ಬಸವಕಲ್ಯಾಣ: ನಗರದ ಬಂಗ್ಲಾ ಬಳಿ ಹಾದು ಹೋಗಿರುವ ಮುಂಬೈ-ಹೈದರಾಬಾದ ರಾಷ್ಟ್ರೀಯ ಹೆದ್ದಾರಿ-65ಅನ್ನು ಅಗಲೀಕರಿಸಿ, ಚತುಷ್ಪಥವಾಗಿ ಪರಿವರ್ತನೆ ಮಾಡಲಾಗಿದ್ದು, ಇದರಿಂದ ಹೆದ್ದಾರಿ ಪಕ್ಕದಲ್ಲಿ ಈ ಹಿಂದೆ ಇದ್ದ ನೂರಾರು ಮರಗಳನ್ನು ಕಡಿಯಲಾಗಿದೆ.
ಈಗ ಚತುಷ್ಪಥವಾಗಿರುವ ಹೆದ್ದಾರಿಯ ಎರಡೂ ಬದಿಯಲ್ಲಿ ನಾಲ್ಕೈದು ವರ್ಷಗಳ ಹಿಂದೆ ಬೃಹತ್ ಮರಗಳು ಹಚ್ಚು ಹಸಿರಿನಿಂದ ಕಂಗೊಳಿಸುತ್ತಿದ್ದವು. ಇಲ್ಲಿ ಕುಟುಂಬ ಸಮೇತ ಪ್ರಯಾಣಿಸುವವರಿಗೆ ಮತ್ತು ಪರಿಸರ ಪ್ರೇಮಿಗಳಿಗೆ ಇದು ಖುಷಿ ನೀಡುವ ತಾಣವಾಗಿತ್ತು. ಆದರೆ ಅಭಿವೃದ್ಧಿ ದೃಷ್ಟಿಯಿಂದ ಈ ಮರಗಳನ್ನು ಕಡಿಯುವುದು ಅನಿವಾರ್ಯವಾಗಿತ್ತಾದರೂ, ಉತ್ತಮ ಗಾಳಿ, ನೆರಳು ಹಾಗೂ ಫಲ ನೀಡುವ ನೂರಾರು ಮರಗಳನ್ನು ಕಡಿದಿರುವುದು ಪರಿಸರ ಪ್ರೇಮಿಗಳಿಗೆ ನೋವನ್ನುಂಟು ಮಾಡಿದೆ.
ಹೆದ್ದಾರಿ ಚತುಷ್ಪಥವಾಗಿರುವುದು ವಾಹನ ಚಾಲಕರು, ವ್ಯಾಪಾರಸ್ಥರಿಗೆ ಅನುಕೂಲವಾಗಿದ್ದರೆ, ಮರ ಕಡಿದಿರುವುದು ಪರಿಸರ ಪ್ರೇಮಿಗಳು ಮತ್ತು ರೈತರಿಗೆ ನೋವಿನ ಸಂಗತಿಯಾಗಿದೆ. ಹೀಗೆ ಹೆಚ್ಚುತ್ತಿರುವ ಜನಸಂಖ್ಯೆ ಹಿನ್ನೆಲೆಯಲ್ಲಿ ಅಭಿವೃದ್ಧಿಗಾಗಿ ಒಂದನ್ನು ಪಡೆದುಕೊಳ್ಳಲು ಇನ್ನೊಂದನ್ನು ಕಳೆದುಕೊಳ್ಳುವುದು ಅನಿವಾರ್ಯ ವಾಗಿದೆ.
ಈ ಮಾರ್ಗದಲ್ಲಿದ್ದ ಮರಗಳನ್ನು ಸಂಪೂರ್ಣ ಕಡಿದಿರುವುದರಿಂದ, ಇಲ್ಲಿ ಸಂಚರಿಸುವವರು ನೆರಳಿನಲ್ಲಿ ಕುಳಿತುಕೊಳ್ಳಬೇಕೆಂದರೆ ಒಂದು ಚಿಕ್ಕ ಮರ ಕೂಡ ಸಿಗದಂತಾಗಿದೆ. ಆದರೆ, ಹೆದ್ದಾರಿ ಚತುಷ್ಪಥವಾಗಿ ಪರಿವರ್ತನೆಯಾಗಿರುವುದರಿಂದ ಈ ಮಾರ್ಗದಲ್ಲಿ ಮುಂಬೈ ಹಾಗೂ ಹೈದ್ರಾಬಾದ್ ಪ್ರಯಾಣದ ಅವಧಿ ಕಡಿಮೆಯಾಗಿ ವಾಹನ ಚಾಲಕರಿಗೆ, ವ್ಯಾಪಾರಸ್ಥ ಪ್ರಯಾಣಿಕರಿಗೆ ಅನುಕೂಲವಾಗಿದೆ. ಅಲ್ಲದೇ ಏಕಮುಖ ಸಂಚಾರದಿಂದ ರಸ್ತೆ ಅಪಘಾತಗಳು ಕಡಿಮೆ ಯಾಗಿವೆ. ಸರಕು ಸಾಗಣೆಗೆ ಅನುಕೂಲವಾಗಿದ್ದು, ಹೆದ್ದಾರಿ ಬದಿಯಲ್ಲಿ ಅಂಗಡಿಗಳು ಹೆಚ್ಚಿ ವ್ಯಾಪಾರ ವಹಿವಾಟು ಹೆಚ್ಚುತ್ತಿವೆ.
ಆದರೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಮಧ್ಯದಲ್ಲಿ ಬರುವ ಗ್ರಾಮಗಳಲ್ಲಿ ಸೇತುವೆ ನಿರ್ಮಾಣದಿಂದ ಗ್ರಾಮಸ್ಥರ ವ್ಯಾಪಾರಕ್ಕೆ ಅಡಚಣೆಯಾಗುತ್ತದೆ. ರಸ್ತೆ ನಿರ್ಮಾಣಕ್ಕಾಗಿ ಫಲವತ್ತಾದ ಭೂಮಿ ವಶಕ್ಕೆ ಪಡೆದುಕೊಳ್ಳುವುದರಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗಿ ರೈತರು ಸಮಸ್ಯೆ ಎದುರಿಸಬೇಕಾಗುತ್ತದೆ.
ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಈ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮತ್ತೆ ಸಸಿಗಳನ್ನು ನೆಟ್ಟು ಸಂರಕ್ಷಿಸಿ ಈ ಹಿಂದೆ ಇದ್ದಂತೆ ಮರಗಳನ್ನು ಬೆಳೆಸುವುದು ತುಂಬಾ ಅವಶ್ಯವಾಗಿದೆ. ಇಲ್ಲದಿದ್ದರೆ ಇದೇ ರೀತಿ ಮರಗಳನ್ನು ಕಡಿಯುತ್ತಿದ್ದರೆ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ.