Advertisement

ಬಸವಣ್ಣನ ವಿಚಾರಧಾರೆಗೆ ವಿಶ್ವವೇ ತಲೆಬಾಗಿದೆ

03:15 PM Jan 04, 2018 | |

ಇಂಡಿ: ಸತ್ಸಂಗ ಎಲ್ಲಿ ಇದೆಯೋ ಅಲ್ಲಿ ಬಸವಣ್ಣ ಇದ್ದಾನೆ. ಬಸವಣ್ಣ ಇದ್ದಲ್ಲಿ ನ್ಯಾಯ, ನೀತಿ, ಧರ್ಮ ಉಳಿದಿದೆ ಎಂದು ಬಿದರಕುಂದಿಯ ಖ್ಯಾತ ಸಾಹಿತಿ ರೆಹಮಾನಸಾಬ ಬಿದರಕುಂದಿ ಹೇಳಿದರು.

Advertisement

ಸಂಗಣ್ಣ ನಿಗಡಿ ಸ್ಮರಣಾರ್ಥ ಬಸವರಾಜೇಂದ್ರ ಸತ್ಸಂಗ ಸಮಿತಿ, ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ಹಮ್ಮಿಕೊಂಡಿದ್ದ 24ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮದ ಶರಣರ ಸಂದೇಶ ಎಂಬ ವಿಷಯ ಕುರಿತು ಉಪನ್ಯಾಸಕರಾಗಿ ಅವರು ಮಾತನಾಡಿದರು.

ಬಸವಣ್ಣನವರು ಕಾಯಕದ ಮಹತ್ವ ಕುರಿತು ಬಹಳಷ್ಟು ಹೇಳಿದ್ದಾರೆ. ಕಸ ಗುಡಿಸುವುದು ಒಂದು ಕಾಯಕ. ಆದರೆ ವಿಪರ್ಯಾಸವೆಂದರೆ ಇಂದು ಕಸ ಗುಡಿಸುವುದೆಂದರೆ ಫೋಟೋಗೆ ಫೋಸ್‌ ಕೊಟ್ಟು ದೊಡ್ಡವರಾಗುವುದು ಎಂಬಂತಾಗಿದೆ. ಮೊದಲು ಮನಸ್ಸಿನಲ್ಲಿರುವ ಕಲ್ಮಷ ಹೊರಹಾಕಿ, ಇದು ಬಸವಣ್ಣನ ಸಂದೇಶ. ಒಳಪಂಗಡ ಬಿಟ್ಟು ಬಿಡಿ. ಅದು ನಿಮ್ಮ ನಿಮ್ಮ ಮನೆಯಲ್ಲಿರಲಿ. ಹೊರ ಬಂದಾಗ ವಿಶ್ವಮಾನವರಾಗಿ ಬದುಕಿ ಎಂದರು.

ಇಂದು ಕೆಲವರು ಸಂಬಳಕ್ಕಾಗಿ ಮತ್ತು ಗಿಂಬಳಕ್ಕಾಗಿ ದುಡಿಯುತ್ತಾರೆ. ಅದು ಸರಿಯಾದುದಲ್ಲ. ಕಾಯಕ ಯಾವುದೇ ಇರಲಿ, ಸತ್ಯ ಶುದ್ಧ ಹಸ್ತದಿಂದ ಪ್ರಮಾಣಿಕವಾಗಿ ಬಂದ ಹಣವನ್ನು ಅಲ್ಪ ಸ್ವಲ್ಪ ದಾಸೋಹಕ್ಕಾಗಿ ಮತ್ತು ಅಸಹಾಯಕರಿಗೆ, ಬಡವರಿಗೆ, ಅನಾಥರಿಗೆ, ದೀನ, ದುರ್ಬಲರಿಗೆ ದಾಸೋಹ ಮಾಡಿ ಅವರನ್ನು ಬದುಕಿಸಬೇಕು. ಇದೇ ನೀಜವಾದ ಕಾಯಕ. ಕಲ್ಲು ದೇವರು, ಮಣ್ಣು ದೇವರು, ಮರಳು ದೇವರು ದೇವರಲ್ಲ. ಮನಸ್ಸಿನಲ್ಲಿಯೇ ದೇವರನ್ನು ಕಂಡಂತ ಪುಣ್ಯಾತ್ಮ ಯಾರಾದರೂ ಇದ್ದರೆ ಅದು ಬಸವಣ್ಣ ಮಾತ್ರ. ಬಸವಣ್ಣನ ವಿಚಾಧಾರೆಗಳು ಇಡೀ ಜಗತ್ತು ಒಪ್ಪಿಕೊಳ್ಳಬೇಕು ಎಂದರು.

ವಿಚಾರವಾದಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ಎಲ್ಲರನ್ನೂ ನಮ್ಮವರು ಎಂದು ತೆಕ್ಕೆಗೆ ಅಪ್ಪಿಕೊಳ್ಳುವ ಧರ್ಮ ಯಾವದಾದರೂ ಇದ್ದರೆ ಅದು ಬಸವ ಧರ್ಮ. ಈ ಜಗತ್ತಿನಲ್ಲಿ ಸಾಕಷ್ಟು ಜನ ಹುಟ್ಟಿದ್ದಾರೆ. ಏನನ್ನೂ ಮಾಡಲ್ಲಿಲ್ಲ. ಆದರೆ ಬುದ್ಧ, ಬಸವ, ವಾಲ್ಮೀಕಿ, ಮಹಾವೀರ, ಪೈಗಂಬರ್‌, ಗಾಂಧೀಜಿ , ಕಿತ್ತೂರು ಚನ್ನಮ್ಮ ಹೆಸರು ಸೂರ್ಯ ಚಂದ್ರ ಇರುವವರೆಗೆ ಶಾಶ್ವತ ಇರುತ್ತದೆ. ಇಂದು ನಿಮ್ಮ ಕಡೆಯಿಂದ ಒಳಿತನ್ನು ಆಗದಿದ್ದರೆ ಪರವಾಗಿಲ್ಲ ಇನ್ನೊಬ್ಬರಿಗೆ ಬದುಕಲು ಬಿಡಿ ನೋವಾಗುವಂತೆ ವರ್ತಿಸಬೇಡಿ.

Advertisement

ಮಕ್ಕಳಿಗೆ ಸಂಸ್ಕಾರ ನೀಡಿ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೆ ಆಸ್ತಿ ಮಾಡಿ. ಭ್ರಷ್ಟಾಚಾರ ಕಡಿಮೆಯಾಗಬೇಕಾದರೆ ಬಸವಣ್ಣನವರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಪ್ರಸ್ತುತ. ಉಸಿರು ಹೋದರು ಹೆಸರು ಉಳಿಯಲಿ ಎಂದು ಸಂದೇಶ ನೀಡಿದರು.

ಡಾ| ಸೋಮಶೇಖರ ವಾಲಿ ಮಾತನಾಡಿ, 12ನೇ ಶತಮಾನ ಅಂಧಕಾರ ಮೂಢನಂಬಿಕೆ ಯುಗವಾಗಿತ್ತು. ಶೋಷಿತರ ಮಹಿಳೆಯರ ಪರವಾದ ಧ್ವನಿ ಪ್ರಾರಂಭವಾಗಿದ್ದೆ ಶರಣರಿಂದ. ಶರಣರ ವಿಚಾರಧಾರೆಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ತಮ್ಮ ಮನೆಯನ್ನೆ ಮಾರಾಟ ಮಾಡಿ ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯವನ್ನು ಪ್ರಕಟ ಮಾಡಿ ಅದನ್ನು ಇಡಿ ಸಮಾಜಕ್ಕೆ ಪ್ರಚಾರಗೊಳಿಸಿದರು
ಎಂದು ಹೇಳಿದರು.

ರವೀಂದ್ರ ನಿಗಡಿ, ವೇದಮೂರ್ತಿ ಗಾಳಿಮಠ, ಐ.ಬಿ. ಸುರಪುರ ವೇದಿಕೆಯಲ್ಲಿದ್ದರು. ಹಿರಿಯ ಸಾಹಿತಿ ದಾನಪ್ಪ ಬಗಲಿ, ಯುವ ಸಾಹಿತಿ ರಾಘವೇಂದ್ರ ಕುಲಕರ್ಣಿ, ಪ್ರಭು ನಾಡಗೌಡ, ಗಿರೀಶ ಪೋಪಡಿ, ಸೋಮಶೇಖರ ಸುರಪುರ, ಎಂ.ಜೆ. ಪಾಟೀಲ, ಜಿ.ವಿ. ಬಿರಾದಾರ, ಸಿ.ಬಿ. ಬಿರದಾರ, ಡಾ| ವಿ.ಎಚ್‌. ವಾಲಿ, ಎನ್‌.ವಿ. ಹಂಜಗಿ, ಎಸ್‌.ಎಸ್‌. ಬುರಕುಲೆ ಇದ್ದರು. ಆರ್‌.ವಿ. ಪಾಟೀಲ ಸ್ವಾಗತಿಸಿದರು. ಎಂ.ಪಿ. ಬೈರಜಿ ನಿರೂಪಿಸಿದರು. ಬಿ.ಎಸ್‌. ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next