Advertisement

ಬಸವಣ್ಣನವರ ತತ್ವಾದರ್ಶ ಇಂದಿಗೂ ಪ್ರಸ್ತುತ: ಜೋಶಿ

10:41 AM May 08, 2019 | Suhan S |

ಹುಬ್ಬಳ್ಳಿ: ಬಸವಣ್ಣವರು ಜಗತ್ತಿಗೆ ಕಾಯಕ, ದಾಸೋಹ ತತ್ವಗಳನ್ನು ನೀಡಿದ ಆದರ್ಶ ವ್ಯಕ್ತಿಯಾಗಿದ್ದು, ಈ ಎರಡನ್ನು ಜೀವನದಲ್ಲಿ ಅಳವಡಿಸಿಕೊಂಡು ಸ್ವರ್ಗ ಕಾಣಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

Advertisement

ಇಲ್ಲಿನ ಬನಶಂಕರಿ ಬಡಾವಣೆಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬಸವ ಸೇವಾ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನವರು ಜಗತ್ತಿಗೆ ವಿಶ್ವಶಾಂತಿಯ ಸಂದೇಶ ನೀಡಿದರು. ಶರಣ ಹಾಗೂ ಶರಣೆಯರಿಗೆ ವಚನಗಳನ್ನು ರಚಿಸಲು ಪ್ರೇರಣೆಯಾಗಿದ್ದರು. ಇವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ಬಾಳಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಬಸವಣ್ಣವರ ಸಮಾನತೆ ತತ್ವ ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ. ಲಿಂಗ, ವರ್ಣ, ವರ್ಗಭೇದ ಹೋಗಲಾಡಿಸಲು ಪ್ರಯತ್ನಪಟ್ಟರು. ಜನರಿಗೆ ಬೋಧಿಸಿದಂತೆ ತಾವು ಬದುಕಿ ತೋರಿಸಿದ ಆದರ್ಶ ವ್ಯಕ್ತಿಯಾಗಿದ್ದಾರೆ. ಮನುಷ್ಯರನ್ನು ಮನುಷ್ಯರನ್ನಾಗಿ ಕಾಣಬೇಕು ಎಂದು ಸಾರಿದರು. ಇವರ ವಚನಗಳು, ಚಿಂತನೆ ಕೇವಲ ಬೋಧನೆಗೆ ಸೀಮಿತವಾಗದೆ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಬಸವ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣವರು ಸಮಾನತೆಗೆ ಹೋರಾಡಿದರು. ಅಂತರ್ಜಾತಿ ವಿವಾಹಕ್ಕೆ ನಾಂದಿ ಹಾಡಿದರು. ಆದರೆ ಇವು ಇಂದಿಗೂ ಸಮಸ್ಯೆಯಾಗಿ ಉಳಿದಿವೆ. 770 ವಚನಕಾರರು ಇವರ ಅನುಭವ ಮಂಟಪದಲ್ಲಿದ್ದರು. ಶರಣರ ವಚನಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಸಂಘ-ಸಂಸ್ಥೆಗಳಿಂದ ನಡೆಯಬೇಕು ಎಂದರು.

ಮಕ್ಕಳಿಗಾಗಿ ಆಯೋಜಿಸಿದ್ದ ವೇಷ ಭೂಷಣ ಸ್ಪರ್ಧೆಯಲ್ಲಿ ಪವಿತ್ರಾ ಪಿತಾಂಬರ ಪ್ರಥಮ, ಮಂದಾರ ಜಾಬಿನ್‌ ದ್ವಿತೀಯ, ದಾನೇಶ್ವರಿ ಜಾಬಿನ್‌ ತೃತೀಯ ಸ್ಥಾನ ಗಳಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಸವ ಸೇವಾ ಸಮಿತಿ ಅಧ್ಯಕ್ಷ ಡಾ| ಎಚ್.ವಿ. ಬೆಳಗಲಿ ಅಧ್ಯಕ್ಷತೆ ವಹಿಸಿದ್ದರು. ಕೆ. ಶಾಂತಾ ಬಸವರಾ, ರಾಘವೇಂದ್ರ ಕರೆಗಾರ, ಬಿ.ಎಸ್‌. ಮಾಳವಾಡ, ಸಿದ್ದರಾಮನಗೌಡ ಮಾಲೀಪಾಟೀಲ, ಮಹೇಶ ಬುರ್ಲಿ, ವಿ.ವಿ. ಕುರ್ತಕೋಟಿ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next