Advertisement

ಭೋವಿ ಸಮಾಜಕ್ಕೆ ಶೀಘ್ರ ಜಮೀನು ಮಂಜೂರು: ಸಿಎಂ ಬೊಮ್ಮಾಯಿ ಭರವಸೆ

08:01 PM Sep 18, 2022 | Team Udayavani |

ಬೆಂಗಳೂರು: ಭೋವಿ ಸಮುದಾಯದ ಮತ್ತಷ್ಟು ಅಭಿವೃದ್ಧಿಗಾಗಿ ಭೂಮಿ ನೀಡಬೇಕೆಂಬ ಬೇಡಿಕೆಯನ್ನು ಪರಿಗಣಿಸಿ ಸರ್ಕಾರ ನೆರವು ನೀಡಲಿದೆ. ಇಂತಹ ಸಂಘಗಳಿಗೆ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಆಸ್ಟಿನ್‌ಟೌನ್‌ನ ಜಸ್ಮಾದೇವಿ ಮಂದಿರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘದ “ಸುವರ್ಣ ಮಹೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿರು.

ಸಂಘದ ಅಧ್ಯಕ್ಷ ರಘು ಅವರು ದೊಡ್ಡ ಕೆಲಸಗಳನ್ನು ಮಾಡಲು ಭೂಮಿಯನ್ನು ಕೇಳಿದ್ದಾರೆ. ಅದಕ್ಕೆ ಕಂದಾಯ ಸಚಿವರು ಒಪ್ಪಿಗೆ ಕೊಟ್ಟಿದ್ದಾರೆ. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಇದಕ್ಕೆ ಆಶೀರ್ವಾದ ಮಾಡಿದ್ದಾರೆ. ಮುಂದೆ ನನ್ನದೇನೂ ಹೆಚ್ಚಿನ ಕೆಲಸವಿಲ್ಲ. ಆದಷ್ಟು ಬೇಗ ನಿಮ್ಮ ಮನೋ ಇಚ್ಛೆ ಕಾಮನೆಗಳು ಪೂರ್ತಿಯಾಗಲಿ ಎಂದು ಹಾರೈಸಿದರು.

ಕಾನೂನು ಅಡಚಣೆಗೆ ಕ್ರಮ:
ಭೋವಿ ಸಮುದಾಯಕ್ಕೆ ಇರುವ ಕಾನೂನು ಅಡಚಣೆಗಳನ್ನು ದೂರ ಮಾಡಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಡಾ.ಬಿ.ಆರ್‌.ಅಂಬೇಡ್ಕರ್‌ ಹೆಸರಿನಲ್ಲಿ ಈ ವರ್ಷ 100 ಹೊಸ ಹಾಸ್ಟೆಲ್‌ಗ‌ಳನ್ನು ನಿರ್ಮಿಸುತ್ತೇವೆ.

ಸಾವಿರ ಮಕ್ಕಳಿಗೆ ಉಳಿದುಕೊಳ್ಳಲು ಸಹಕಾರಿಯಾಗುವ 5 ಮೆಘಾ ಹಾಸ್ಟೆಲ್‌ಗ‌ಳ ನಿರ್ಮಿಸಲು ಕ್ರಮ ಕೈಗೊಂಡಿದ್ದೇವೆ. ಈ ಸಮುದಾಯದ ವಿದ್ಯಾವಂತ ಮಕ್ಕಳಿಗೆ ಸ್ಕಾಲರ್‌ಶಿಪ್‌ ಕೊಡುತ್ತಿದ್ದೇವೆ. ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಶೇ.75 ವಿದ್ಯುತ್‌ ಅನ್ನು ಪುಕ್ಕಟ್ಟೆಯಾಗಿ ಕೊಡುವ ಯೋಜನೆ ಮಾಡುತ್ತಿದ್ದೇವೆ. ಈ ಯೋಜನೆಯನ್ನು ಇನ್ನಷ್ಟು ಸರಳೀಕರಣಗೊಳಿಸಿ ಎಲ್ಲರಿಗೂ ಇದರ ಫ‌ಲಾನುಭವ ಮುಟ್ಟಿಸುವ ಕೆಲಸ ಶೀಘ್ರದಲ್ಲೇ ಆಗಲಿದೆ.

Advertisement

ವಿದೇಶಕ್ಕೆ ಹೋಗುವ ಭೋವಿ ಸಮುದಾಯದ ವಿದ್ಯಾರ್ಥಿಗಳಿಗೂ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕಲ್ಲು ಒಡೆಯುವುದರಿಂದ ಹಿಡಿದು ವಿವಿಧ ವೃತ್ತಿ ಮಾಡುತ್ತಿರುವ ಎಲ್ಲರಿಗೂ 50 ಸಾವಿರ ರೂ. ಧನ ಸಹಾಯ ಮಾಡಲು ಕ್ರಮ ಕೈಗೊಂಡಿದ್ದೇವೆ ಎಂದರು.

ಗಟ್ಟಿತನ ಭೋವಿ ಸಮಾಜದ ಗುಣ:
ಭೋವಿ ಸಮಾಜ ಬಹಳ ಕಷ್ಟಪಟ್ಟು ದುಡಿಯುವ ಸಮಾಜವಾಗಿದೆ. ಅದಕ್ಕೆ ಬಹಳಷ್ಟು ಗಟ್ಟಿತನವೂ ಬೇಕು. ಆ ಗಟ್ಟಿತನ ಈ ಸಮಾಜದ ಮೂಲ ಗುಣ. 21ನೇ ಶತಮಾನ ಜ್ಞಾನದ ಶತಮಾನವಾಗಿದೆ. ವಿದ್ಯೆ ಪಡೆದುಕೊಂಡರೆ ಎಲ್ಲ ಕ್ಷೇತ್ರದಲ್ಲೂ ಮುಂದೆ ಬರಬಹುದು. ಈ ಸಮಾಜದ ಮಕ್ಕಳಲ್ಲಿ ಜ್ಞಾನದ ಭಂಡಾರ ಇದೆ. ಸ್ವಲ್ಪ ಅವಕಾಶ ಕೊಟ್ಟರೆ ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಇರುತ್ತಾರೆ. ಬಹಳಷ್ಟು ಮಕ್ಕಳಿಗೆ ಬುದ್ಧಿಯಿದ್ದರೂ ಅದನ್ನು ಅಭಿವ್ಯಕ್ತಿಪಡಿಸುವ ಶಕ್ತಿ ಇರುವುದಿಲ್ಲ. ಹೀಗಾಗಿ ವ್ಯಕ್ತಿ ವಿಕಸನ ಮಾಡುವ ಮೂಲಕ ಆತ್ಮವಿಶ್ವಾಸ ತುಂಬುವಂತಹ ಕಾರ್ಯಕ್ರಮ ಮಾಡಿದರೆ ಸಾಕಷ್ಟು ಮಕ್ಕಳು ಪ್ರತಿಭೆ ತೋರಿಸಬಹುದು ಎಂದರು.

ಕಂದಾಯ ಸಚಿವ ಆರ್‌. ಅಶೋಕ್‌ ಮಾತನಾಡಿ, ಭೋವಿ ಸಮುದಾಯಕ್ಕೆ ಜಾಗ ನೀಡುವಂತೆ ಕೋರಿದ್ದಾರೆ. ಸೂಕ್ತ ಜಾಗವನ್ನು ಹುಡುಕಿದರೆ ನಮ್ಮ ಸರ್ಕಾರವು ಅದಕ್ಕೆ ಬೇಕಾದ ನೆರವನ್ನು ನೀಡಲಿದೆ ಎಂದರು.

ಚಿತ್ರದುರ್ಗ ಭೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಸರ್ಕಾರವು ಅನ್ನ ಭಾಗ್ಯ, ಶಾದಿ ಭಾಗ್ಯ ಎಂದು ಹಲವು ಭಾಗ್ಯಗಳನ್ನು ಕೊಡುತ್ತಿದೆ. ಇದೇ ಮಾದರಿಯಲ್ಲಿ ಭೋವಿ ಸಮಾಜಕ್ಕೆ ಉದ್ಯೋಗ ಭಾಗ್ಯದ ಅವಕಾಶ ಕಲ್ಪಿಸಿದರೆ ಉತ್ತಮ ಎಂದು ಹೇಳಿದರು.

ಭೋವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್‌.ರಘು, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಸ್ಮಾದೇವಿ ಪುರಸ್ಕಾರ
ಕಾರ್ಯಕ್ರಮದಲ್ಲಿ 13 ಮಂದಿ ಸಾಧಕರಿಗೆ ಜಸ್ಮಾದೇವಿ ಪುರಸ್ಕಾರ ಹಾಗೂ ಹೆಚ್ಚು ಅಂಕ ಪಡೆದ ಭೋವಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next