Advertisement

ಕಾಂಗ್ರೆಸ್‌ ಎಂದರೆ ಸುಳ್ಳು, ಭ್ರಷ್ಟಾಚಾರದ ಗಂಗೋತ್ರಿ: ಸಿಎಂ ಟೀಕೆ

09:40 AM Nov 08, 2022 | Team Udayavani |

ಉಡುಪಿ : ಐವತ್ತು ವರ್ಷಗಳಲ್ಲಿ ಕಾಂಗ್ರೆಸ್‌ ಭ್ರಷ್ಟಾಚಾರವನ್ನೇ ಮಾಡಿರುವುದು. ಭ್ರಷ್ಟಾಚಾರದ ಗಂಗೋತ್ರಿ ಈ ಕಾಂಗ್ರೆಸ್‌. ಕಾಂಗ್ರೆಸ್‌ ಎಂದರೆ ಸುಳ್ಳು. ಕಾಂಗ್ರೆಸ್‌ ನಾಯಕರು ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ಧಾಳಿ ನಡೆಸಿದರು.

Advertisement

ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಅವರು ಆದಿಉಡುಪಿ ಹೆಲಿಪ್ಯಾಡ್‌ನ‌ಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ತನಿಖೆ ನಡೆಯುತ್ತಿದೆ ಎಂದರು.

ಸಿದ್ದರಾಮಯ್ಯ ಭ್ರಮೆಯಲ್ಲಿ
ಕಾಂಗ್ರೆಸನ್ನು ಜನ ಗೆಲ್ಲಿಸುತ್ತಾರೆ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಅವರು ಐದು ವರ್ಷ ಪೂರ್ಣ ಆಡಳಿತ ನಡೆಸಿ, ವಿವಿಧ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದರೂ ಕಳೆದ ಚುನಾವಣೆಯಲ್ಲಿ 77 ಸೀಟಿಗೆ ಬಂದು ನಿಂತಿದ್ದರು. ಅಧಿಕಾರ ನಡೆಸಿ, ಕಾರ್ಯಕ್ರಮ ನೀಡಿದಾಗಲೇ ಜನ ತಿರಸ್ಕರಿಸಿದ್ದರು. ಅವರ ಒಡೆದು ಆಳುವ ನೀತಿ, ಸಮಾಜ ಒಡೆಯುವ ನೀತಿ, ರಾಜ್ಯವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿರುವುದನ್ನು ಜನ ಮರೆತಿಲ್ಲ. ಸಿದ್ದರಾಮಯ್ಯ ಏನೇ ಹೇಳಿದರೂ ಅದು ಆಗುವುದಿಲ್ಲ. ಕಾಂಗ್ರೆಸ್‌ ಮತ್ತೂಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದಿದ್ದರು ಅದೂ ಆಗಿಲ್ಲ.

ಯಡಿಯೂರಪ್ಪ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಾರರು ಎಂದಿ ದ್ದರೂ ಇಬ್ಬರೂ ಸಿಎಂಗಳಾದರು. ಹೀಗೆ ಸಿದ್ದರಾಮಯ್ಯ ಏನೇ ಹೇಳಿದರೂ ಅದು ಆಗುವುದಿಲ್ಲ ಎಂದರು.
ಎರಡು ದಿಕ್ಕಿನಿಂದ ರಥಯಾತ್ರೆ ಜನಸಂಕಲ್ಪ ಯಾತ್ರೆ ಕಲ್ಯಾಣ ಕರ್ನಾಟಕದಲ್ಲಿ ಪೂರ್ಣಗೊಂಡಿದ್ದು, ಕರಾವಳಿಯಲ್ಲಿ ಎರಡನೇ ಸುತ್ತಿನ ಯಾತ್ರೆ ಶುರುವಾಗಿದೆ. ಪ್ರತೀ ಕ್ಷೇತ್ರಕ್ಕೂ ಹೋಗಿ ಸಂಘಟನೆ ಮಾಡುತ್ತಿದ್ದೇವೆ. ಕರಾವಳಿಯ ಅನಂತರ ಗದಗ, ಹಾವೇರಿ, ಬೆಳಗಾವಿಗೆ ಹೋಗುತ್ತೇವೆ.

ಎಲ್ಲೆಡೆ ಜನರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಕಾರ್ಯಕರ್ತರಿಗೂ ಹೊಸ ಹುಮ್ಮಸ್ಸು ಬರುತ್ತಿದೆ ಮತ್ತು ಎಲ್ಲೆಡೆ ಬಿಜೆಪಿ ಅಲೆ ಎದ್ದಿದೆ. ಜನ ಸಂಕಲ್ಪ ಯಾತ್ರೆ ಮುಗಿದ ತತ್‌ಕ್ಷಣವೇ ರಾಜ್ಯದ ಉತ್ತರ ಮತ್ತು ದಕ್ಷಿಣ ದಿಕ್ಕಿನಿಂದ ರಥಯಾತ್ರೆ ಆರಂಭಿ ಸಲಿದ್ದೇವೆ. ಈ ರಥಯಾತ್ರೆ 244 ಕ್ಷೇತ್ರದಲ್ಲೂ ಸಂಚರಿಸಲಿದೆ ಎಂದರು.

Advertisement

ಈಗಾಗಲೇ ಹೂಡಿಕೆದಾರರ ಸಮ್ಮೇ ಳನ ಯಶಸ್ವಿಯಾಗಿ ನಡೆದಿದೆ. ಕರಾವಳಿ ಭಾಗಕ್ಕೆ ನವೀಕರಿಸಬಹುದಾದ ಇಂಧನ ವಿಭಾಗಗಳಲ್ಲಿ ಹೂಡಿಕೆ ಹೆಚ್ಚೆಚ್ಚು ಬರುವ ನಿರೀಕ್ಷೆಯಿದೆ. ಹೈಡ್ರೋಜನ್‌, ಅಮೋ ನಿಯಂ ಕ್ಷೇತ್ರದಲ್ಲಿ ಉಡುಪಿ, ದ.ಕ.ಕ್ಕೆ ಅಧಿಕ ಹೂಡಿಕೆ ಬರಲಿದೆ ಎಂದರು.

ಮುಂದಿನ ವಾರ ತೀರ್ಮಾನ
ಭತ್ತ ಖರೀದಿ ಕೇಂದ್ರ ತೆರೆಯುವ ಸಂಬಂಧ ಬೇಡಿಕೆ ಹೆಚ್ಚುತ್ತಿದೆ. ಉತ್ತರ ಕರ್ನಾಟಕ ಭಾಗಕ್ಕೂ ಇದು ಅನ್ವಯವಾಗುವುದರಿಂದ ಮುಂದಿನ ವಾರದಲ್ಲಿ ಈ ಬಗ್ಗೆ ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ಸುರತ್ಕಲ್‌ ಟೋಲ್‌ ತೆರವಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ತನಿಖೆ ನಡೆಯುತ್ತಿದೆ
ಮುರುಘಾ ಶ್ರೀಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರವೇ ತನಿಖೆ ನಡೆಯುತ್ತಿವೆ. ಪ್ರಕರಣ ನ್ಯಾಯಾಲಯದಲ್ಲಿ ಇದೆ. ಶಾಸಕ ರೇಣುಕಾಚಾರ್ಯ ಅವರ ಸಹೋದರರ ಮಗನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆಗೆ ಭೇಟಿ ನೀಡಲಿದ್ದೇವೆ. ಹಾಗೆಯೇ ಈ ಬಗ್ಗೆ ತನಿಖೆಯೂ ನಡೆಯುತ್ತಿದೆ ಎಂದರು.

ಖರ್ಗೆ ಹೆಸರಿಗಷ್ಟೇ
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆಯವರು ನೇಮಕಗೊಂಡದರೂ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯೇ ಅಧ್ಯಕ್ಷರಾಗಿರಲಿದ್ದಾರೆ ಎಂದು ಟೀಕೆ ಮಾಡಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯ ಸರಕಾರವನ್ನು ಟೀಕೆ ಮಾಡುವ ಭರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಉತ್ಪ್ರೇಕ್ಷೆಯ ಮಾತುಗಳನ್ನು ಆಡಿದ್ದಾರೆ. ಅದು ಸರಿಯಲ್ಲ ಎಂದರು.

ಆಪರೇಶನ್‌ ಪ್ರಮೇಯವೇ ಇಲ್ಲ
ಬಿಜೆಪಿ ಅಧಿಕಾರಕ್ಕೆ ಬರಲು ಆಪರೇಶನ್‌ ಮಾಡುವ ಅಗತ್ಯವೇ ಇಲ್ಲ. ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ, ಡಿ.ಕೆ. ಶಿವಕುಮಾರ್‌ ಅವರು ಕಾಲಿಟ್ಟಲ್ಲೆಲ್ಲ ಬಿಜೆಪಿ ಗೆಲ್ಲಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಹೇಳಿದರು.

ಬಿಜೆಪಿ 150 ಸೀಟು ಗಳೊಂದಿಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಧೂಳಿಪಟವಾಗಲಿದೆ. ನಾವು ಈಗಾಗಲೇ ಕಲಬುರಗಿಯಲ್ಲಿ ಒಬಿಸಿ ಸಮಾವೇಶ ಮಾಡಿದ್ದೇವೆ. ಬಳ್ಳಾರಿಯಲ್ಲಿ ಎಸ್‌ಟಿ ಸಮಾವೇಶ ಮಾಡಲಿದ್ದೇವೆ. ಮೀಸಲಾತಿ ಹೆಚ್ಚಿಸಲಾಗಿದೆ. ಕರ್ನಾಟಕ, ಗುಜರಾತ್‌, ಹಿಮಾಚಲ ಪ್ರದೇಶ ಹೀಗೆ ಎಲ್ಲೆಡೆ ಬಿಜೆಪಿ ಗೆಲ್ಲಲಿದೆ ಎಂದರು.

ಸುಪ್ರೀಂ ಕೋರ್ಟ್‌ ತೀರ್ಪು ಎಲ್ಲ ಸಮುದಾಯಗಳಿಗೆ ಆಶಾಕಿರಣ
ಕುಂದಾಪುರ: ಕಾಲೇಜುಗಳು ಹಾಗೂ ಸರಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ. 10ರಷ್ಟು ಮೀಸಲಾತಿಯ ಪರ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಎಲ್ಲ ಸಮುದಾಯಗಳಿಗೆ ಆಶಾಕಿರಣವಾಗಿದೆ. ಸಂವಿಧಾನದ ತಿದ್ದುಪಡಿ ಮೂಲಕ ಕೇಂದ್ರ ಸರಕಾರವು ಈ ಮೀಸಲಾತಿಯನ್ನು ಜಾರಿಗೆ ತಂದಿದ್ದು ಬಡವರು, ಅವಕಾಶ ವಂಚಿತರಿಗೆ ಈ ತೀರ್ಪಿನಿಂದ ವರದಾನವಾಗಲಿದೆ ಎಂದು ಬೊಮ್ಮಾಯಿ ಹೇಳಿದರು.

ಅವರು ಮುಳ್ಳಿಕಟ್ಟೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಶಾಲೆಗಳಲ್ಲಿ ಧ್ಯಾನಕ್ಕೆ ವಿರೋಧ ವ್ಯಕ್ತಪಡಿಸಿ, ಸಾಹಿತಿಗಳು, ಲೇಖಕರು ಪತ್ರದ ಬರೆ ದಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಯಾವುದೇ ಒಳ್ಳೆಯ ಕೆಲಸ ಆಗಬೇಕಾದರೂ, ಪರ-ವಿರೋಧ ಚರ್ಚೆ ಆಗುತ್ತೆ. ಎಲ್ಲವನ್ನು ಆಲೋಚಿಸಿ ಸರಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next