Advertisement

ಜುಲೈ ಅಂತ್ಯದೊಳಗೆ ಉಡುಪಿ ಜಿಲ್ಲೆಯ ಎಲ್ಲ ಶಾಲಾ ಮಕ್ಕಳ ಆರೋಗ್ಯ ತಪಾಸಣೆ : ಸಚಿವ ಬೊಮ್ಮಾಯಿ

08:30 PM Jun 21, 2021 | Team Udayavani |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ 3ನೇ ಅಲೆಯನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಜುಲೈ ಅಂತ್ಯದೊಳಗೆ ಜಿಲ್ಲೆಯ ಎಲ್ಲ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.

Advertisement

ಅವರು ಸೋಮವಾರ ವೀಡಿಯೋ ಸಂವಾದದ ಮೂಲಕ ಜಿಲ್ಲೆಯ ಕೋವಿಡ್‌ ಸ್ಥಿತಿಗತಿ ಕುರಿತು ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಮಕ್ಕಳಿಗೆ ಕೋವಿಡ್‌ 3ನೇ ಅಲೆಯಿಂದ ಯಾವುದೇ ತೊಂದರೆಯಾಗದ ಕುರಿತಂತೆ ತತ್‌ಕ್ಷಣದಿಂದಲೇ ಜಿಲ್ಲೆಯ ಎಲ್ಲ ಶಾಲಾ ವ್ಯಾಪ್ತಿಯಲ್ಲಿನ ಮಕ್ಕಳ ವಿವರಗಳನ್ನು ಸಂಗ್ರಹಿಸಿ, ಅವರ ವ್ಯಾಸಾಂಗ ಮಾಡುತ್ತಿರುವ ಶಾಲೆಯಲ್ಲಿಯೇ ಅವರ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿ. ತಪಾಸಣಾ ಸಂದರ್ಭದಲ್ಲಿ ಒಬ್ಬರು ಎಂ.ಬಿ.ಬಿಎಸ್‌ ವೈದ್ಯರು , ಆಯುಷ್‌ ವೈದ್ಯರು ಮತ್ತು ಮಕ್ಕಳ ತಜ್ಞರನ್ನು ತಂಡವಾಗಿ ನಿಯೋಜಿಸಿ, ಪ್ರತೀ ಗ್ರಾಮಗಳಲ್ಲಿನ ಶಾಲೆಗಳಿಗೆ ಭೇಟಿ ನೀಡಲು ಯೋಜನೆ ರೂಪಿಸಿ ಎಂದರು.

ತಪಾಸಣೆ ಸಂದರ್ಭದಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯವಿರುವ ಮಕ್ಕಳಿಗೆ ಸ್ಥಳದಲ್ಲಿ ಉಚಿತವಾಗಿ ಅಗತ್ಯವಿರುವ ಔಷಧಗಳನ್ನು ನೀಡಲು ಕ್ರಮ ಕೈಗೊಳ್ಳಿ. ಕಾರ್ಯಕ್ರಮ ಆಯೋಜನೆ ಕುರಿತಂತೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಮಕ್ಕಳ ಪೋಷಕರಿಗೆ ಸಾಕಷ್ಟು ಮುಂಚಿತವಾಗಿ ಮಾಹಿತಿ ನೀಡಿ. ಮಕ್ಕಳು ಪೋಷಕರೊಂದಿಗೆ ಆರೋಗ್ಯ ತಪಾಸಣೆಗೆ ಬರುವಂತೆ ಕ್ರಮ ಕೈಗೊಳ್ಳಿ. ತಪಾಸಣೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಸೇರಿದಂತೆ ಎಲ್ಲ ಅಗತ್ಯ ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಸಚಿವ ಬೊಮ್ಮಾಯಿ ಸೂಚಿಸಿದರು.

ಇದನ್ನೂ ಓದಿ :ರಿಲಯನ್ಸ್‌ ಕಂಪನಿಗಳ ‘ವಂಚನೆ’ : ಕರ್ನಾಟಕ ಬ್ಯಾಂಕ್ ಹೇಳಿದ್ದೇನು..?

Advertisement

ಕಾರ್ಯಕ್ರಮಕ್ಕೆ ಅಗತ್ಯವಿರುವ ವೈದ್ಯರು ಮತ್ತು ಸಹಾಯಕ ಸಿಬಂದಿ, ಪ್ರತೀ ದಿನ ಭೇಟಿ ನೀಡಬಹುದಾದ ಗ್ರಾಮಗಳ ವಿವರ ಸೇರಿದಂತೆ ಕಾರ್ಯಕ್ರಮದ ಅನುಷ್ಠಾನಕ್ಕೆ ಅಗತ್ಯವಿರುವ ಸಮಗ್ರ ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚಿಸಿದರು.
ಶಾಸಕರಾದ ಸುನೀಲ್‌ ಕುಮಾರ್‌, ಲಾಲಾಜಿ ಆರ್‌ ಮೆಂಡನ್‌, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್‌, ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಎಸ್ಪಿ ವಿಷ್ಣುವರ್ಧನ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್‌ ಡಾ| ಮಧುಸೂದನ್‌ ನಾಯಕ್‌, ಡಿಎಚ್‌ಒ ಡಾ| ನಾಗಭೂಷಣ ಉಡುಪ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next