Advertisement

ಹೀಗಿದೆ ನೋಡಿ ಸರ್ಕಾರಿ ಆಸ್ಪತ್ರೆ

10:40 AM May 09, 2019 | Naveen |

ಬಸವನಬಾಗೇವಾಡಿ: ಸರಕಾರಿ ಆಸ್ಪತ್ರೆ ಅಂದಾಕ್ಷಣ ಹೆಚ್ಚಾಗಿ ಜನರು ಮೂಗು ಮುರಿಯುವುದೆ ಹೆಚ್ಚಾಗಿರುವ ಈ ದಿನದಲ್ಲಿ ಅದಕ್ಕೆ ವಿರುದ್ಧವಾಗಿ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿಯಾಗಿ ಹೊರ ಹೊಮ್ಮುತ್ತಿದೆ.

Advertisement

ಹೌದು ಇದು ಅಚ್ಚರಿ ಎನಿಸಿದರೂ ಸತ್ಯ. ಸ್ಥಳೀಯ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಅವರ ಮಾರ್ಗದರ್ಶನ, ಇಲ್ಲಿನ ವೈದ್ಯಾಧಿಕಾರಿಗಳ ಹಾಗೂ ಸಿಬ್ಬಂದಿಗಳ ನಿಸ್ವಾರ್ಥ ಸೇವೆಯಿಂದ ಬಡ ರೋಗಿಗಳ ಪಾಲಿಗೆ ಈ ಆಸ್ಪತ್ರೆ ಆಶಾಕಿರಣವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿನ ಸೌಲಭ್ಯಗಳು ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಸಿಗುತ್ತಿರುವುದು ಸಂತಸಕರ ಸಂಗತಿಯಾಗಿದೆ.

ಸೌಲಭ್ಯಗಳು: ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಸಿಜರಿಯನ್‌ ಶಸ್ತ್ರಚಿಕಿತ್ಸೆ, ಕಣ್ಣಿನ ಕಾಂಟ್ರ್ಯಾಕ್ಟ ಶಸ್ತ್ರ ಚಿಕಿತ್ಸೆ, ಆಯೂಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ ಸ್ಕೀಮ್‌, ತೀವ್ರ ನಿಗಾ ಘಟಕ, ಡಯಾಲಿಸಿಸ್‌ ಘಟಕ, ಟೆಲಿಮೆಡಿಸೆನ್‌, ಕಪ ಪರೀಕ್ಷಾ ಕೇಂದ್ರ, ಇ-ಹಾಸ್ಪಿಟಲ್, ಗಾರ್ಡ್‌ನ್‌, ಆಯೂಷ್‌ ಗಾರ್ಡನ್‌, ಪಾರ್ಕಿಂಗ್‌ ವ್ಯವಸ್ಥೆ, ರೋಗಿಗಳ ಸಂಬಂಧಿಕರಿಗೆ ವಿಶ್ರಾಂತಿ ಧಾಮ, ಕ್ಯಾಂಟೀನ್‌ ವ್ಯವಸ್ಥೆ, ನಂದಿನಿ ಮಿಲ್ಕ ಪಾರ್ಲರ್‌, ಹಾಪ್‌ಕಾಮ್ಸ್‌, ಶುದ್ಧ ಕುಡಿಯುವ ನೀರಿನ ಘಟಕದಿಂದ ರೋಗಿಗಳಿಗೆತುಂಬ ಅನುಕೂಲವಾಗುತ್ತಿದೆ.

ಆಸ್ಪತ್ರೆಗೆ ಪ್ರತಿ ನಿತ್ಯ 500ರಿಂದ 600 ಹೊರ ರೋಗಿಗಳು ಬರುತ್ತಾರೆ. ಪ್ರತಿ ತಿಂಗಳು 120ರಿಂದ 200ರವರೆಗೆ ಹೆರಿಗೆಯಾಗುತ್ತವೆ. ಪ್ರತಿ ತಿಂಗಳು 150ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಒಳ ರೋಗಿಗಳಿಗೆ ಅಗತ್ಯವಿರುವ ಸೌಲಭ್ಯಗಳು ಸೇರಿದಂತೆ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಲಾಗುತ್ತಿದೆ. ವಿದ್ಯುತ್‌ ಸರಬರಾಜು ನಿಂತು ಹೋದಲ್ಲಿ ಜನರೇಟರ್‌ ವ್ಯವಸ್ಥೆ ಮಾಡಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಆರೋಗ್ಯ ಸೌಲಭ್ಯ, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ನೀಡುವ ಕಾಯಕಲ್ಪ ಪ್ರಶಸ್ತಿ ಈ ಬಾರಿ ಬಸವನಬಾಗೇವಾಡಿ ತಾಲೂಕಾಸ್ಪತ್ರೆಗೆ ಸಂದಿದ್ದು ಅತ್ಯಂತ ಸ್ತುತ್ಯರ್ಹವಾಗಿದೆ. ಸಿಬ್ಬಂದಿಗಳ ನಿಸ್ವಾರ್ಥ ಸೇವೆಗೆ ಈ ಪ್ರಶಸ್ತಿ ಪ್ರೋತ್ಸಾಹ ನೀಡಲು ಸಹಕಾರಿಯಾಗಿದೆ.

Advertisement

ವೈದ್ಯರ ಕೊರತೆ: ಚಿಕ್ಕ ಮಕ್ಕಳ ತಜ್ಞರು, ಕಿವಿ, ಮೂಗು, ಗಂಟಲು, ಚರ್ಮ ರೋಗ ಹಾಗೂ ಮಾನಸಿಕ ತಜ್ಞರ ಕೊರತೆ ಇದೆ. ಈ ವೈದ್ಯರು ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿದರೆ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾಗುತ್ತದೆ. ಆರೋಗ್ಯ ಸಚಿವರಾದ ಶಿವಾನಂದ ಪಾಟೀಲ ಅಗತ್ಯ ವೈದ್ಯರನ್ನು ನೇಮಿಸುವ ಮೂಲಕ ಮತ್ತಷ್ಟು ಸೌಲಭ್ಯಗಳು ಮುಂದಿನ ದಿನಗಳಲ್ಲಿ ದೊರಕಿಸಿ ಕೊಡಬೇಕೆಂಬುದು ನಾಗರಿಕರ ಆಶಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next