Advertisement

ಬಸವಣ್ಣ,ಗಾಂಧಿ,ಅಂಬೇಡ್ಕರ್‌ ಎಲ್ಲರಿಗೂ ನಾಮ ಹಾಕಿದ್ದೇವೆ: ರಮೇಶ್‌ಕುಮಾರ್‌

09:02 AM Mar 05, 2020 | Sriram |

ವಿಧಾನಸಭೆ:”ಬಸವಣ್ಣ, ಮಹಾತ್ಮ ಗಾಂಧಿ, ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಂತಹ ಮಹಾನುಭಾವರಿಗೆ ಎಲ್ಲರಿಗೂ ನಾಮ ಹಾಕಿ ಅವರ ಬಗ್ಗೆ ಮಾತನಾಡುವ ನಮ್ಮದು ಎಂತಹ ಬದುಕು’ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ತಮ್ಮನ್ನೂ ಒಳಗೊಂಡಂತೆ ಸದನದ ಸದಸ್ಯರೆಲ್ಲರ ಮುಂದೆ ಇಟ್ಟ ಪ್ರಶ್ನೆಯಿದು.

Advertisement

ಸಂವಿಧಾನ ಕುರಿತ ಚರ್ಚೆ ಸಂದರ್ಭದಲ್ಲಿ ಒಂದು ಹಂತದಲ್ಲಿ ಭಾವೋದ್ವೇಗಕ್ಕೆ ಒಳಗಾದ ಅವರು,ಬಸವಣ್ಣ, ಗಾಂಧಿ, ಅಂಬೇಡ್ಕರ್‌ ಅವರನ್ನು ನಮ್ಮ ಕಂಟ್ರೋಲ್‌ನಲ್ಲೇ ಇಟ್ಟುಕೊಂಡಿರುತ್ತೇವೆ. ಅವರ ಆದರ್ಶ ಪಾಲಿಸದ ಸಂವಿಧಾನದ ಆಶಯಗಳ ಪ್ರಕಾರ ನಡೆಯದೆ ನಮ್ಮದೂ ಒಂದು ಜೀವನವೇ? ಎಂದು ಬೇಸರ ಹೊರಹಾಕಿದರು.

ನಾವು ನಮ್ಮ ನಂತರ ನಮ್ಮ ಮಕ್ಕಳು, ಸೊಸೆ, ಅಣ್ಣ ತಮ್ಮ ಹೀಗೆ ಕರೆದುಕೊಂಡು ಬರುವ ಬಗ್ಗೆಯೇ ನಮಗೆ ಆಸಕ್ತಿ. ನಮ್ಮ ರಕ್ತ ಸಂಬಂಧಿಕರನ್ನು ದೂರ ಇಡುತ್ತೇವೆ ಎಂದು ವಿಧಾನಸೌಧ ಮುಂದೆ ಬರೆಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಗಾಂಧಿ, ನೆಹರು, ಅಂಬೇಡ್ಕರ್‌, ಭಗತ್‌ಸಿಂಗ್‌ ಸೇರಿ ದೇಶಕ್ಕಾಗಿ ಹೋರಾಟ ಮಾಡಿದ ಸಂವಿಧಾನ ರಚಿಸಿದ ಎಲ್ಲರನ್ನೂ ಗೌರವಿಸಬೇಕು. ಅವರ ತ್ಯಾಗ ಬಲಿದಾನ, ಪರಿಶ್ರಮದಿಂದ ನಾವು ಬಂದು ಇಲ್ಲಿ ನಿಂತಿದ್ದೇವೆ. ನಾವು ನಮ್ಮ ಹೆಂಡತಿ ಮಕ್ಕಳು ಜೈಲಿನಲ್ಲಿ ದೇಶಕ್ಕಾಗಿ ಇರಲಿಲ್ಲ, ಗಾಂಧೀಜಿಯವರ ಪತ್ನಿ ಜೈಲಿನಲ್ಲಿದ್ದಾಗಲೇ ತೀರಿ ಹೋದರು, ಅಂಬೇಡ್ಕರ್‌ ಅವರು ತೀರಿ ಹೋದಾಗ ವಿಮಾನದ ಟಿಕೆಟ್‌ನ ಅವಶ್ಯಕತೆಗಾಗಿ ಅವರ ಮನೆಯೆಲ್ಲಾ ಹುಡುಕಾಡಿದರೂ 2 ಸಾವಿರ ರೂ. ಸಿಕ್ಕಿರಲಿಲ್ಲ. ಅಂತಹ ತ್ಯಾಗ ಮೂರ್ತಿಗಳು ಅವರು ಎಂದು ಹೇಳಿದರು.

ಕಾಂಗ್ರೆಸ್‌ನ ಹಿರಿಯ ನಾಯಕರು ನನ್ನನ್ನು ಬೈಯ್ದುಕೊಂಡರೂ ಪರವಾಗಿಲ್ಲ. 1952 ರಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಅವಿರೋಧವಾಗಿ ಸಂಸತ್‌ಗೆ ಆಯ್ಕೆ ಮಾಡಬೇಕಿತ್ತು. ಅವರ ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಸರ್ಕಾರದಿಂದಲೇ ವ್ಯವಸ್ಥೆ ಮಾಡಬೇಕಿತ್ತು. ಅದು ಯಾಕೆ ಮಾಡಲಿಲ್ಲವೋ ಗೊತ್ತಿಲ್ಲ. ತಪ್ಪು ಯಾರೇ ಮಾಡಿದ್ದರೂ ತಪ್ಪೇ. ನಾನು ಇಲ್ಲಿ ಯಾವುದೇ ಒಂದು ಪಕ್ಷದ ಸದಸ್ಯನಾಗಿ ಮಾತನಾಡುತ್ತಿಲ್ಲ ಎಂದರು.

Advertisement

ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸುವ ಮಸೂದೆ ಮಂಡನೆಗೆ ನೆಹರು ಅವರು ಕಾರಣಾಂತರಗಳಿಂದ ಒಪ್ಪದಿದ್ದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಅಂಬೇಡ್ಕರ್‌. ಇಂದು ಸಚಿವ ಸ್ಥಾನಕ್ಕಾಗಿ ಮಾನ ಮರ್ಯಾದೆ ಬಿಟ್ಟು ಏನೆಲ್ಲಾ ಮಾಡಲಾಗುತ್ತದೆ. ಯಾರಾದರೂ ತಾವು ನಂಬಿದ ತತ್ವ ಸಿದ್ಧಾಂತಕ್ಕೆ ಚ್ಯುತಿ ಬಂದಾಗ ರಾಜೀನಾಮೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.

ಪ್ರಯೋಗ ಮಾಡಿ
ಚುನಾವಣೆ ವ್ಯವಸ್ಥೆ ಸುಧಾರಣೆ ಬಗ್ಗೆ ಮಾತನಾಡುತ್ತೇವೆ. ಟಿ.ಎನ್‌.ಶೇಷನ್‌ ಅವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಹೊಸ ಕಾನೂನು ತರಲಿಲ್ಲ, ಇದ್ದ ಕಾನೂನಿನಲ್ಲೇ ಸುಧಾರಣೆ ತಂದರು. ಈಗಲೂ ಗ್ರಾಮ ಹಾಗೂ ತಾಲೂಕು ಪಂಚಾಯತ್‌ ಚುನಾವಣೆಗಳು ಬರುತ್ತಿವೆ. ಸದಸ್ಯರಿಗೆ ಮೀಸಲಾತಿ ಘೋಷಿಸುವ ಹಾಗೆ ಚುನಾವಣೆಗೆ ಮುನ್ನವೇ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೂ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಘೋಷಿಸಿ. ಚುನಾವಣೆ ನಡೆದ ನಂತರ ಶಾಸಕರಾದ ನಮ್ಮ ಅನುಕೂಲಕ್ಕೆ ತಕ್ಕಂತೆ ನಮಗೆ ಬೇಕಾದ ಹಾಗೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ತರುತ್ತೇವೆ. ಇನ್ನೆಲ್ಲಿ ನಾವು ಸಂವಿಧಾನ ಆಶಯ ಕಾಪಾಡಲು ಸಾಧ್ಯ ಎಂದರು.

ಸಂವಿಧಾನ ರಚನೆಯ ಪೂರ್ವದಲ್ಲಿ ನಡೆದ ವಿದ್ಯಮಾನಗಳು, ರಾಷ್ಟ್ರಧ್ವಜ ನಿರ್ಧಾರ, ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರ, ಸತ್ಯಮೇವ ಜಯತೆ ಘೋಷವಾಕ್ಯ ಎಲ್ಲವನ್ನೂ ಸದನದಲ್ಲಿ ಸವಿಸ್ತಾರವಾಗಿ ವಿವರಿಸಿದ ರಮೇಶ್‌ಕುಮಾರ್‌ ಅವರು, ಅಂಬೇಡ್ಕರ್‌ ಅವರು ಎಲ್ಲ ವರ್ಗದ ಜನರ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನ ರಚಿಸಿದರು. ಆದರೆ, ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಮಾತ್ರ ಅವರು ಸೀಮಿತ ಎಂಬಂತೆ ಬಿಂಬಿಸುವುದು ಬೇಡ ಎಂದು ಹೇಳಿದರು.

ನಿರ್ಣಯ
ಸದನದಲ್ಲಿ ಸಂವಿಧಾನದ ಬಗ್ಗೆ ಚರ್ಚೆ ನಡೆದ ನಂತರ ಕೆಲವೊಂದು ನಿರ್ಣಯ ಕೈಗೊಂಡು ಸಂಸತ್‌ನ ಸ್ಪೀಕರ್‌ ಅವರನ್ನು ಭೇಟಿ ಮಾಡಿ ಸಲ್ಲಿಸಿ. ದೇಶದ ಇತರೆ ರಾಜ್ಯಗಳ ವಿಧಾನಸಭೆ ಸ್ಪೀಕರ್‌ಗಳನ್ನೂ ಜತೆಗೂಡಿಸಿಕೊಳ್ಳಿ. ಏನೇನು ಸುಧಾರಣೆ ಆಗಬೇಕಿದೆ ಎಂಬುದರ ಬಗ್ಗೆ ತಿಳಿಸೋಣ. ಅದನ್ನು ಸ್ವೀಕರಿಸುವುದು ಬಿಡುವುದು ಬೇರೆ. ಆದರೆ, ಅಂತದ್ದೊಂದು ಪ್ರಯತ್ನ ನಮ್ಮ ರಾಜ್ಯದಿಂದಲೇ ಆರಂಭವಾಗಲಿ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಮೇಶ್‌ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next