ಬಸವಕಲ್ಯಾಣ: ನಗರಸಭೆ ಚುನಾವಣೆ ಸ್ಪರ್ಧೆಗಿಳಿದ ಅಭ್ಯರ್ಥಿಗಳು ಚುನಾವಣೆ ಆಯೋಗ ಜಾರಿ ಮಾಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ಮಡೋಳಪ್ಪಾ ಪಿ.ಎಸ್.ಹೇಳಿದರು
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ವಾರ್ಡ್ ನಂ.1ರಿಂದ 8ರ ವರೆಗಿನ ಅಭ್ಯರ್ಥಿಗಳಿಗಾಗಿ ನಡೆದ ಪ್ರಚಾರ ಮತ್ತು ಖರ್ಚಿನ ನಿಯಮಗಳ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣಾ ಆಯೋಗದ ನಿಯಮದಂತೆ ಒಬ್ಬ ಅಭ್ಯರ್ಥಿ ಪ್ರಚಾರಕ್ಕಾಗಿ 2 ಲಕ್ಷ ರೂ. ಖರ್ಚು ಮಾಡಲು ಅವಕಾಶವಿದೆ. ಹಾಗೂ ಪ್ರಚಾರ ಸಾಮಾಗ್ರಿಗಳಾದ ಬ್ಯಾನರ್, ಕರಪತ್ರಗಳನ್ನು ಮಾಡಿಸಿದರೆ ಕಡ್ಡಾಯವಾಗಿ ಬಿಲ್ ಜೊತೆಗೆ ಸಂಬಂಧ ಪಟ್ಟ ಪ್ರಿಂಟರ್ ಮಾಲೀಕರ ಹೆಸರು ಇರಬೇಕು ಎಂದು ಸಲಹೆ ನೀಡಿದರು.
ಪ್ರಚಾರದ ವೇಳೆ ಅಭ್ಯರ್ಥಿಯು ತನ್ನ ಜೊತೆಗೆ ಇರುವ ಕಾರ್ಯಕರ್ತರಿಗೆ ಮತ್ತು ಜನರಿಗೆ ಕೇವಲ ನೀರು ಹಾಗೂ ತಿಳಿ ಮಜ್ಜಿಗೆ ಕೊಡಲು ಅವಕಾಶವಿದೆ. ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳಿಗೆ ಪ್ರಚಾರ ಸಾಮಗ್ರಿಗಳನ್ನು ಪೂರೈಸುತ್ತಿದ್ದರೆ ಮುಂಚಿತವಾಗಿ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.
ರಾಷ್ಟ್ರೀಯ ರಾಜಕೀಯ ನಾಯಕರು ನಗರಕ್ಕೆ ಅಥವಾ ವಾರ್ಡ್‌ಗೆ ಬರುತ್ತಿದ್ದರೆ, ನಮ್ಮ ಗಮನಕ್ಕೆ ತರಬೇಕು. ಪಕ್ಷದ ಕಚೇರಿ ಮಾಡಿದರೆ ಒಳಗೆ ಒಂದು ಟೇಬಲ್ ಹಾಗೂ ಎರಡು ಖುರ್ಚಿ ಮಾತ್ರ ಹಾಕಬೇಕು ಎಂದರು. ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು ಬೆಳಗ್ಗೆ 6ರಿಂದ ರಾತ್ರಿ 10ಗಂಟೆ ವರೆಗೆ ಮಾತ್ರ ಪ್ರಚಾರ ಮಾಡಬೇಕು. ಇಲ್ಲದಿದ್ದರೆ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು. ಸಹಾಯಕ ಚುನಾವಣಾ ಅಧಿಕಾರಿ ಅಂಬಾದಾಸ್, ಸಿಡಿಪಿಒ ಹಾಗೂ ನಗರಸಭೆ ಅಭ್ಯರ್ಥಿಗಳು ಇದ್ದರು.