ ಯಾಕೆ ತೆಗೆದುಕೊಂಡರು ಎಂದು ಪ್ರಶ್ನಿಸಿದರು.

Advertisement

ಗುತ್ತಿಗೆದಾರರ ಸಂಘವು ಕಾಂಗ್ರೆಸ್‌ ಪ್ರಾಯೋಜಿತ ಸಂಘ. ಹೀಗಾಗಿ ಕಾಂಗ್ರೆಸ್‌ಗೆ ಇದರಲ್ಲಿ ಹುರುಳಿಲ್ಲ ಎಂದು ಗೊತ್ತಿದೆ. ಈ ವಿಚಾರದಲ್ಲಿ ನಾವು ಮುಕ್ತವಾಗಿದ್ದೇವೆ. ದೂರು ಬಂದರೆ ಖಂಡಿತ ತನಿಖೆ ಮಾಡಿಸುತ್ತೇವೆ. ದಯವಿಟ್ಟು ದೂರು ಕೊಡಿ. ಕೆಂಪಣ್ಣನವರು ಗುತ್ತಿಗೆದಾರರ ಸಂಘದ ಅಧ್ಯಕ್ಷರು. ಆ ಸಂಘದ ಬಗ್ಗೆಯೇ ಬಹಳಷ್ಟು ಸಂಶಯಗಳಿವೆ ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದ್ದು ಅವರೂ ಆದಷ್ಟು ಬೇಗ ಮಾಡೋಣ ಎಂದು ಭರವಸೆ ನೀಡಿದ್ದಾರೆ. ಸದನ ಮುಕ್ತಾಯವಾಗಲು ಕಾಯುತ್ತಿದ್ದೆವು. ನನ್ನನ್ನು ಕರೆಸಿ ಮಾತನಾಡಿದರೆ ಆದಷ್ಟು ಬೇಗನೇ ಪ್ರಕ್ರಿಯೆ ಪ್ರಾರಂಭ ಮಾಡಲಾಗುವುದು. ಈ ಬಗ್ಗೆ ವರಿಷ್ಠರ ಅನುಮತಿ ಪಡೆದು ವಿಸ್ತರಣೆ ಮಾಡಲಾಗುವುದು.
-ಬಸವರಾಜ ಬೊಮ್ಮಾಯಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next