ಬೀದರ: ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನಲೆ ಶನಿವಾರ ನಡೆಯುತ್ತಿರುವ ಮತದಾನ ನಿಧಾನವಾಗಿ ಕಾವೇರುತ್ತಿದ್ದು, ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆವರೆಗೆ ಶೇ.29.00ರಷ್ಟು ಮತದಾನವಾಗಿದೆ.
ಕ್ಷೇತ್ರದಲ್ಲಿ ಈವರೆಗೆ ಯಾವುದೇ ಅಹಿತಕರ ಘಟನೆ ಆಗಿರುವ ಕುರಿತು ವರದಿಯಾಗಿಲ್ಲ. ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಮತದಾರರು ಸಾಲಿನಲ್ಲಿ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದರೂ ಮತದಾನ ವೇಳೆ ಸಾರ್ವಜನಿಕರು ನಿರ್ಲಕ್ಷ್ಯ ತೋರುತ್ತಿದ್ದು, ಗ್ರಾಮೀಣ ಭಾಗದಲ್ಲಿ ಅಟೋಗಳಲ್ಲಿ ಯಾವುದೇ ಅಂತರ ಇಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಕ್ಕೆ ಆಗಮಿಸುತ್ತಿರುವುದು ಆತಂಕ ಹೆಚ್ಚಿಸುವಂತೆ ಮಾಡಿದೆ.
ಹೆಚ್ಚುವರಿ 62 ಮತಗಟ್ಟೆಗಳು ಸೇರಿದಂತೆ ಒಟ್ಟು 326 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 326 ಮತಗಟ್ಟೆಗಳ ಪೈಕಿ 95 ಸೂಕ್ಷ್ಮ ಮತಗಟ್ಟೆಗಳೆಂದು ಮತ್ತು 231 ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 1,14,794 ಮಹಿಳಾ ಮತದಾರರು, 1,24,984 ಪುರುಷ ಮತದಾರರು ಮತ್ತು ಇತರೇ ನಾಲ್ಕು ಜನರು ಸೇರಿ ಒಟ್ಟು 2,39,782 ಮತದಾರರು ಇದ್ದಾರೆ.
ನಾಮಪತ್ರಗಳನ್ನು ಸಲ್ಲಿಸಿದ 14 ಅಭ್ಯರ್ಥಿಗಳ ಪೈಕಿ ಇಬ್ಬರು ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದು ಅಂತಿಮವಾಗಿ ಕಣದಲ್ಲಿ 12 ಜನ ಅಭ್ಯರ್ಥಿಗಳಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕರ್ನಾಟಕ ರಾಷ್ಟ್ರ ಸಮಿತಿ, ಶಿವಸೇನಾ, ಹಿಂದೂಸ್ತಾನ ಜನತಾ ಪಾರ್ಟಿ, ಎಂಐಎಂ, ಅಖಿಲ ಭಾರತೀಯ ಮುಸ್ಲಿಂ ಲಿಗ್ (ಸೆಕ್ಯೂಲರ್) ಪಕ್ಷಗಳಿಂದ ಮತ್ತು ಸ್ವತಂತ್ರ ಅಭ್ಯರ್ಥಿಗಳಾಗಿ ನಾಲ್ವರು ಸೇರಿ ಒಟ್ಟು 12 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.