Advertisement

ಶಾಲಾ ಶೌಚಾಲಯ ವರದಿ ನೀಡಲು ಸೂಚನೆ

01:25 PM Dec 25, 2019 | Naveen |

ಬಸವಕಲ್ಯಾಣ: ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಗೀತಾ ಪಂಡಿತರಾವ್‌ ಚಿದ್ರಿ ಹಾಗೂ ಶಾಸಕ ಬಿ.ನಾರಾಯಣರಾವ್‌ ಸಮ್ಮುಖದಲ್ಲಿ ಮಂಗಳವಾರ ನಗರದ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜೆ.ಹಳ್ಳದ ಮಾತನಾಡಿ, ತಾಲೂಕಿನಲ್ಲಿ ಒಟ್ಟು 233 ಶಾಲೆಗಳಿದ್ದು, 99 ಶಿಕ್ಷಕರ ಕೊರತೆ ಇದೆ ಮತ್ತು 162 ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಿ, ನೂತನ ಕಾಮಗಾರಿಗೆ ಶಾಸಕರು ಮಂಜೂರು ನೀಡಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಮಾತನಾಡಿ, ಬಹುತೇಕ ಶಾಲೆಗಳಲ್ಲಿ ಶೌಚಾಲಯಗಳ ಸಮಸ್ಯೆ ಇದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಯಾಕೆ ಶೌಚಾಲಯಗಳು ಉಪಯೋಗಿಸುವ ಸ್ಥಿತಿಯಲ್ಲಿಲ್ಲ. ವಿದ್ಯಾರ್ಥಿನಿಯರು ಶೌಚಕ್ಕೆ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದಾಗ, ಸರ್ಕಾರ ಕೊಡುತ್ತಿರುವ ಹಣದಲ್ಲಿ ಶೌಚಾಲಯ ನಿರ್ವಹಣೆ ಮಾಡಲು ಆಗುತ್ತಿಲ್ಲ ಎನ್ನುವ ಉತ್ತರ ಬಂದಿತು. ಆಗ, ನಿಮಗೆ ಬೇಕಾದರೆ ಎಲ್ಲವನ್ನೂ ಮಾಡುತ್ತೀರಿ. ಶೌಚಾಲಯ ವಿಷಯದಲ್ಲಿ ಈ ರೀತಿ ಉತ್ತರ ನೀಡುವುದು ಸರಿಯಲ್ಲ. ಮೊದಲು ಶೌಚಾಲಯದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದರು. ಅಲ್ಲದೇ ಕಳೆದ ವರ್ಷಕ್ಕಿಂತ ಈ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.80ರಷ್ಟು ಬರಬೇಕು. ಇಲ್ಲದಿದ್ದರೆ ಕಲಬುರಗಿ ಮತ್ತು ರಾಯಚೂರಿಗೆ ಹೋಗಬೇಕಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು. ಶಿಕ್ಷಕರು ಹಾಗೂ ಮುಖ್ಯಗುರುಗಳು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗುವುದಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ.

ಹೀಗಾದರೆ ಉತ್ತಮ ಫಲಿತಾಂಶ ಬರಲು ಹೇಗೆ ಸಾಧ್ಯ. ಹೀಗಾಗಿ ಶಿಕ್ಷಕರ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಆರ್‌ಟಿಒ ಜಿ.ಕೆ.ಬಿರಾದಾರ್‌ ಮಾತನಾಡಿ, ತಡೋಳಾ ಹತ್ತಿರ ನಮ್ಮ ಇಲಾಖೆ ನೂತನ ಕಟ್ಟಡ ನಿರ್ಮಾಣಕ್ಕಾಗಿ 8 ಎಕರೆ ಭೂಮಿ ಮಂಜೂರು ಮಾಡಿ, 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಬೈಕ್‌ ಮತ್ತು ಖಾಸಗಿ ವಾಹನಗಳ ನಂಬರ್‌ ಪ್ಲೇಟ್‌ ಮೇಲೆ ರಾಜಕೀಯ ವ್ಯಕ್ತಿಗಳು ತಾಪಂ, ಜಿಪಂ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಎಂದು ಬರೆಯುವಂತಿಲ್ಲ. ಇದಕ್ಕೆ ಸಂಬಂಧ ಪಟ್ಟಂತೆ ಸರ್ಕಾರದಿಂದ ಆದೇಶ ಬಂದಿದೆ. ಹೀಗಾಗಿ ಅದನ್ನು ತೆಗೆಯಲು ಏಳು ದಿವಸಗಳ ಕಾಲದ ಗಡುವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕ ಬಿ.ನಾರಾಯಣರಾವ್‌ ಮಾತನಾಡಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಮತ್ತು ಗ್ರಾಪಂಗಳಲ್ಲಿ ಲೈಸನ್ಸ್‌ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಿ. ಇದರಿಂದ ಅಪಘಾತಗಳು ಸಂಭವಿಸಿದರೆ ಬಡ ಕುಟುಂಬಗಳಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ಅಧಿ ಕಾರಿಗೆ ಸಲಹೆ ನೀಡಿದರು.

Advertisement

ಸಮಾಜ ಕಲ್ಯಾಣ ಇಲಾಖೆ ಅಧಿ ಕಾರಿ ಜಿ.ಎಸ್‌. ಲಿಂಗರಾಜ್‌ ಅರಸ್‌ ಮಾತನಾಡಿ, ಇಲಾಖೆ ವ್ಯಾಪ್ತಿಯಲ್ಲಿ 16 ಹಾಸ್ಟೆಲ್‌ಗ‌ಳಿದ್ದು, ಅವುಗಳಲ್ಲಿ ಮುಂಚಳಂಬ ಮತ್ತು ಬಟಗೇರಾದಲ್ಲಿ ಬಾಡಿಗೆ ಕಟ್ಟದಲ್ಲಿ ನಡೆಸಲಾಗುತ್ತಿದೆ. ಮತ್ತು ಸಿಬ್ಬಂದಿಗಳ ಕೊರತೆ ಇದೆ. ಒಬ್ಬ ವಿದ್ಯಾರ್ಥಿಗೆ 1500 ರೂ. ಬರುತ್ತದೆ ಎಂದು ತಿಳಿಸಿದರು. ಹಾಸ್ಟೆಲ್‌ನಲ್ಲಿ ಮಕ್ಕಳಿಗೆ ನೀಡುವ ಹಾಲಿನಲ್ಲಿ ನೀರು ಬೆರೆಸಿ ನೀಡಲಾಗುತ್ತಿದೆ.

ಆಹಾರದಲ್ಲಿ ತರಕಾರಿ ಬಳಕೆ ಮಾಡಲಾಗುತ್ತಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಅದನ್ನು ಸುಧಾರಿಸಿಕೊಳ್ಳಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಾಸ್ಟೆಲ್‌ಗ‌ಳಿಗೆ ಆಕಸ್ಮಿಕ ಭೇಟಿ ನೀಡಿದಾಗ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಜಿಪಂ ಅಧ್ಯಕ್ಷೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಿಆರ್‌ಈ ಅ ಧಿಕಾರಿ ರಾಜಕುಮಾರ ಸಾಹುಕಾರ ಮಾತನಾಡಿ, ಒಟ್ಟು 44 ಕಾಮಗಾರಿಗಳ ಯೋಜನೆ ರೂಪಿಸಿದ್ದು, ಅದರಲ್ಲಿ 24 ಪ್ರಾರಂಭ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ನಂತರ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪರಿಶೀಲನೆ ನಡೆಯಿತು.

ಕೋಹಿನೂರ ಜಿಪಂ ಸದಸ್ಯ ಆನಂದ ಪಾಟೀಲ ಮಾರತನಾಡಿ, ಬೇಡರ್‌ ವಾಡಿ ಮದರ್‌ ವಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೀರಿಗಾಗಿ ಮಂಜೂರಾದ ಅನುದಾನದಲ್ಲಿ ಶೇ.70ರಷ್ಟು ಹಣ ಖರ್ಚು ಮಾಡಲಾಗಿದೆ. ಆದರೂ ಗ್ರಾಮಸ್ಥರಿಗೆ ಈವರೆಗೂ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಗೆ ತರಾಟೆಗೆ ತೆಗೆದುಕೊಂಡರು. ನಂತರ 20 ದಿನದ ಒಳಗೆ ಅದನ್ನು ಪೂರ್ಣಗೊಳಿಸಬೇಕು ಎಂದು ಅಧ್ಯರು ಅಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಾಲೂಕು ಪಂಚಾಯತ್‌ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಜಿಪಂ ಸದಸ್ಯರಾದ ಗುಂಡುರೆಡ್ಡಿ ಹಣಮಂತವಾಡಿ (ಆರ್‌), ಅಣ್ಣಾರಾವ್‌ ರಾಠೊಡ, ಸುಧಿಧೀರ ಕಾಡಾದಿ, ಆನಂದ ಪಾಟೀಲ, ತಾಪಂ ಇಒ ಮಡೋಳಪ್ಪಾ ಪಿ.ಎಸ್‌. ಸೇರಿದಂತೆ ಮತ್ತಿತರರು ಇದ್ದರು.

ಭೂಸೇನಾ ನಿಗಮ ಅಧಿ ಕಾರಿಗೆ ನೋಟಿಸ್‌: ಬಸವಕಲ್ಯಾಣ ಭೂಸೇನಾ ನಿಗಮ ಅಧಿಕಾರಿಗೆ ಮತ್ತು ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಜಿಪಂ.ಅಧ್ಯಕ್ಷೆ ಗೀತಾ ಪಂಡಿತರಾವ್‌ ಚಿದ್ರಿ ಅವರು ಸ್ಥಳದಲ್ಲಿ ಮಡೋಳಪ್ಪಾ ಪಿ.ಎಸ್‌.ಅವರಿಗೆ ಆದೇಶ ಮಾಡಿದರು.

ಪಿಆರ್‌ಈ-ಪಾಟೀಲ ನಡುವೆ ವಾಗ್ವಾದ್‌: ಸಿಸಿ ರಸ್ತೆ ಕಾಮಗಾರಿ ವಿಷಯಕ್ಕೆ ಸಂಬಂಧ ಪಟ್ಟಂತೆ ಪಿಆರ್‌ಈ ಅಧಿಕಾರಿ ಹಾಗೂ ಜಿಪಂ ಸದಸ್ಯ ಪಾಟೀಲ ನಡುವೆ ವಾಗ್ವಾದ ನಡೆಯಿತು. ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಮಧ್ಯ ಪ್ರವೇಶಿಸಿ, ಇಬ್ಬರನ್ನೂ ಸಮಾಧಾನಗೊಳಿಸಿ ಸಭೆಯನ್ನು ಮುಂದುವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next