ಬಸವಕಲ್ಯಾಣ: ಮಕ್ಕಳಿಂದ ತೊಂದರೆ ಮತ್ತು ನಿರ್ಲಕ್ಷಕ್ಕೆ ಒಳಗಾದ ಹಿರಿಯ ನಾಗರಿಕರು ತಮ್ಮ ಜೀವನ ಸಾಗಿಸಲು ಮತ್ತು ಬೇಡಿಕೆ ಈಡೇರಿಸಿಕೊಳ್ಳುವುದಕ್ಕಾಗಿ ಸರ್ಕಾರ ಜಾರಿಗೆ ತಂದ ಪೋಷಕರು ಮತ್ತು ಹಿರಿಯ ನಾಗಿಕರ ನಿರ್ವಹಣೆ ಹಾಗೂ ಕಲ್ಯಾಣ ಅಭಿವೃದ್ಧಿ ಕಾಯ್ದೆ-2007ರಡಿ ಅರ್ಜಿ ಸಲ್ಲಿಸಿ ನ್ಯಾಯ ಪಡೆಯಬಹುದಾಗಿದೆ ಎಂದು ಸಹಾಯಕ ಆಯುಕ್ತ ಜ್ಞಾನೇಂದ್ರಕುಮಾರ ಗಂಗವಾರ ತಿಳಿಸಿದ್ದಾರೆ.
2007ರಲ್ಲಿ ಜಾರಿಗೆ ಬಂದಿರುವ ಈ ಕಾಯ್ದೆ ಅನ್ವಯ ಸಿವಿಲ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ ಹಿರಿಯನಾಗರಿಕರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿ, ಮಾಸಿಕ ನಿರ್ವಹಣಾ ವೆಚ್ಚ ನೀಡುವಂತೆ ಆದೇಶ ಮಾಡಲಾಗುತಿತ್ತು. ಆದರೆ ಕೋರ್ಟ್‌ನಲ್ಲಿ ಹೆಚ್ಚು ಪ್ರಕರಣಗಳು ಇರುವುದರಿಂದ ಹಿರಿಯ ನಾಗರಿಕರಿಗೆ ಕೂಡಲೇ ನಿರ್ವಹಣಾ ವೆಚ್ಚ ಸಿಗಬೇಕೆಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ತೊಂದರೆಗೆ ಒಳಗಾದ ಹಿರಿಯ ನಾಗರಿಕರು ನಿರ್ವಹಣಾ ವೆಚ್ಚಕ್ಕಾಗಿ ತಹಶೀಲ್ದಾರ್ ಕಚೇರಿಯಲ್ಲಿ, ಗ್ರಾಮದ ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿ ಬಳಿ ಸಿಗುವ ನಮೂನೆ-ಎ ಅರ್ಜಿ ತುಂಬಿ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ. ಸರ್ಕಾರದ ನಿಯಮದ ಪ್ರಕಾರ 60 ವರ್ಷ ಮೇಲ್ಪಟ್ಟ ವ್ಯಕ್ತಿಗಳನ್ನು ಹಿರಿಯನಾಗರಿಕರು ಎಂದು ಪರಿಗಣಿಸಲಾಗುತ್ತಿದೆ. ಏಕೆಂದರೆ ಅವರು ಶಾರೀರಿಕ ಮತ್ತು ಮಾನಸಿಕವಾಗಿ ಕುಗ್ಗಿ ಕೆಲಸ ಮಾಡಲು ಆಗುವುದಿಲ್ಲ. ಅಂತಹ ಹಿರಿಯನಾಗರಿಕರು ನಿರ್ಲಕ್ಷಕ್ಕೆ ಒಳಗಾಗುವುದು ಹೆಚ್ಚಾಗಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಕಾಯ್ದೆ ಜಾರಿ ಮಾಡಲಾಗಿದೆ. ಯಾರ ವಿರುದ್ಧ ನಿರ್ವಹಣೆ ಪ್ರಕರಣ ದಾಖಲಾಗುತ್ತದೊ ಅಂಥವರಿಗೆ 2 ಅಥವಾ ಮೂರು ಸಲ ನೋಟಿಸ್ ನೀಡಿ, ವಿಚಾರಣೆಗೆ ಒಳಪಡಿಸಿ ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುತ್ತದೆ. ಆಗದೆ ಇದ್ದಲ್ಲಿ ಮಗನ ಆರ್ಥಿಕ ಆದಾಯ ನೋಡಿಕೊಂಡು ಪ್ರತಿ ತಿಂಗಳು ಗರಿಷ್ಠ 10 ಸಾವಿರ ರೂ. ನಿರ್ವಹಣೆಗಾಗಿ ವೆಚ್ಚಕ್ಕೆ ಆದೇಶ ಮಾಡಲಾಗುವುದು. ಒಂದು ವೇಳೆ ಅವರು ಒಪ್ಪದೆ ಇದ್ದಲ್ಲಿ ಕಾಯ್ದೆ ಹಾಗೂ ಕಾನೂನು ಪ್ರಕಾರ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಜ್ಞಾನೇಂದ್ರಕುಮಾರ ಗಂಗವಾರ ತಿಳಿಸಿದ್ದಾರೆ.
ಹಿರಿಯ ನಾಗರಿಕರ ನಿರ್ವಹಣಾ ಕಾಯ್ದೆ ಜಾರಿಗೆ ಬಂದು ಸಾಕಷ್ಟು ವರ್ಷಗಳಾಗಿವೆ. ಆದರೂ ಜನರಲ್ಲಿ ಈ ಕಾಯ್ದೆ ಬಗ್ಗೆ ಮಾಹಿತಿ ಇಲ್ಲ. ಇದರಿಂದ ಹಿರಿಯನಾಗರಿಕರು ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ಈಗಾಗಲೇ ತಾಪಂ ಇಒ ಹಾಗೂ ಸಿಡಿಪಿಒ ಅಧಿಕಾರಿಗಳಿಗೆ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಮತ್ತು ಆಶಾ ಕಾರ್ಯಕರ್ತೆಯರಿಂದ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲು ಆದೇಶ ನೀಡಲಾಗುವುದು.
• ಜ್ಞಾನೇಂದ್ರಕುಮಾರ ಗಂಗವಾರ,
ಸಹಾಯಕ ಆಯುಕ್ತರು ಬಸವಕಲ್ಯಾಣ