Advertisement

ಮಳೆ ಬಂದರೆ ಬಸವಾಪುರ ಜನತೆಗೆ ಭಯ

10:28 PM Nov 03, 2019 | Team Udayavani |

ಯಳಂದೂರು: ಕೆಸರುಮಯವಾದ ರಸ್ತೆ, ನೀರು ಹೊರ ಹೋಗದ ಚರಂಡಿಗಳು, ಹಳ್ಳಕೊಳ್ಳದಲ್ಲಿ ನಿಲ್ಲುವ ಮಳೆ ನೀರು, ಜೋರು ಮಳೆ ಸುರಿದರೆ ಮನೆಯೊಳಗೆ ನುಗ್ಗುವ ಕಲುಷಿತ ಜಲ, ವಿಷ ಜಂತುಗಳು, ಕ್ರಿಮಿಕೀಟಗಳ ಆವಾಸದಲ್ಲೇ ಬದುಕು ಸಾಗಿಸುವ ಅನಿವಾರ್ಯ. ಪ್ರತಿ ಮಳೆಗಾಲದಲ್ಲೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಶಾಪ ಹಾಕುವ ನಾಗರಿಕರು.

Advertisement

ಇದು ತಾಲೂಕಿನ ಬಸವಾಪುರ ಗ್ರಾಮದ ನೈಜ ಚಿತ್ರಣ. ಕೆಸ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ ಹಿಂದುಳಿದ ಉಪ್ಪಾರ ಜನಾಂಗದವರೇ ವಾಸ ಮಾಡುತ್ತಾರೆ. ಇಲ್ಲಿ 140 ಕುಟುಂಬಗಳು ವಾಸವಾಗಿವೆ. 800ಕ್ಕೂ ಹೆಚ್ಚಿನ ಮಂದಿ ವಾಸವಾಗಿದ್ದು, 535 ಮತದಾರರು ಇಲ್ಲಿದ್ದಾರೆ. ಪ್ರತಿ ವರ್ಷವೂ ಮಳೆಗಾಲ ಬಂದರೆ ಈ ಗ್ರಾಮದಲ್ಲಿ ಆತಂಕ ಮನೆ ಮಾಡುತ್ತದೆ. ಸುತ್ತಲೂ ಹೊಲಗದ್ದೆಗಳಿಂದ ಕೂಡಿರುವ ಈ ಗ್ರಾಮಕ್ಕೆ ಮಳೆ ಬಂದರೆ ನೀರೆಲ್ಲಾ ಬೀದಿಯೊಳಗೆ ನುಗ್ಗುತ್ತದೆ.

ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಿಲ್ಲ: ಇಲ್ಲಿನ ಎಲ್ಲಾ ಬೀದಿಗಳಿಗೂ ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಿಲ್ಲ. ಹೀಗಾಗಿ ಕೆಲ ಬೀದಿಗಳಲ್ಲಿ ಇನ್ನೂ ಮಣ್ಣನ್ನು ಸುರಿಯಲಾಗಿದ್ದು, ದೊಡ್ಡ ಹಳ್ಳವಾಗಿ ರಸ್ತೆ ಮಾರ್ಪಟ್ಟಿದೆ. ಮಳೆ ಬಿದ್ದರೆ ಇಡೀ ರಸ್ತೆ ಕೆಸರುಮಯವಾಗುತ್ತದೆ. ಜನರು ಇಲ್ಲಿಂದಲೇ ಓಡಾಡುವ ಅನಿವಾರ್ಯ ಇದೆ.

ಶಾಶ್ವತ ಪರಿಹಾರ ಸಿಕ್ಕಿಲ್ಲ: ಗ್ರಾಮದ ಸುತ್ತಲೂ ವ್ಯವಸಾಯ ಜಮೀನುಗಳಿವೆ. ಈ ಹಿಂದೆ ಕಾಲುವೆ ನೀರೆಲ್ಲಾ ಗ್ರಾಮದಲ್ಲಿ ನುಗ್ಗಿತ್ತು. ಈ ಪರಿಸ್ಥಿತಿ ಈಗಲೂ ಇದೆ. ಇಲ್ಲಿ ಬಹುತೇಕರು ಕೂಲಿ ಕಾರ್ಮಿಕರಾಗಿದ್ದಾರೆ. ಕೆಲವರಿಗೆ ಇನ್ನೂ ಮಣ್ಣಿನ ಮನೆಗಳ ಆಸರೆಯಾಗಿವೆ. ಮಳೆ ಬಂದರೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತದೆ. ಈ ಬಾರಿ ಮಳೆಯಲ್ಲೂ ಅನೇಕ ಮನೆಗಳ ಗೋಡೆಗಳು ಕುಸಿದಿವೆ. ರಾತ್ರಿ ವೇಳೆಯಲ್ಲಿ ವಿಷಜಂತುಗಳು ಕ್ರಿಮಿಕೀಟಗಳ ಆವಾಸದಲ್ಲೇ ಕಾಲ ಕಳೆಯುವ ಪರಿಸ್ಥಿತಿ ಇದೆ.

ಇಲ್ಲಿಗೆ ನೀರು ನುಗ್ಗದಂತೆ ಸುತ್ತಲೂ ಚರಂಡಿ ನಿರ್ಮಾಣ ಮಾಡಬೇಕು. ಎಲ್ಲಾ ಬೀದಿಗಳಿಗೂ ರಸ್ತೆ ನಿರ್ಮಿಸಬೇಕು ಎಂಬ ನಮ್ಮ ಆಸೆ ಇನ್ನೂ ಈಡೇರಿಲ್ಲ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಗ್ರಾಮಕ್ಕೆ ಮಲತಾಯಿ ಧೋರಣೆ ತೋರುತ್ತಾರೆ ಎಂಬುದು ಗ್ರಾಮದ ಶಿವಮಲ್ಲಶೆಟ್ಟಿ ಆರೋಪ.

Advertisement

ಹುಸಿಯಾದ ಶಾಸಕರ ದತ್ತು ಗ್ರಾಮದ ಆಸೆ: ಚುನಾವಣೆಗೂ ಮುಂಚೆ ಈ ಗ್ರಾಮಕ್ಕೆ ಹಾಲಿ ಶಾಸಕ ಎನ್‌. ಮಹೇಶ್‌ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡು ಮರುಗಿದ್ದರು. ಅಲ್ಲದೆ, ನಾನು ಶಾಸಕನಾಗಿ ಆಯ್ಕೆಯಾದರೆ ಈ ಗ್ರಾಮವನ್ನು ದತ್ತು ಪಡೆದುಕೊಂಡು ಇದರ ಸಮಗ್ರ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದರು. ಅವರು ಚುನಾವಣೆಯಲ್ಲಿ ಗೆದ್ದು ಒಂದೂವರೆ ವರ್ಷವಾದರೂ ಇತ್ತ ಇನ್ನೂ ಒಂದು ಬಾರಿ ಮುಖ ಮಾಡಿಲ್ಲ.

ಈ ಬಾರಿಯ ಮಳೆಗೆ 15ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಎಷ್ಟು ಮನೆಗಳು ಕುಸಿದ ಮೇಲೆ ಇವರು ಬಂದು ಪರಿಶೀಲಿಸುತ್ತಾರೋ ಕಾದು ನೋಡಬೇಕು ಎಂಬುದು ಗ್ರಾಮದ ಚಿಕ್ಕನಾಗ, ಕೆಂಪಶೆಟ್ಟಿ ಅವರ ದೂರು.

ನರೇಗಾದಡಿ ಕಾಮಗಾರಿ ಮಾಡಲು ಜನರು ಬರುತ್ತಿಲ್ಲ: ಇಲ್ಲಿನ ರಸ್ತೆ ತುಂಬಾ ಹದಗೆಟ್ಟಿತ್ತು. ತಾತ್ಕಾಲಿಕವಾಗಿ ಗ್ರಾಪಂ ವತಿಯಿಂದ ಇಲ್ಲಿಗೆ ಮಣ್ಣನ್ನು ಹಾಕಿ, ಹಳ್ಳಗಳನ್ನು ಮುಚ್ಚಲಾಗಿದೆ. ನರೇಗಾ ಯೋಜನೆಯಲ್ಲಿ ಇಲ್ಲಿ ಚರಂಡಿ ಹಾಗೂ ರಸ್ತೆ ನಿರ್ಮಿಸಲು ಅವಕಾಶವಿದೆ. ಆದರೆ, ಗ್ರಾಮದ ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಚರಂಡಿ ಹಾಗೂ ರಸ್ತೆ ನಿರ್ಮಾಣಕ್ಕೆ ಸರ್ಕಾರದ ಇತರೆ ಇಲಾಖೆಯಿಂದ ದೊಡ್ಡ ಮೊತ್ತದ ಅನುದಾನದ ಅವಶ್ಯವಿದೆ, ಸಂಬಂಧಪಟ್ಟವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಕೆಸ್ತೂರು ಗ್ರಾಪಂ ಪಿಡಿಒ ಲಲಿತಾ ಮಾಹಿತಿ ನೀಡಿದರು.

* ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next