Advertisement

ಎಲ್ಲವನ್ನೂ  ಸರಿದೂಗಿಸಿಕೊಂಡು ಹೋಗುವ ಜಾಣ್ಮೆ ಅಗತ್ಯ

11:33 PM Jul 27, 2021 | Team Udayavani |

ನಾಯಕತ್ವ ಬದಲಾವಣೆಯ ಪ್ರಹಸನದಲ್ಲಿ ಬಿ.ಎಸ್‌. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಎಲ್ಲ ಜಿಜ್ಞಾಸೆಗಳಿಗೆ ತೆರೆ ಬಿದ್ದಿದ್ದು, ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಈ ಮೂಲಕ ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಸಮುದಾಯದ 9ನೇ ಹಾಗೂ ಒಟ್ಟಾರೆ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಕಾರ್ಯಾಭಾರ ಆರಂಭಿಸಲಿದ್ದಾರೆ.

Advertisement

ಪಕ್ಷದ ನಿಯಮದಂತೆ ಪದವಿ ತ್ಯಾಗ ಮಾಡಿರುವ ಯಡಿಯೂರಪ್ಪ ತಮ್ಮ ಉತ್ತರಾಧಿಕಾರಿ ಸ್ಥಾನಕ್ಕೆ ಅವರ ಅತ್ಯಾಪ್ತ ಹಾಗೂ ನಂಬಿಕಸ್ಥ ಬಸವರಾಜ ಬೊಮ್ಮಾಯಿ ಅವರನ್ನು ತಂದಿದ್ದಾರೆ. ತೊಂಭತ್ತರ ದಶಕದಿಂದ ಸಕ್ರಿಯ ರಾಜಕಾರಣದಲ್ಲಿರುವ ಬೊಮ್ಮಾಯಿ ಅವರು ಹಿಂದಿನ ಬಿಜೆಪಿ ಸರಕಾರದಲ್ಲಿ ಸತತ ಐದು ವರ್ಷಗಳ ಕಾಲ ಜಲಸಂಪನ್ಮೂಲ ಖಾತೆ ಹಾಗೂ ಗೃಹ ಸಚಿವರಾಗಿ ಕೆಲಸ ಮಾಡಿರುವ ಬೊಮ್ಮಾಯಿ ಸಾಕಷ್ಟು ಆಡಳಿತ ಅನುಭವ ಹೊಂದಿದ್ದಾರೆ.

ಆದರೆ, ಪ್ರಸ್ತುತ ರಾಜಕೀಯ ವಿದ್ಯಮಾನಗಳು, ಪಕ್ಷದಲ್ಲಿನ ಬೆಳವಣಿಗೆಗಳು, ಕೊರೊನಾ, ಪ್ರವಾಹ, ರಾಜ್ಯದ ಆರ್ಥಿಕ ಸ್ಥಿತಿ ಇವೆಲ್ಲ ವುಗಳ ಹಿನ್ನಲೆಯಲ್ಲಿ ನೂತನ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದೆ ಸಾಕಷ್ಟು ಸವಾಲುಗಳಿವೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರೂ ಆಡಳಿತದ ನಿಯಂತ್ರಣ ಯಡಿಯೂರಪ್ಪ ಅವರ ಬಳಿಯೇ ಇರಲಿದೆ ಎಂಬ ಮಾತುಗಳು ಪ್ರಚಲಿತಕ್ಕೆ ಬರಲಾರಂಭಿಸಿವೆ. ಇದನ್ನು ಸರಿದೂಗಿಸುವ ಸೂಕ್ಷ್ಮತೆ ಮತ್ತು ಜಾಣ್ಮೆ ತೋರುವ ಅನಿವಾರ್ಯವೂ ಬೊಮ್ಮಾಯಿ ಮುಂದಿದೆ.

ಯಡಿಯೂರಪ್ಪ ಸಂಪುಟದಲ್ಲಿದ್ದ ಹಿರಿಯ ಸಚಿವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಪಕ್ಷದ ನಿಲುವು ಇದೆ. ಹಾಗಾಗಿ, ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಕಿರಿಯರು, ಅನನುಭವಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಇದರ ನಡುವೆ, ಸಚಿವ ಸಂಪುಟ ಹಾಗೂ ಉಪಮುಖ್ಯಮಂತ್ರಿಗಳ ಆಯ್ಕೆಯಲ್ಲಿ ಜಾತಿ ಲೆಕ್ಕಾಚಾರ ನೋಡಿಕೊಳ್ಳಬೇಕಾಗುತ್ತದೆ. “ವಲಸಿಗ’ ಶಾಸಕರಿಗೆ “ನ್ಯಾಯ’ ಕೊಡಿಸಬೇಕಾದ ಇಕ್ಕಟ್ಟು ಸಹ ಅವರ ಮುಂದಿದೆ.

ಬಿಎಸ್‌ವೈ ಬದಲಾವಣೆಗೆ ಮಠಾಧೀಶರ ವಿರೋಧವಿತ್ತು. ಅವರ ಅವಧಿ ಮುಗಿದ ಬಳಿಕ ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಮಾಡಬೇಕು ಎಂಬ ಬೇಡಿಕೆ ವರ್ಷದ ಹಿಂದೆಯೇ ಕೇಳಿ ಬಂದಿತ್ತು. ಮುಂದಿನ ದಿನಗಳಲ್ಲಿ ಈ  ವಿಷಯಗಳು ಯಾವ ತಿರುವು ಪಡೆದು ಕೊಳ್ಳುತ್ತವೆ, ಇನ್ನೆಂತಹ ಬೇಡಿಕೆಗಳು ಮತ್ತು ಸವಾಲುಗಳು ನೂತನ ಮುಖ್ಯಮಂತ್ರಿ ಎದುರಿಸಬೇಕಾಗಬಹುದು ಎಂಬುದಕ್ಕೆ ಮುಂದಿನ ದಿನಗಳಲ್ಲೇ ಉತ್ತರ ಸಿಗಲಿದೆ. ಉತ್ತರ ಕರ್ನಾಟಕಕ್ಕೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿರುವುದರಿಂದ ಪ್ರಾದೇಶಿಕ ಸಮತೋಲನವನ್ನು ಅವರು ಕಾಯ್ದುಕೊಳ್ಳಬೇಕಿದೆ. ಮೂಲತಃ ಜನತಾಪರಿವಾರದ ಹಿನ್ನೆಲೆಯ ಬಸವರಾಜ ಬೊಮ್ಮಾಯಿ ತಮ್ಮ ತಂದೆ ಎಸ್‌.ಆರ್‌. ಬೊಮ್ಮಾಯಿ ಅವರ ಗರಡಿಯಲ್ಲಿ ಪಳಗಿದವರು. ಜೆ.ಎಚ್‌. ಪಟೇಲ್‌ ಅವರಿಗೆ ರಾಜಕೀಯ ಕಾರ್ಯದರ್ಶಿ ಆಗಿದ್ದರು. ಹೀಗಾಗಿ ರಾಜಕೀಯ ಮುತ್ಸದ್ದಿತನ ಬೊಮ್ಮಾಯಿಯವರಿಗೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next