ಬಸವಕಲ್ಯಾಣ: ನಗರಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಕೊನೆ ದಿನವಾದ ಗುರುವಾರ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಸ್ವತಂತ್ರ ಅಭ್ಯರ್ಥಿಗಳು ಕಳೆದ ಚುನಾವಣೆಗಿಂತ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಉತ್ಸಾಹದಿಂದ ನಾಮಪತ್ರ ಸಲ್ಲಿಸಿರುವುದು ಚುನಾವಣಾ ಕಣ ಮತ್ತಷ್ಟು ರಂಗೇರುವಂತೆ ಮಾಡಿದೆ.
ಪಕ್ಷೇತರು ಸೇರಿದಂತೆ ಸಲ್ಲಿಕೆಯಾದ ಒಟ್ಟು 135 ನಾಮಪತ್ರಗಳ ಪೈಕಿ ಜೆಡಿಎಸ್ ಇಬ್ಬರು, ಪಕ್ಷೇತರ ಇಬ್ಬರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 4 ನಾಮಪತ್ರಗಳು ತಿರಸ್ಕೃತ ಗೊಂಡಿದ್ದು, 131 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ ಎಂದು ತಾಲೂಕು ಆಡಳಿತ ತಿಳಿಸಿದೆ.
ಆಮ್‌ಆದ್ಮಿ ಪಕ್ಷವನ್ನು ಹೊರತು ಪಡಿಸಿ ಬಹುತೇಕ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್-31, ಬಿಜೆಪಿ-29, ಜೆಡಿಎಸ್-27, ಬಿಎಸ್‌ಪಿ-5, ವೆಲ್ಫೆಧೀರ್ ಪಕ್ಷ-1, ಎಂಐಎಂ-20 ಹಾಗೂ ಪಕ್ಷೇತರ 17 ಅಭ್ಯರ್ಥಿಗಳ ನಾಮಪತ್ರಗಳು ಅಂತಿಮಗೊಂಡಿರುವ ಬೆನ್ನಲ್ಲೇ ನಗರದಲ್ಲಿ ಪ್ರಚಾರದ ಕಾವು ಹೆಚ್ಚಾಗಿದೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದಂತೆ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಮೈತ್ರಿಯಾಗಿ ಸ್ಪರ್ಧೆಗೆ ಇಳಿದಿದ್ದರೆ, ಅನ್ಯಪಕ್ಷದ ಅಭ್ಯರ್ಥಿಗಳಿಗೆ ಲಾಭವಾಗುತ್ತಿತ್ತು ಎಂಬುದು ಚರ್ಚೆಗೆ ಕಾರಣವಾಯಿತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಳೀಯ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗೆ ಇಳಿದಿರುವುದು ಅಭ್ಯರ್ಥಿಗಳಲ್ಲಿ ಮತ್ತಷ್ಟು ಜೋಶ್ ಬರುವಂತೆ ಮಾಡಿದೆ.
ನಗರಸಭೆ ಚುನಾವಣೆ ವ್ಯಾಪ್ತಿಗೆ ಒಳಪಡುವ ಬಹುತೇಕ ವಾರ್ಡ್‌ಗಳಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, 2007ರಲ್ಲಿ ಆರಂಭಗೊಂಡ ನಗರಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಬಹುಮತ ಪಡೆದು ಮತ್ತು ಮೈತ್ರಿಯಾಗಿ ಅಧಿಕಾರ ಅನುಭವಿಸಿದ ಉದಾಹರಣೆ ಇದೆ.
ಆದರೆ ಈವರೆಗೆ ಬಿಜೆಪಿ ಬಹುಮತ ಪಡೆದು ಅಥವಾ ಮೈತ್ರಿಯಾಗಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ ಎಂಬುದು ಸಾರ್ವಜನಿಕರ ಮಾತಾಗಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದರೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಚುನಾವಣೆ ಮೇಲೆ ಏನಾದರೂ ಪರಿಣಾಮ ಬೀಳಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಇದ್ದಾರೆ. ಎಂಎಲ್ಎ ಹಾಗೂ ಎಂಪಿ ಅಭ್ಯರ್ಥಿಗಳಂತೆ ನಗರಸಭೆ ಚುನಾವಣೆಯಲ್ಲೂ ಬೆಳಗ್ಗೆಯಿಂದ ಮಧ್ಯರಾತ್ರಿ ವರೆಗೆ ಪ್ರಚಾರ ಕೈಗೊಳ್ಳಲಾಗುತ್ತಿದೆ.
ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರಗಳನ್ನು ಶುಕ್ರವಾರ ಪರಿಶೀಲಿಸಿ ಅಂತಿಮ ಗೊಳಿಸಲಾಗಿದೆ. ಹೀಗಾಗಿ ಚುನಾವಣೆ ಆಯೋಗದ ಆದೇಶದಂತೆ ಕಣದಲ್ಲಿರುವ ಅಭ್ಯರ್ಥಿಗಳು 2 ಲಕ್ಷ ರೂ. ಒಳಗೆ ಹಣ ಖರ್ಚು ಮಾಡಬೇಕು ಮತ್ತು ಚುನಾವಣೆಯ ಪ್ರಚಾರದ ಬಗ್ಗೆ ಸಮಾವೇಶ ಮಾಡುವಾಗ ಸಂಬಂಧ ಪಟ್ಟ ವಾರ್ಡ್‌ಗಳ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಸೂಕ್ತಕ್ರಮ ಕೈಗೊಳ್ಳಲಾಗುವುದು.
•
ಜ್ಞಾನೇಂದ್ರಕುಮಾರ ಗಂಗವಾರ,
ಸಹಾಯಕ ಆಯುಕ್ತ, ಬಸವಕಲ್ಯಾಣ