ಬಸವಕಲ್ಯಾಣ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಸರ್ಕಾರ ಆದೇಶ ನೀಡಿದೆ. ಆದರೆ ಮುಡಬಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಇಲ್ಲಿಗೆ ಬರುವ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.
ಮುಡಬಿ ಹೋಬಳಿ ಹಾಗೂ ಜಿಪಂ ಕ್ಷೇತ್ರವಾಗಿದ್ದು, ಇದರ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರವೇ ಚಿಕಿತ್ಸೆಗೆ ಆಸರೆಯಾಗಿದೆ. ಆದ್ದರಿಂದ ನಿತ್ಯ ನೂರಾರು ರೋಗಿಗಳು ಇಲ್ಲಿಗೆ ಚಿಕಿತ್ಸೆಗಾಗಿ ಬಂದು ಹೋಗುವುದು ಸಾಮಾನ್ಯವಾಗಿದೆ. ಆದರೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಇಲ್ಲಿ ರೋಗಿಗಳಿಗೆ ಬೇಕಾದ ಕನಿಷ್ಟ ಸೌಲಭ್ಯಗಳನ್ನೂ ಒದಗಿಸದೇ ಇರುವುದರಿಂದ ಸಾರ್ವಜನಿಕರು ಮತ್ತು ರೋಗಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಆರೋಗ್ಯ ಕೇಂದ್ರದ ಹೊರಗೆ ಗಿಡ-ಮರಗಳನ್ನು ನೆಟ್ಟಿರುವುದನ್ನು ಗಮಿಸಿದರೆ ಒಳಗೆ ಇನ್ನೂ ಎಷ್ಟು ಚನ್ನಾಗಿರಬಹುದು ಎಂದು ಅನಿಸುತ್ತದೆ. ಆದರೆ ಒಳಗೆ ರೋಗಿಗಳಿಗೆ ಬೇಕಾದ ಅಗತ್ಯ ಸಾಮಗ್ರಿಗಳು ಸಂಪೂರ್ಣ ಹಾಳಾಗಿದ್ದು ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.
ಬಡ ಜನರು ಹಾಗೂ ಮಕ್ಕಳ ಚಿಕಿತ್ಸೆಗೆ ಅನುಕೂಲವಾಗಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರ ಮೂಲ ಸೌಕರ್ಯಗಳಿಂದ ವಂಚಿತವಾಗಿ ನರಳುವಂತಾಗಿದೆ.
ನಿರುಪಯುಕ್ತ ಹಾಸಿಗೆಗಳು: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳು ಮಲಗುವ ಹಾಸಿಗೆಗಳು ಉಪಯೋಗಕ್ಕೆ ಬಾರದಂತಾಗಿವೆ. ಕೆಲವು ಮಂಚಗಳು ಮುರಿದು ಹೋಗಿದ್ದು, ಮತ್ತೆ ಕೆಲವು ಹಾಸಿಗೆಗಳು ಹರಿದು ಹೋಗಿವೆ. ಹೀಗಾಗಿ ರೋಗಿಗಳನ್ನು ಕೆಳಗೆ ಮಲಗಿಸಲಾಗುತ್ತಿದೆ ಅಥವಾ ಚಿಕಿತ್ಸೆಗಾಗಿ ಬಂದವರು ಕುಳಿತುಕೊಳ್ಳುವ ಸ್ಥಳದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಗಿತಗೊಂಡ ನೀರಿನ ಘಟಕ: ಆಸ್ಪತ್ರೆಯಲ್ಲಿ ಅಳವಡಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿ ಹೋಗಿದೆ. ನೀರಿನ ಘಟಕ ಸಂಪೂರ್ಣ ತುಕ್ಕು ಹಿಡಿದು ಅದರ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಅನ್ನು ನೋಡಿದರೆ ಹಾಳಾಗಿ ಎಷ್ಟು ವರ್ಷ ಆಗಿರಬಹುದು ಎಂದು ಯೋಚಿಸುವಂತಿದೆ. ಆದರೂ ಅದನ್ನು ದುರಸ್ಥಿ ಮಾಡುವುದಾಗಲಿ ಅಥವಾ ಹೊಸದು ಅಳವಡಿಸಲು ಸಂಬಂಧ ಪಟ್ಟವರು ಮುಂದಾಗಿಲ್ಲ. ಇದರಿಂದ ರೋಗಿಗಳು ಕುಡಿಯುವ ನೀರನ್ನು ಹೊರಗಿನಿಂದ ತರಬೇಕಾದ ಅನಿವಾರ್ಯತೆ ಇದೆ.
ಶೌಚಾಲಯಕ್ಕೆ ಬೀಗ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡುವ ಕೋಣೆ ಒಳಗಿನ ಶೌಚಾಲಕ್ಕೆ ಬೀಗ ಹಾಕಲಾಗಿದೆ. ಇದರಿಂದ ರೋಗಿಗಳು ಶೌಚಾಲಯಕ್ಕೂ ಹೊರಗೆ ಹೋಗಬೇಕಾದ ಅನಿವಾರ್ಯದ ಪರಿಸ್ಥಿತಿ ಇದೆ ಎಂದು ರೋಗಿಗಳು ಹಾಗೂ ಗ್ರಾಮಸ್ಥರು ಹೇಳುತ್ತಾರೆ.
ವೀರಾರೆಡ್ಡಿ ಆರ್.ಎಸ್.