Advertisement

ಸಿಎಎ ಪ್ರತಿಭಟನೆ ಮೇಲೆ ಹದ್ದಿನ ಕಣ್ಣು : ಪೊಲೀಸ್‌ ಅಧಿಕಾರಿಗಳಿಗೆ ಬೊಮ್ಮಾಯಿ ಸೂಚನೆ

10:06 AM Feb 25, 2020 | sudhir |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಆಯೋಜಕರು ಮತ್ತು ಸಂಘಟನೆಗಳು ಹಾಗೂ ಭಾಷಣಕಾರರ ಮೇಲೆ ನಿಗಾ ವಹಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಸಿಎಎ ವಿರುದ್ಧದ ಹೋರಾಟಗಳು ಮತ್ತು ರಾಜ್ಯ ಕಾನೂನು ಸುವ್ಯವಸ್ಥೆ ಕುರಿತು ರವಿವಾರ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಅವರು ಸಭೆ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಸಿಎಎ ವಿರುದ್ಧದ ಹೋರಾಟಗಳು ಅಧಿಕವಾಗುತ್ತಿವೆ. ಅವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವು ಸಂಘಟನೆಗಳು ದೇಶದ್ರೋಹದಂತಹ ಕೃತ್ಯಕ್ಕೆ ಕೈ ಹಾಕಿದ್ದು, ಸಮಾಜದ ಸ್ವಾಸ್ಥ é ಹಾಳು ಮಾಡುತ್ತಿವೆ. ವಿದ್ಯಾರ್ಥಿಗಳ ಮನಪರಿವರ್ತನೆ ಮಾಡಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿಸುತ್ತಿದ್ದು, ಅಂತಹ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳ ಹಿನ್ನೆಲೆ ಇತ್ಯಾದಿ ಮಾಹಿತಿ ಪಡೆದುಕೊಳ್ಳಬೇಕು. ಅಂತಹ ವಿದ್ಯಾರ್ಥಿಗಳ ಬೆನ್ನಿಗೆ ನಿಂತಿರುವ ಸಂಘಟನೆಗಳ ಮೇಲೂ ನಿಗಾ ವಹಿಸಬೇಕು ಎಂದು ಗೃಹ ಸಚಿವರು ಈ ಸಭೆಯಲ್ಲಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ನಿಷೇಧಾಜ್ಞೆ (ಸೆಕ್ಷನ್‌144) ಮುಖ್ಯವಲ್ಲ
ಹೋರಾಟಕ್ಕೆ ಅನುಮತಿ ನಿರಾಕರಿಸುವ ಉದ್ದೇಶದಿಂದ ನಿಷೇಧಾಜ್ಞೆ (ಸೆಕ್ಷನ್‌ 144) ಜಾರಿ ಮಾಡುವ ಬದಲು ಹೋರಾಟಕ್ಕೆ ಕರೆ ಕೊಟ್ಟ ಸಂಘಟನೆ ಯಾವುದು, ಯಾರೆಲ್ಲ ಅತಿಥಿಗಳು ಪಾಲ್ಗೊಳ್ಳುತ್ತಾರೆ, ಅವರ ಹಿನ್ನೆಲೆ ಏನು, ಜತೆಗೆ ಅವರು ಭಾಷಣದಲ್ಲಿ ಏನೆಲ್ಲ ಮಾತನಾಡ ಬಹುದು ಎಂಬ ಸೂಕ್ಷ್ಮ ವಿಚಾರಗಳನ್ನು ಗಮನಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂಬ ಸಲಹೆಗಳನ್ನು ಸಚಿವರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೊಸ ನಿಯಮಾವಳಿ ರೂಪಿಸಿ
ಹೋರಾಟಕ್ಕೆ ಅನುಮತಿ ನೀಡುವ ಪೂರ್ವದಲ್ಲಿ ವಿಧಿಸುವ ಷರತ್ತು ಅಥವಾ ನಿಯಮಾವಳಿಗಳನ್ನು ಇನ್ನಷ್ಟು ಕಠಿನಗೊಳಿಸಬೇಕಿದೆ. ಅದಕ್ಕಾಗಿ ಹೊಸ ನಿಯಮಾವಳಿಗಳನ್ನು ಸಿದ್ದಪಡಿಸಬೇಕು. ಮುಖ್ಯವಾಗಿ ದೇಶದ್ರೋಹ, ಸಮಾಜದ ಶಾಂತಿ ಕದಡುವುದು, ಅನಗತ್ಯವಾಗಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಮಾಡಿದರೆ ಅಂತಹ ಸಂಘಟನೆ ಮತ್ತು ವ್ಯಕ್ತಿಗಳ ವಿರುದ್ಧ ಕಠಿನ ಕಾನೂನು ಕ್ರಮಗಳನ್ನು ಜರಗಿಸುವ ಕುರಿತು ರೂಪುರೇಷೆ ಸಿದ್ಧಪಡಿಸುವಂತೆ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

Advertisement

ರಾಜಕೀಯದ ಮೇಲೆ ಸರಕಾರದ ನಿಗಾ
ಬೆಂಗಳೂರು: ಸಿಎಎ ವಿರೋಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಯಾವುದಾದರೂ ರಾಜಕೀಯ ಶಕ್ತಿ ಪ್ರೇರಣೆಯಾಗಿ ಕೆಲಸ ಮಾಡುತ್ತಿದೆಯೇ ಎಂಬ ಬಗ್ಗೆಯೂ ನಿಗಾ ಇಡಲು ರಾಜ್ಯ ಸರಕಾರ ಮುಂದಾಗಿದೆ.

ಮೋದಿ ಸರಕಾರದ ವಿರುದ್ಧ ವ್ಯವಸ್ಥಿತ ಸಂಚು ನಡೆಯುತ್ತಿರುವಂತೆಯೇ ರಾಜ್ಯದಲ್ಲಿಯೂ ಚುನಾಯಿತ ಸರಕಾರದ ವರ್ಚಸ್ಸು ಹಾಳುಗೆಡವಲು ರಾಜಕೀಯ ಶಕ್ತಿಗಳು ಪರೋಕ್ಷ ಯತ್ನ ನಡೆಸುತ್ತಿರುವ ಬಗ್ಗೆ ರಾಜ್ಯ ಸರಕಾರ ಅನುಮಾನಪಟ್ಟಿದೆ ಎನ್ನಲಾಗಿದೆ.

ರವಿವಾರ ಮುಖ್ಯಮಂತ್ರಿ ಬಿ.ಎಸ್‌.ವೈ. ತಮ್ಮ ನಿವಾಸದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದ್ದು, ಪೊಲೀಸ್‌ ಇಲಾಖೆ ಗಮನಹರಿಸುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next