Advertisement

ವಿಶ್ವದ ಮೊದಲ ರಾಜಕೀಯ ತಜ್ಞ ಬಸವಣ್ಣ; ರಂಜಾನ್‌ ದರ್ಗಾ

03:19 PM May 04, 2022 | Team Udayavani |

ನೆಲಮಂಗಲ: ವಿಶ್ವದ ಮೊದಲ ರಾಜಕೀಯ ತಜ್ಞ ಬಸವಣ್ಣ ಎಂಬುದನ್ನು ಜಗತ್ತಿನ ಜನರು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಸಾಹಿತಿ ರಂಜಾನ್‌ ದರ್ಗಾ ಅಭಿಪ್ರಾಯಪಟ್ಟರು.

Advertisement

ನಗರದ ಪವಾಡ ಬಸವಣ್ಣ ದೇವರ ಮಠದಲ್ಲಿ ಪರಮಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಬಸವ ಜಯಂತಿ ಉತ್ಸವ ಹಾಗೂ ಪವಾಡಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿ ಧರ್ಮ ಸಂಘರ್ಷಗಳು ಕೊನೆಯಾಗಲು ಬಸವ ತತ್ವ ಅನುಸರಿಸಿ ಪಾಲಿಸಿಕೊಂಡು ಹೋದರೆ ಸಾಕು. ಬಸವಣ್ಣನವರಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ.

ಈಗಿನ ಸಂಸತ್‌ ರಚನೆಯಾಗುವ ಮೊದಲೇ ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಹಕ್ಕು, ಜಾತಿ ಪದ್ಧತಿ ನಿರ್ಮೂಲನೆ, ಅಂತರ್ಜಾತಿ ವಿವಾಹ, ಮೂಢನಂಬಿಕೆ ನಿರ್ಮೂಲನೆ, ಮಹಿಳೆಯರಿಗೆ ಸಮಾನ ಹಕ್ಕು, ಮೂಲಭೂತ ಸೌಕರ್ಯ ಸೇರಿ ನೂರಾರು ಬದಲಾವಣೆಗೆ 12ನೇ ಶತಮಾನದಲ್ಲಿಯೇ ಸಾಕ್ಷಿಯಾಗಿದೆ ಎಂದರು. ಮೇಲುಕೀಳು ಎಂಬುದನ್ನು ದೂರ ಮಾಡುತ್ತಾ ಅಂತರ್‌ ಜಾತಿ ವಿವಾಹ ಜಾರಿಗೆ ತಂದು ಮಹಿಳಾ ಹಕ್ಕುಗಳಿಗೆ ಶಕ್ತಿ ನೀಡಿ ಲಿಂಗದೀಕ್ಷೆ ಮೂಲಕ ಸಾಮರಸ್ಯದ ಪಾಠ ಮಾಡಿದ ಬಸವಣ್ಣನವರು ದೇಶದ ಅಪರೂಪದ ಮಾಣಿಕ್ಯ ಎಂದರು.

ಶ್ರದ್ಧೆಯಿಂದ ಕಾಯಕ ಮಾಡಿ: ಬೆನ್ನುಮೂಳೆ ಶಸ್ತ್ರ ಚಿಕಿತ್ಸಾ ತಜ್ಞ ಡಾ.ವಿದ್ಯಾಧರ ಮಾತನಾಡಿ, ನಮ್ಮ ನಡುವೆ ಕೆಲವು ಪವಾಡಗಳು ಸಂಭವಿಸುತ್ತವೆ. ಆದರೆ, ಬಸವಣ್ಣನವರು ಹೇಳಿದಂತೆ ನಮ್ಮ ಕಾಯಕ ವೃತ್ತಿಯಲ್ಲಿ ಶ್ರದ್ಧೆಯಿಂದ ಮಾಡಿದರೆ ಪ್ರತಿನಿತ್ಯವೂ ಪವಾಡ ಕಾಣಬಹುದು. ಬಸವಣ್ಣನವರ ವಿಚಾರಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ನಾನು, ನನ್ನದು ಎಂಬುದನ್ನು ಬಿಟ್ಟು ಕಾಯಕದ ಮೂಲಕ ಸಮಾಜಕ್ಕೆ ಮಾದರಿ ಆಗುತ್ತಾರೆ ಎಂದರು.

ಶ್ರೀಮಠ ಎಲ್ಲರಿಗೂ ಮಾದರಿ: ಎನ್‌ ಡಿಎ ಅಧ್ಯಕ್ಷ ಎಸ್‌.ಆರ್‌ ವಿಶ್ವನಾಥ್‌ ಮಾತನಾಡಿ, ವಿದೇ ಶಗಳಲ್ಲೂ ಬಸವಣ್ಣನವರನ್ನು ಒಪ್ಪಿಕೊಂಡಿದ್ದಾರೆ ಎಂದರೆ ಅವರ ವಚನಗಳು, ವಿಚಾರಗಳು ಯಾವ ಪ್ರಮಾಣಕ್ಕೆ ಜಗತ್ತನ್ನು ಆವರಿಸಿದೆ ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಬಸ ವಣ್ಣನವರ ವಿಚಾರಗಳಲ್ಲಿ ಸಾಗುತ್ತಿರುವ ಪವಾಡ ಬಸವಣ್ಣ ದೇವರ ಮಠ ನಮಗೆಲ್ಲರಿಗೂ ಮಾದರಿ ಎಂದರು.

Advertisement

ಕಲಾ ತಂಡಗಳು ಮೆರಗು: ಶ್ರೀ ಪವಾಡ ಬಸವಣ್ಣ ದೇವರ ರಥೋತ್ಸವವನ್ನು ಶ್ರೀ ಸಿದ್ಧಲಿಂಗ  ಸ್ವಾಮೀಜಿ ಹಾಗೂ 20ಕ್ಕೂ ಹೆಚ್ಚು ಮಠಗಳ ಸ್ವಾಮೀಜಿ  ಸಮ್ಮುಖದಲ್ಲಿ ನಡೆಸಲಾಯಿತು. ರಥೋತ್ಸವಕ್ಕೆ ವೀರಗಾಸೆ, ಗೊಂಬೆ ಕುಣಿತ, ಕೇರಳ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರಗು  ತಂದವು, ಸಾವಿರಾರು ಭಕ್ತರು ಭಾಗವಹಿಸಿದ್ದರು.

ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಚಾರ್ಯ ಸ್ವಾಮೀಜಿ, ಗದ್ದುಗೆ ಮಠದ ಶ್ರೀ ಮಹಂತಸ್ವಾಮೀಜಿ, ಮಕ್ಕಳ ದೇವರ ಮಠದ ಶ್ರೀ ಮೃತ್ಯುಂಜಯ ಸ್ವಾಮಿ, ವೀರಶೈವ ಅಭಿವೃದ್ಧಿ ನಿಗಮ ಪರಮಶಿವಯ್ಯ, ಮಾಜಿ ಶಾಸಕ ಎಂ.ವಿ ನಾಗರಾಜು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೊಂಬಯ್ಯ, ನಗರಸಭೆ ಸದಸ್ಯ  ಗಂಗಾಧರ್‌ ಗಣಿ, ಪೂರ್ಣಿಮಾ ಸುಗ್ಗರಾಜು, ಗಣೇಶ್‌, ಪ್ರದೀಪ್‌, ನಾಗರಾಜು, ಶಾಂತಕುಮಾರ್‌, ಅಖಿಲ ಭಾರತ ವೀರ ಶೈವ ಮಹಾ ಸಭಾ ಜಿಲ್ಲಾ ಧ್ಯಕ್ಷೆ ರಾಜಮ್ಮ, ತಾಲೂಕು ಅಧ್ಯಕ್ಷೆ ವೇದಾವತಿ, ಬಸವರಾಜು, ಶಶಿಕಿರಣ್‌, ಕಸಾಪ ತಾಲೂಕು ಅಧ್ಯಕ್ಷ ಪ್ರದೀಪ್‌ ಕುಮಾರ್‌ ಮತ್ತಿತರರು ಇದ್ದರು.

ಪವಾಡ ಶ್ರೀ ಪ್ರಶಸ್ತಿ ಪ್ರದಾನ
ಪವಾಡ ಬಸವಣ್ಣ ದೇವರ ಮಠದಿಂದ ನೀಡುವ ಪವಾಡಶ್ರೀ ಪ್ರಶಸ್ತಿಯನ್ನು ಮೊದಲು ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರ ಸ್ವಾಮೀಜಿಗೆ ನೀಡಲಾಗಿತ್ತು. 2021ರ ಪವಾಡ ಶ್ರೀ ಪ್ರಶಸ್ತಿಯನ್ನು ಹಿರಿಯ ಸಾಹಿತಿ, ಪತ್ರಕರ್ತ ರಂಜಾನ್‌ ದರ್ಗಾಗೆ ಹಾಗೂ 2022ರ ಪವಾಡ ಶ್ರೀ ಪ್ರಶಸ್ತಿಯನ್ನು ರಾಜ್ಯದ ಏಕೈಕ ಬೆನ್ನುಮೂಳೆ ಶಸ್ತ್ರ ಚಿಕಿತ್ಸಾ ತಜ್ಞ ಮಣಿಪಾಲ್‌ ಸ್ಕ್ಯಾನ್‌ ಕೇರ್‌ ಸೆಂಟರ್‌ ಆಸ್ಪತ್ರೆ ವೈದ್ಯ ಡಾ.ವಿದ್ಯಾಧರರಿಗೆ ಬಿಡಿಎ ಅಧ್ಯಕ್ಷ ಎಸ್‌. ಆರ್‌. ವಿಶ್ವನಾಥ್‌ ಹಾಗೂ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪ್ರಧಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next