Advertisement

ಅನುಭವ ಮಂಟಪಕ್ಕೆ ಸಿಕ್ಕೀತೆ ಅನುದಾನ?

10:34 AM Jun 15, 2019 | Naveen |

ವೀರಾರೆಡ್ಡಿ ಆರ್‌.ಎಸ್‌.
ಬಸವಕಲ್ಯಾಣ:
ಉಜಳಂಬ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜೂ.27ರಂದು ಗ್ರಾಮ ವಾಸ್ತವ್ಯ ಮಾಡಲು ಆಗಮಿಸುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶರಣರ ನಾಡು, ವಿಶ್ವಗುರು ಬಸವಣ್ಣನವರ ಕರ್ಮಭೂಮಿಯಾದ ಬಸವಕಲ್ಯಾಣಕ್ಕೆ ಏನಾದರೂ ಕೊಡುಗೆ ನೀಡಬಹುದಾ ಎಂಬ ನಿರೀಕ್ಷೆಯನ್ನು ಇಲ್ಲಿನ ಜನರು ಇಟ್ಟುಕೊಂಡಿದ್ದಾರೆ.

Advertisement

ಚುನಾವಣೆ ಸಂದರ್ಭದಲ್ಲಿ ವಿವಿಧ ಪಕ್ಷಗಳ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಆಗಮಿಸಿ ಅನುಭವ ಮಂಟಪ ಕುರಿತು ನೀಡಲಾದ ಭರವಸೆಗಳನ್ನು ಇಂದಿಗೂ ಈಡೇರಿಸದೇ ಮರೆತು ಬಿಟ್ಟಿರುವುದು ಬಸವಾಭಿಮಾನಿಗಳು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಅನುಭವ ಮಂಟಪಕ್ಕೆ ಆಗಮಿಸುತ್ತಾರೆ ವಿನಃ ನಿಸ್ವಾರ್ಥದಿಂದ ಸಮಾಜದಲ್ಲಿನ ತೊಡಕುಗಳನ್ನು ಹೋಗಲಾಡಿಸಲು ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ ಶರಣ-ಶರಣೆಯರ ಪವಿತ್ರ ಭೂಮಿ ಅಭಿವೃದ್ಧಿ ಮಾಡಲು ಅಲ್ಲ ಎಂಬುದು ಜನರ ಆರೋಪವಾಗಿದೆ.

ಈಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಸವಕಲ್ಯಾಣದ ಶರಣ ಕಮ್ಮಟ ಸಮಾರಂಭದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದರೆ, ಅನುಭವ ಮಂಟಪದ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂಬ ಭರವಸೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಆದರೆ ಕುಮಾರಸ್ವಾಮಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ವರ್ಷ ಕಳೆಯುತ್ತ ಬಂದರೂ, ಅನುಭವ ಮಂಟಕ್ಕೆ ಭೇಟಿ ನೀಡದಿರುವುದು ಸಾಹಿತಿ, ಚಿಂತಕರು ಹಾಗೂ ಬಸವ ಭಕ್ತರಿಗೆ ಬೇಸರ ತರಿಸಿದೆ.

Advertisement

ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ 650 ಕೋಟಿ ರೂ. ನೀಡುವುದಾಗಿ ರಾಜ್ಯದಲ್ಲಿ ಈ ಹಿಂದೆ ಇದ್ದ ಕಾಂಗ್ರೆಸ್‌ ಸರ್ಕಾರದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿರುವುದು ಎಲ್ಲರಿಗೆ ಗೊತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ ಎರಡು ಬಾರಿ ಬಜೆಟ್ ಮಂಡಿಸಿದರೂ, ಅದರಲ್ಲಿ ಕೇವಲ 100 ಕೋಟಿ ರೂ. ಘೋಷಣೆ ಮಾಡಿದ್ದರು. ಘೋಷಣೆ ಮಾಡಲಾದ ಅನುದಾನದಲ್ಲಿ ಇಂದಿಗೂ ಒಂದು ಪೈಸೆ ಕೂಡ ಬಿಡುಗಡೆ ಮಾಡದಿರುವುದು ಎಲ್ಲರ ಮನಸ್ಸು ಕೆರಳಿಸುವಂತೆ ಮಾಡಿದೆ.

ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ ನೂತನ ಅನುಭವ ಮಂಟಪದ ಶಂಕು ಸ್ಥಾಪನೆಗೆ ಮತ್ತು ಶರಣರ ಸ್ಮಾರಕ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಅನುದಾನ ಘೋಷಣೆ ಮಾಡುತ್ತಾರೊ ಎಂಬುದನ್ನು ಕಾದು ನೋಡಬೇಕಾಗಿದೆ.

ಅನುಭವ ಮಂಟಪ ವೈಚಾರಿಕ ಜಗತ್ತಿನ, ಬೌದ್ಧಿಕ ಲೋಕದ ಹಾಗೂ ಭಾರತೀಯ ದಾರ್ಶನಿಕತೆಯ ಭಿತ್ತಿಯಾಗಿದೆ. ಶರಣ ಚಳವಳಿ, ವಚನ ಸಾಹಿತ್ಯ ಹಾಗೂ ಅನುಭವ ಮಂಟಪ ಕನ್ನಡ ಸಾಂಸ್ಕೃತಿಕತೆಯ ಅಸ್ಮಿತೆ ಯಾಗಿವೆ. ಇದರ ಪುನರ್‌ ನಿರ್ಮಾಣದಿಂದ ಶರಣರ ತಾತ್ವಿಕತೆಗೆ ಜಾಗತಿಕ ತತ್ವಶಾಸ್ತ್ರದಲ್ಲಿ ಹಾಗೂ ಬೌದ್ಧಿಕ ವಲಯದಲ್ಲಿ ಪ್ರಾಧಾನ್ನತೆ ಸಿಗುವ ಸಾಧ್ಯತೆ ಇದೆ. ಈ ಬಗೆಗೆ ಸರ್ಕಾರದ ಕಾಳಜಿ ಅಗತ್ಯ.
ಡಾ| ಭೀಮಾಶಂಕರ ಬಿರಾದಾರ್‌,
ಉಪನ್ಯಾಸಕರು

ನಿಯೋಜಿತ ಅನುಭವ ಮಂಟಪದ ಕಾರ್ಯ ಪೂರ್ಣಗೊಂಡರೆ, ಬಸವಕಲ್ಯಾಣಕ್ಕೆ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರದ ಮನ್ನಣೆ ದೊರೆಯುತ್ತದೆ. ನಮ್ಮ ಸರ್ಕಾರಗಳು ಅನುದಾನ ನೀಡುವ ವಾಗ್ಧಾನ ಪೂರೈಸುತ್ತವೆ ಎಂಬ ಆಶೆ ಈಗಲು ಇದೆ.
ದೇವೇಂದ್ರ ಬರಗಾಲೆ,
ಕಾರ್ಯದರ್ಶಿ ಲಿಗಾಡೆ ಪ್ರತಿಷ್ಠಾನ

Advertisement

Udayavani is now on Telegram. Click here to join our channel and stay updated with the latest news.

Next