Advertisement

ಕೇಂದ್ರದ ವಿರುದ್ಧ ಹರಿಹಾಯ್ದ ಸಚಿವ

10:26 AM Jul 07, 2019 | Team Udayavani |

ಬಸವನಬಾಗೇವಾಡಿ: ದೇಶದ ಯಾವ ರಾಜ್ಯಸರಕಾರ ಕೂಡಾ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಿಲ್ಲ. ಆದರೆ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ರಾಜ್ಯದ ರೈತರ ಸಾಲ ಮನ್ನಾ ಮಾಡಿ ರೈತರ ಪರವಾಗಿ ನಿಂತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದರು.

Advertisement

ಶನಿವಾರ ಪಟ್ಟಣದ ತಹಶೀಲ್ದಾರ್‌ ಕಚೇರಿ ಮುಂದೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಕೃಷಿಕ ಸಮಾಜ, ಮಠಾಧಿಧೀಶರ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್‌ ಸಮ್ಮಿಶ್ರ ಸರಕಾರದಲ್ಲಿ 600 ಕೋಟಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ 900 ಕೊಟಿ ರೂ. ರೈತರ ಸಾಲ ಮನ್ನಾ ಮಾಡಲಾಗಿದೆ. ಆದರೆ ರಾಜ್ಯಸರಕಾರ ಎರಡೆರೆಡು ಬಾರಿ ರೈತರ ಸಾಲ ಮನ್ನಾ ಮಾಡಿದರು ಕೂಡಾ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತ್ತು ದೇಶದ ಜನತೆ ಬಿಜೆಪಿ ಸರಕಾರದ ಮೇಲೆ ಬಾರಿ ನಿರೀಕ್ಷೆ ಇಟ್ಟು ರಾಜ್ಯದಲ್ಲಿ ಮತ್ತು ದೇಶದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ.ಆದರೆ ಕೇಂದ್ರ ಸರಕಾರ ಮಂಡಿಸಿರುವ ಬಜೆಟ್‌ನಲ್ಲಿ ರಾಜ್ಯದ ಮತ್ತು ದೇಶದ ರೈತರ ನಿರೀಕ್ಷೆಯನ್ನು ಹುಸಿ ಮಾಡಿದೆ ಎಂದರು.

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಜಂಟಿಯಾಗಿ ಬರಗಾಲದ ಸರ್ವೇ ಕಾರ್ಯ ಮಾಡಿ ಕೇಂದ್ರ ಸರಕಾರಕ್ಕೆ ಸಿಬಿಆರ್‌ ವರದಿ ಮಾಡಿದಾಗ ಮಾತ್ರ ಅದು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲು ಸಾಧ್ಯವಾಗುತ್ತದೆ. ಕೇಂದ್ರ ಸರಕಾರ ಬರ ಪರಿಹಾರ ನೀಡಿದಾಗ ರಾಜ್ಯ ಸರಕಾರ ತನ್ನ ಪಾಲಿನ ಬರ ಪರಿಹಾರ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Advertisement

ಈಗ ಬಸವನಬಾಗೇವಾಡಿ ತಾಲೂಕು ಬರಗಾಲ ಪೀಡಿತ ಪ್ರದೇಶದಿಂದ ಕೈ ಬಿಟ್ಟು ಹೋಗಿದ್ದು ಕೇವಲ ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಲ್ಲ, ಕೇಂದ್ರ ಸರಕಾರ ಅಧಿಕಾರಿಗಳ ನಿರ್ಲಕ್ಷ್ಯದಿಂದ. ನಾನು ತಕ್ಷಣ ಜಿಲ್ಲಾಧಿಕಾರಿ ಹಾಗೂ ತಾಲೂಕಾಧಿಕಾರಿಗಳಿಂದ ಸಮಗ್ರ ಮಾಹಿತಿ ತರಿಸಿಕೊಂಡು ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚಿಸಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದ ಅವರು, ರೈತರು ಅಹೋರಾತ್ರಿ ಧರಣಿ ಕೈ ಬಿಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ರೈತರು ಸಚಿವರೆ ತಮ್ಮ ವಿರುದ್ಧ ಈ ಹೋರಾಟವಲ್ಲ. ನಮ್ಮದು ಕೇಂದ್ರ ಸರಕಾರದ ವಿರುದ್ಧ ಹೋರಾಟ ಇದೆ. ನೀವು ಕೂಡಾ ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಿ ನಮಗೆ ನ್ಯಾಯ ಒದಗಿಸಿಕೊಡಿ ಅಂದಾಗ ಮಾತ್ರ ನಾವು ಸತ್ಯಾಗ್ರಹ ಕೈ ಬಿಡುವುದಾಗಿ ಹೇಳಿದರು.

ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈತರ ಕೆಲಸ ಕಾರ್ಯಕ್ಕೆ ಮಾತ್ರ ಕಾಯ್ದೆ ಕಾನೂನು ಅಡ್ಡಿ ಬರುತ್ತವೆ ಎಂಬ ನೆಪ ಬಿಟ್ಟು ರೈತರ ಪರಿಸ್ಥಿತಿಯನ್ನು ಅರಿತುಕೊಂಡು ಕೇಂದ್ರ ಸರಕಾರ ತಕ್ಷಣ ಈ ಪ್ರದೇಶವನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್. ಪಾಟೀಲ ಮಾತನಾಡಿ, ರಾಜ್ಯ ಸರಕಾರ ತಕ್ಷಣ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಿ ಬಸವನಬಾಗೇವಾಡಿಯನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ಪ್ರಸ್ತಾವಣೆ ಸಲ್ಲಿಸಬೇಕು ಎಂದು ಹೇಳಿದರು.

ಪಟ್ಟಣದ ವಿರಕ್ತಮಠ ಸಿದ್ದಲಿಂಗ ಶ್ರೀಗಳು ಮಾತನಾಡಿದರು. ಈ ವೇಳೆ ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ, ಕರವೇ ಜಿಲ್ಲಾ ಉಪಾಧ್ಯಕ್ಷ ಅಶೋಕ ಹಾರಿವಾಳ, ಶಾಂತಗೌಡ ಬಿರಾದಾರ, ಈರಣ್ಣ ಗುಳೇದಗುಡಿ, ಸದಾಶಿವ ಬರಟಗಿ, ಶಾರದಾ ಲಮಾಣಿ, ಮಾಚಪ್ಪ ಹೊರ್ತಿ, ಚಂದ್ರಾಮ ತೆಗ್ಗಿ, ಸಿದ್ರಾಮಪ್ಪ ಡೋಣೂರ, ಸಂಗಪ್ಪ ಯಳಗಂಡಿ, ಮಾಜಪ್ಪ ಹಟ್ಟಿ, ಶ್ರೀಕಾಂತ ಯಳಗಂಡಿ, ಬಾಬುಲಾಲ್ ಕೊಚಗಿ, ಹೊನಕೇರಪ್ಪ ತೆಲಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next