Advertisement

ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸಲು ಪಕ್ಷದಲ್ಲೇ ಷಡ್ಯಂತ್ರ ನಡೆಯುತ್ತಿದೆ: ಯತ್ನಾಳ

09:53 AM Oct 11, 2019 | keerthan |

ವಿಜಯಪುರ:  ಪ್ರವಾಹ ಸಂತ್ರಸ್ತರ ಬಗ್ಗೆ ಈ ಭಾಗದ ಜನಪ್ರತಿನಿಧಿಯಾಗಿ ನಾನು ಧ್ವನಿ ಎತ್ತದಿದ್ದರೆ ಬಿ. ಎಸ್. ಯಡಿಯೂರಪ್ಪ 15 ದಿನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗಿತ್ತು. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪಕ್ಷದಲ್ಲೇ ಷಡ್ಯಂತ್ರ ನಡೆಯುತ್ತಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೊಂದು ಗಂಭೀರ ಆರೋಪ ಮಾಡಿದ್ದರೆ.

Advertisement

ಬುಧವಾರ ನಗರದ ಹೊರ ವಲಯದಲ್ಲಿರುವ ತಮ್ಮ ತೋಟದ ಮನೆಯಲ್ಲಿ ಪಕ್ಕದ ಕಾರ್ಯಕರ್ತರೊಂದಿಗೆ ಬನ್ನಿ ವಿನಿಮಯ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಇಬ್ಬರು ಕೇಂದ್ರ ಸಚಿವರು ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸಿದ್ದಾರೆ. ಪರಿಣಾಮ ಪ್ರಧಾನಿ ಭೇಟಿಗೆ ಸಿ.ಎಂ.ಗೆ ಅವಕಾಶ ಸಿಗದಂತೆ ಮಾಡಲಾಗುತ್ತಿದೆ. ಈ ಬಗ್ಗೆ ದೆಹಲಿಯಿಂದ ಈಗ ಮಾಹಿತಿ ಸಿಕ್ಕಿದೆ ಎಂದು ಪ್ರಹ್ಲಾದ್ ಜೋಶಿ, ಸದಾನಂದಗೌಡ ವಿರುದ್ಧ ಆರೋಪ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಆದರೆ, ರಾಜ್ಯದ ಸಚಿವರಿಬ್ಬರ ಕುತಂತ್ರದಿಂದ ಯಡಿಯೂರಪ್ಪ ಭೇಟಿಗೆ ಅವಕಾಶ ನಿರಾಕರಿಸಲಾಗುತ್ತದೆ. ಕೇಂದ್ರ ನಾಯಕರಿಗೆ ಈ ಇಬ್ಬರು ಸಚಿವರು ಯಡಿಯೂರಪ್ಪ ಅವರ ಬಗ್ಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಆ ಮೂಲಕ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ನಡೆಸಿದ್ದಾರೆ ಎಂದು ನೇರ ಅರೋಪ ಮಾಡಿದ್ದಾರೆ.

ಯಡಿಯೂರಪ್ಪ ಅವರ ಬಗ್ಗೆ ಅಸಮಾಧಾನ ಇದ್ದರೆ ಕೇಂದ್ರ ನಾಯಕರು ದೆಹಲಿಗೆ ಕರೆಸಿಕೊಂಡು ನಿಮ್ಮ ವಯಸ್ಸು 76 ಆಗಿದೆ ಎಂದು ರಾಜೀನಾಮೆ ಪಡೆದುಕೊಳ್ಳಲಿ. ಆದರೆ ಅವರ ವಿರುದ್ಧದ ಷಡ್ಯಂತ್ರ ಮಾಡುವುದನ್ನು ಈ ಇಬ್ಬರು ನಾಯಕರು ಬಿಡಲಿ ಎಂದು ಸಲಹೆ ನೀಡಿದ್ದಾರೆ.

ಯಡಿಯೂರಪ್ಪ ಜೊತೆ ಅನಂತಕುಮಾರ್ ಹಲವು ಬಾರಿ ಜಗಳ ಆಡುತ್ತಿದ್ದರು. ಆದರೆ ರಾಜ್ಯ, ದೇಶ, ಪಕ್ಷದ ಹಿತದೃಷ್ಟಿಯಿಂದ ವೈಮನಸ್ಸು ಮರೆತು ಒಂದಾಗಿರುತ್ತಿದ್ದರು. ರಾಜ್ಯದ ಈಗಿನ ಕೇಂದ್ರ ಮಂತ್ರಿಗಳಲ್ಲಿ ಅಂಥ ಶಕ್ತಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Advertisement

ಸಂತ್ರಸ್ತರ ಪರ ಧ್ವನಿ ಎತ್ತಿರುವ ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಹೀಗಾಗಿ ಶಿಸ್ತು ಉಲ್ಲಂಘಿಸದ ನಾನು ಪಕ್ಷದ ಕೇಂದ್ರದ ಶೋಕಾಸ್ ನೋಟೀಸಿಗೆ ಉತ್ತರ ನೀಡುವುದಿಲ್ಲ. ಬದಲಾಗಿ ಕೇಂದ್ರ ನಾಯಕರಿಗೆ ರಾಜ್ಯದ ವಾಸ್ತವ ಮನವರಿಕೆ ಮಾಡುಕೊಡಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.‌ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ಮೋದಿ ಅವರು ಅವಕಾಶ ನೀಡಿದರೆ ರಾಜ್ಯದ ಜನರ ಭಾವನೆ ಹೇಳಿಕೊಳ್ಳಲು ನಾನೇನೂ ಹೆದರುವುದಿಲ್ಲ ಎಂದು ಹೇಳಿದರು. ಸಂತ್ರಸ್ತರ ಪರ  ನಾನು ಹೇಳಿಕೆ ನೀಡಿದ ಬೆನ್ನಲ್ಲೇ ರಾಜ್ಯದ ಇಬ್ಬರು ಕೇಂದ್ರ ಸಚಿವರು ದೆಹಲಿಗೆ ಹೋಗಿದ್ದರು. ಅವರು ಪ್ರವಾಹ ಪರಿಹಾರ ತರಲು ಹೋಗಿರಲಿಲ್ಲ. ಬದಲಾಗಿ ನನ್ನ ವಿರುದ್ಧ ಕೇಂದ್ರ ನಾಯಕರಿಗೆ ಚಾಡಿ ಹೇಳಿ ನನಗೆ ನೋಟೀಸ್ ಕೊಡಿಸಲು ಹೋಗಿದ್ದರು ಎಂದು ದೂರಿದರು.

ಇಂಥ ಚಾಡಿಕೋರ ಸಚಿವರಿಂದ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತಿದೆ. ಪಕ್ಷ ಉಳಿಸುವ ಬಯಕೆ ಇದ್ದರೆ ಯಡಿಯೂರಪ್ಪ ಮತ್ತು ಅವರ ವಿರೋಧಿಗಳನ್ನು ಒಟ್ಟಿಗೆ ಕೂಡಿಸಿ ಸಮಸ್ಯೆ ಬಗೆಹರಿಸಿ ಎಂದು ಕೇಂದ್ರ ನಾಯಕರಿಗೆ ಮನವಿ ಮಾಡಿದರು.

ಅಧಿಕಾರಕ್ಕಾಗಿ ನಾನು ಯಾರ ಮನೆ ಕಾಯುವ ಕೆಲಸ ಮಾಡಿಲ್ಲ, ಮಾಡುವುದಿಲ್ಲ. ನಾನು ವಾಜಪೇಯಿ ಅವರ ಸರಕಾರದಲ್ಲಿ ಕರ್ನಾಟಕದಿಂದ ಬಿಜೆಪಿಯಿಂದ ಕೇಂದ್ರ ಸಚಿವನಾದ ನಾಲ್ಕನೇ ವ್ಯಕ್ತಿ. ಅನಂತಕುಮಾರ, ಧನಂಜಯ ಕುಮಾರ, ಬಾಬಾಗೌಡ ಪಾಟೀಲ ಹಾಗೂ ನಾನು ಸಚಿವರಾಗಿದ್ದೆವು. ಯಡಿಯೂರಪ್ಪ ಅವರೊಂದಿಗೆ ಚೆನ್ನಾಗಿದ್ದರೆ ಸದಾನಂದ ಗೌಡ, ಜಗದೀಶ ಶಟ್ಟರ್ ಇವರೆಲ್ಲ ಸಿ.ಎಂ. ಆಗುತ್ತಿರಲಿಲ್ಲ. ಆದರೆ ನಾನು ಅಧಿಕಾರಕ್ಕಾಗಿ ಅನ್ಯಾಯ ಕಂಡರೂ ಕಣ್ಮುಚ್ಚಿ ಕುಳಿತುಕೊಳ್ಳದೇ ಜನರ ಪರವಾಗಿ ಯಾವಾಗಲೂ ಧ್ವನಿ ಎತ್ತುತ್ತೇನೆ ಎಂದು ತಮ್ಮ ನಡೆಯನ್ನು ಸಮರ್ಥಿಸಿದರು.

ಅಗಲೇ ನಾನು ಪಕ್ಷದ ರಾಜ್ಯ ಉಪಾಧ್ಯಕ್ಷ ಆಗಿದ್ದೆ. ಪ್ರಹ್ಲಾದ ಜೋಶಿ ಧಾರವಾಡ ಜಿಲ್ಲೆಯ ಅಧ್ಯಕ್ಷ ಆಗಿದ್ದರು‌. ಹೀಗಾಗಿ ಪಕ್ಷದಲ್ಲಿ ನನ್ನ ಹಿರಿತನಕ್ಕೂ ಬೆಲೆ ಇದೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ನನ್ನ ವಿರುದ್ದ ಷಡ್ಯಂತ್ರ ಮಾಡಿ ವಿಧಾನ ಪರಿಷತ್ ಚುನಾವಣೆಯಲ್ಲಿ ನನಗೆ ಟಿಕೇಟ್ ನೀಡಲಿಲ್ಲ, ಬದಲಾಗಿ ನನ್ನನ್ನು ಪಕ್ಷದಿಂದಲೇ ಹೊರ ಹಾಕಿದರು. ಆದರೆ‌ ಪಕ್ಷೇತರನಾಗಿ ಸ್ಪರ್ಧಿಸಿದರೂ ಜನರ ಪರವಾಗಿರುವ ನನ್ನನ್ನು ಜನರೇ ಆಯ್ಕೆ ಮಾಡಿದ್ದರು. ಈಗಲೂ ಇವರು ಷಡ್ಯಂತ್ರ ಮಾಡಿ ನನ್ನನ್ನು ಹೊರ ಹಾಕಿದರೆ ನನಗೇನೂ ಹಾನಿಯಿಲ್ಲ ಎಂದರು.

ಪಕ್ಷದ ಹೈಕಮಾಂಡ್ ಪಕ್ಷಕ್ಜೆ ನನ್ನ ಸೇವೆಯನ್ನು ಗಮನಿಸಿ ಮರಳಿ ಪಕ್ಷಕ್ಕೆ ಸೇರ್ಪಡೆ ಸಂದರ್ಭದಲ್ಲಿ ಇವರೇನೂ ನನ್ನನ್ನು ಮನಪೂರ್ವಕ ಸ್ವಾಗತಿಸಿಲ್ಲ. ಪಕ್ಷದ ಅಧ್ಯಕ್ಷ ಅಮಿತ್ ಶಾ, ಪ್ರಕಾಶ ಜಾವಡೇಕರ್ ನನ್ನ ಶಕ್ತಿಯನ್ನು ನೋಡಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸೇರಿಸಿಕೊಂಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next