ರಾಮದುರ್ಗ: ಈಗಿನ ಸಿಎಂ ಬಸವರಾಜ ಬೊಮ್ಮಾಯಿ ದುಡ್ಡು ಕೊಟ್ಟು ಆರ್‌ಎಸ್‌ಎಸ್ ಮೂಲಕ ಸಿಎಂ ಆದವರು. ಇಂತಹ ಅಪಾಯಿಂಟೆಡ್ ಮುಖ್ಯಮಂತ್ರಿಯಿಂದ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? ಕಣ್ಣು ಕಾಣದ ದಪ್ಪ ಚರ್ಮದ ಸರ್ಕಾರ ಇದಾಗಿದ್ದು, ಇಂತಹ ಭ್ರಷ್ಟ ಹಾಗೂ ಜನವಿರೋಧಿ ಸರ್ಕಾರವನ್ನು ಕಿತ್ತಾಕಲು ಜನ ಸಿದ್ಧರಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ತಾಲೂಕಿನ ಅವರಾದಿ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಶಾಸಕ ಡಾ|ಮಹಾದೇವಪ್ಪ ಪಟ್ಟಣ ಹಾಗೂ ಶಾರದಮ್ಮ ಪಟ್ಟಣ ಸ್ಮರಾಣಾರ್ಥ ನಿರ್ಮಿಸಿದ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣಗೊಳಿಸಿ ಮಾತನಾಡಿದರು.
ಈ ಭಾಗದಲ್ಲಿ ಪ್ರವಾಹಕ್ಕೆ ತುತ್ತಾಗಿ ಮನೆ-ಮಠ ಕಳೆದುಕೊಂಡ ಜನತೆಗೆ ಸೂರು ಕಲ್ಪಿಸದ ದರಿದ್ರ ಸರ್ಕಾರ ಇದಾಗಿದೆ. ಸದನದಲ್ಲಿ 3 ಬಾರಿ ಈ ವಿಚಾರ ಚರ್ಚೆ ನಡೆಸಿದರೂ ಇದುವರೆಗೂ ಮನೆ ನೀಡುವ ಕೆಲಸ ಮಾಡಲಿಲ್ಲ. ಪದೇಪದೆ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವಂತೆ ಅಂದಿನ ಸಿಎಂ ಯಡಿಯೂರಪ್ಪ ಹಾಗೂ ಈಗಿನ ಸಿಎಂ ಬಸವರಾಜ ಬೊಮ್ಮಾಯಿಗೆ ಹೇಳಿದರೂ ಯಾವುದನ್ನೂ ಮಾಡದೆ ಅಸಡ್ಡೆ ತೋರಿಸುತ್ತಾ ಬರುತ್ತಿದ್ದಾರೆ. ಇವರಿಂದ ಯಾವುದೇ ಕೆಲಸ ಮಾಡಲು ಆಗದು. ಜನರು ಇನ್ನೊಂದು ವರ್ಷ ಕಾಯಿರಿ. ನಮ್ಮ ಕಾಂಗ್ರೆಸ್ ಸರ್ಕಾರ ಬಂದ ನಂತರ ಈ ಸಮಸ್ಯೆಗಳನ್ನು ಬಗೆಹರಿಸುವದಾಗಿ ಭರವಸೆ ನೀಡಿದರು.
ಸೋಲಿಸಲು ಮನಸ್ಸು ಹೇಗೆ ಬಂತು?: ರಾಮದುರ್ಗ ತಾಲೂಕಿನಲ್ಲಿ ನೀರಾವರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ವೀರಭದ್ರೇಶ್ವರ ಹಾಗೂ ಸಾಲಾಪೂರ ಬಸವೇಶ್ವರ ಏತ ನೀರಾವರಿ ಯೋಜನೆಗೆ 1100 ಕೋಟಿ ಸೇರಿದಂತೆ 2500 ಕೋಟಿ ಅನುದಾನ ನೀಡಿದ್ದೇನೆ. ಇಷ್ಟೆಲ್ಲಾ ಅಭಿವೃದ್ಧಿ ಮಾಡಿದ ಅಶೋಕ ಪಟ್ಟಣ ಅವರನ್ನು ಸೋಲಿಸಲು ಮನಸ್ಸಾದರೂ ಹೇಗೆ ಬಂತು? ಬರುವ 2023ರ ಚುನಾವಣೆಯಲ್ಲಿ ಎಲ್ಲರೂ ಅವರನ್ನು ಗೆಲ್ಲಿಸಬೇಕು ಎಂದರು. ಹೆಬ್ಟಾಳ ಶಾಸಕ ಭೈರತಿ ಸುರೇಶ ಇದ್ದರು.
ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ: ನಾಡಿನ ಜನ ಹಸಿವಿನಿಂದ ಬಳಲಬಾರದೆಂದು ಯಾವುದೇ ಜಾತಿ, ಮತ, ಪಂಥ ಎನ್ನದೇ ರಾಜ್ಯದ 4.5 ಕೋಟಿ ಜನರಿಗೆ 7 ಕೆಜಿ ಅಕ್ಕಿ ನೀಡಿದರೆ ಈಗಿನ ಸರ್ಕಾರ 5 ಕೆಜಿಗೆ ತಂದು ನಿಲ್ಲಿಸಿದೆ. ಮುಂದೆ ಇದನ್ನು ನಿಲ್ಲಿಸಿದರೂ ಆಶ್ಚರ್ಯವಿಲ್ಲ. ನನ್ನ ಅವ ಧಿಯಲ್ಲಿ ತಂದ ಅನೇಕ ಯೋಜನೆಗಳಿಗೆ ಕೊಡಲು ಹಣವಿಲ್ಲದೆ ನಿಲ್ಲಿಸುವ ಕೆಲಸ ಮಾಡಿದ್ದಾರೆ. 2023ಕ್ಕೆ ನಮ್ಮ ಸರ್ಕಾರ ಬಂದಿದ್ದೇಯಾದರೆ ಪ್ರತಿಯೊಬ್ಬರಿಗೂ ಉಚಿತವಾಗಿ 10 ಕೆಜಿ ಅಕ್ಕಿ ನೀಡಲಾಗುವುದು ಎಂದರು.