Advertisement

ಫೆ.15ಕ್ಕೆ ಕಲ್ಯಾಣ ಕರ್ನಾಟಕ ಯುವ ಸಂಸತ್ತು

04:00 PM Jan 27, 2020 | Naveen |

ಬಸವಕಲ್ಯಾಣ: ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿಯ ವಿಕಾಸ ಅಕಾಡೆಮಿ ಮತ್ತು ಇಲ್ಲಿರುವ ಶಾಖೆಯ ಸಂಯುಕ್ತಾಶ್ರಯದಲ್ಲಿ ಫೆ.15ರಂದು ನಗರದ ರಥ ಮೈದಾನದಲ್ಲಿ ಕಲ್ಯಾಣ ಕರ್ನಾಟಕದ ಯುವ ಸಂಸತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

Advertisement

ನಗರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮದ ಅಂಗವಾಗಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಫೆ.15ರಂದು ಬಸವಕಲ್ಯಾಣದಲ್ಲಿ ನಡೆಯಲಿರುವ ಯುವ ಸಂಸತ್ತು 2020-ಯುವಕರ ಬೃಹತ್‌ ಸಮಾವೇಶವು ದಾಖಲೆ ಆಗಬೇಕು. ಕಲ್ಯಾಣ ಕರ್ನಾಟಕ ಭಾಗದ 20,000 ಯುವಕರು ಅಲ್ಲದೆ ವಿವಿಧ ಜಿಲ್ಲೆಗಳಿಂದ 35,000ಕ್ಕೂ ಹೆಚ್ಚು ಜನರು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು.

ಬೆಳಕ್ಕೆ 10:30 ಗಂಟೆಗೆ ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಸಮಾವೇಶ ಉದ್ಘಾಟಿಸುವರು. ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿ, ಭಾರತೀಯ ಸೇನೆಯ ನಿವೃತ್ತ ಉಪ ದಂಡನಾಯಕ ಲೆಫ್ಟಿನೆಂಟ್‌ ಜನರಲ್‌ ರಮೇಶ್‌ ಹಲಗಲಿ, ಯುವ ಚಿಂತಕ-ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ವಿಜಯಪೂರದ ಚಾಣಕ್ಯ ಕರಿಯರ್‌ ಅಕಾಡೆಮಿಯ ಎನ್‌.ಎಂ. ಬಿರಾದಾರ ಸೇರಿದಂತೆ ನಾಡಿನ ಹಾಗೂ ಸ್ಥಳಿಯ ಮಠಾಧೀಶರು, ಗಣ್ಯರು ಆಗಮಿಸಲಿದ್ದಾರೆ ಎಂದರು.

ಹೈದ್ರಾಬಾದ್‌ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿರುವ ನಿಮಿತ್ತ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಅಂದು ಮಧ್ಯಾಹ್ನದ 2 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಗುವುದು. ಬಳಿಕ ಅವರು ಸಮಾರೋಪ ಸಂದೇಶ ನೀಡಲಿದ್ದಾರೆ. ಇದೇ ವೇಳೆ ಯುವಕರು ಪ್ರತಿಜ್ಞಾ ವಿಧಿ ಬೋಧಿಸುವರು. ಸಮಾರೋಪಕ್ಕೆ ಒಂದು ಸಾವಿರ ಗಣ್ಯರು-ಅತಿಥಿಗಳು ಬರಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ತಡೋಳಾ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಕಲ್ಯಾಣವನ್ನು ಸಾಂಸ್ಕೃತಿಕ ರಾಜಧಾನಿಯನ್ನಾಗಿ ಮಾಡಲು ಜತೆಗೆ ಯುವಕರ ಈ ಬೃಹತ್‌ ಸಮಾವೇಶಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದರು. ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು. ಮುಂದಿನ ಪೂರ್ವಭಾವಿ ಸಭೆ ಜ.29ರಂದು ನಡೆಸಲಾಗುವುದು ಎಂದರು.

Advertisement

ತಹಶೀಲ್ದಾರ್‌ ಸಾವಿತ್ರಿ ಶರಣು ಸಲಗರ, ಜಿಪಂ ಸದಸ್ಯ ಸುಧಿಧೀರ್‌ ಕಾಡಾದಿ, ಧನರಾಜ ತಾಳಂಪಳ್ಳಿ, ಅನಿಲ್‌ಕುಮಾರ ರಗಟೆ, ಬಿಜೆಪಿ ಯುವ ಮುಖಂಡ ಶರಣು ಸಲಗರ, ಶರಣು ಬಿರಾದಾರ, ವಿಕಾಸ ಅಕಾಡೆಮಿಯ ಸಹ ಸಂಚಾಲಕ ಶಿವಕುಮಾರ ಬಿರಾದಾರ, ಹುಮನಾಬಾದ್‌ ವಿಕಾಸ ಅಕಾಡೆಮಿಯ ಶಿವಶಂಕರ ತರನಳ್ಳಿ, ಸಂಜು ಕಾಳೆಕರ್‌, ರವಿ ಕೊಳ್ಕುರ್‌, ಬಸವರಾಜ ಬಾಲಿಕೀಲೆ, ಅಶೋಕ ನಾಗರಾಳೆ, ಧನರಾಜ ರಾಜೋಳೆ, ಪಂಡಿತ್‌ ನಾಗರಾಳೆ, ಶಿವರಾಜ ಬಾಲಿಕೀಲೆ, ಅಶೋಕ ವಕಾರೆ, ಶಿವಕುಮಾರ ಶೆಟಗಾರ್‌, ಚಂದ್ರಕಾಂತ್‌ ಸ್ವಾಮಿ, ರವಿ ಸ್ವಾಮಿ, ರಮೇಶ್‌ ಧಬಾಲೆ, ದೇವಿಂದ್ರ ಆದೇಪ್ಪ, ಮಹೇಶ ಸುಂಟನೂರೆ ಇದ್ದರು. ಸೂರ್ಯಕಾಂತ ಪಾಟೀಲ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next