ಬೆಳಗಾವಿ: 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ಮತ ವರ್ಗ ವ್ಯವಸ್ಥೆಯಲ್ಲಿ ಸಮಾನತೆಗಾಗಿ ಹೋರಾಡಿದ್ದರಲ್ಲದೆ ಅವರು ಒಬ್ಬ ಅಪ್ಪಟ ಸಂಗೀತ ತಜ್ಞರಾಗಿದ್ದರು ಎಂದು ಸಾಹಿತಿ ಶಿರೀಷ್ ಜೋಶಿ ಹೇಳಿದರು.
ಅಖೀಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ವತಿಯಿಂದ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅನುಭಾವ ಗೋಷ್ಠಿಯಲ್ಲಿ ಬಸವಣ್ಣನವರ ಬತ್ತೀಸ ರಾಗಗಳು ಕುರಿತು ಮಾತನಾಡಿದ ಅವರು, ಜಾತಿ ಮತಗಳನ್ನು ತೊಡೆದುಹಾಕಿದ ಬಸವಣ್ಣನವರು ಸಂಗೀತದ ಬಗ್ಗೆಯು ಅಪಾರವಾದ ಜ್ಞಾನವನ್ನು ಹೊಂದಿದ್ದರು ಎಂದರು.
ಅಂದಿನ ಕಾಲದಲ್ಲಿ ಬಸವಣ್ಣನವರು ಸಂಗೀತದ ವಿವಿಧ ರಾಗಗಳ ಬಗ್ಗೆ ಅಮೂಲಾಗ್ರವಾದ ಜ್ಞಾನವನ್ನು ಹೊಂದಿದ್ದರು. ಮಾತ್ರವಲ್ಲದೆ ಅವರ ಸಮಾಕಾಲೀನ ವಚನಕಾರರು ಹಲವಾರು ಸಂಗೀತದ ರಾಗಗಳನ್ನು ಕುರಿತು ಪ್ರಸ್ತಾಪಿಸಿದ್ದುಂಟು. ಆವರು ವೀಣೆಯನ್ನು ಮನುಷ್ಯನ ದೇಹಕ್ಕೆ ಹೋಲಿಸುವ ಪ್ರಯತ್ನ ಮಾಡಿದರು. ಇಡೀ ಸಂಗೀತವೇ ತಾನಾಬೇಕು. ಬತ್ತೀಸ ರಾಗಗಳು ಬದುಕಿನ ನೆಲೆಯಾಗಲಿ ಎಂಬ ಆಶಯ ಬಸವಣ್ಣನವರದಾಗಿತ್ತು. 12ನೇ ಶತಮಾನದಲ್ಲಿ ಭರತಮತ, ಹನುಮಮತ ಇವೆರಡೂ ಪ್ರಚಲಿತವಾದ ಸಂಗೀತ ಪ್ರಕಾರಗಳು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖೀಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಸ್. ಪಾಟೀಲ ಮಾತನಾಡಿ, ಮಹಾಸಭೆ ಹಲವಾರು ಚಿಂತನ ಪರ ಉಪನ್ಯಾಸಗಳನ್ನು ಆಯೋಜಿಸುತ್ತಿದೆ. ಯುವ ಜನಾಂಗದಲ್ಲಿ ಬಸವಣ್ಣನವರ ಸಂದೇಶಗಳನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ.
ಸಮಾಜವನ್ನು ಕಟ್ಟಿದ ಬಸವಣ್ಣನವರ ಜೀವನ ನಮಗೆ ಆದರ್ಶಮಯವಾಗಬೇಕು ಎಂದರು. ಈ ಸಂದರ್ಭದಲ್ಲಿ ಡಾ| ಎಫ್.ವಿ. ಮಾನ್ವಿ, ಡಾ| ಬಸವರಾಜ ಜಗಜಂಪಿ, ಡಾ| ಗುರುದೇವಿ ಹುಲೆಪ್ಪನವರಮಠ ಉಪಸ್ಥಿತರಿದ್ದರು. ಶಂಕರ ಚೊಣ್ಣದ ಪ್ರಾರ್ಥಿಸಿದರು. ನ್ಯಾಯವಾದಿ ವಿ.ಕೆ. ಪಾಟೀಲ ಸ್ವಾಗತಿಸಿದರು. ಡಾ| ಮಹೇಶ ಗುರನಗೌಡರ ಪರಿಚಯಿಸಿದರು. ಆಶಾ ಯಮಕನಮರಡಿ ನಿರೂಪಿಸಿ ವಂದಿಸಿದರು.