ಬೀದರ: ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಇನ್ನೂ ಪ್ರಕಟಗೊಂಡಿಲ್ಲ. ಆಗಲೇ ಕಾಂಗ್ರೆಸ್ ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಕೆಪಿಸಿಸಿ ರಚಿಸಿರುವ ಅಭ್ಯರ್ಥಿ ಆಯ್ಕೆ ಸಮಿತಿಯ ಮೊದಲ ಸಭೆ ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ನಡೆದಿದೆ. ಸಮಿತಿಯ ಅಧ್ಯಕ್ಷರಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತು ಸಂಯೋಜಕರಾಗಿರುವ ಶಾಸಕರಾಜಶೇಖರ ಪಾಟೀಲ ನೇತೃತ್ವದಲ್ಲಿ ಸದಸ್ಯರು ಸಭೆ ನಡೆಸಿದ್ದಾರಲ್ಲದೇ ಟಿಕೆಟ್ ಆಕಾಂಕ್ಷಿಗಳೊಂದಿಗೆ ಸಮಿತಿ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದೆ.
ಬಳಿಕ 20 ಜನ ಟಿಕೆಟ್ ಆಕಾಂಕ್ಷಿಗಳೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ 8 ಜನ ಆಕಾಂಕ್ಷಿಗಳು ವೈಯಕ್ತಿಕ ಟಿಕೆಟ್ ಆಗ್ರಹದ ಜತೆಗೆ ಸ್ಥಳೀಯರಿಗೆ ಮಾತ್ರ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರೆ, ಇನ್ನೂ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಬಾರಿ ಅಲ್ಪಸಂಖ್ಯಾತರ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಮತ್ತೆ ಕೆಲವರು ಹೈಕಮಾಂಡ್ ನಿರ್ಣಯಕ್ಕೆ ಬದ್ಧರಾಗಿ ಇರುತ್ತೇವೆ ಎಂದು ಹೇಳಿದರು.
ಎಂಎಲ್‌ಸಿ ವಿಜಯಸಿಂಗ್ ಅವರು ಎಂಎಲ್‌ಸಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ ಮತ್ತು ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ.ಹೀಗಾಗಿ ತಮಗೆ ಟಿಕೆಟ್ ನೀಡಬೇಕು ಎಂದು ಕೋರಿದರು. ಇದೇ ವೇಳೆ ವಿಜಯಸಿಂಗ್ ಮತ್ತು ಗೌತಮನಾರಾಯಣರಾವ್ ಅವರ ಪರ ಬೆಂಬಲಿಗರು ಸಮಿತಿಗೆ ಮನವಿ ಸಲ್ಲಿಸಿ ಟಿಕೆಟ್‌ಗಾಗಿ ಗಮನ ಸೆಳೆದರು.
ಆಕಾಂಕ್ಷಿಗಳೊಂದಿಗೆ ಸಭೆ ಬಳಿಕ ಮಾತನಾಡಿದ ಸಮಿತಿ ಅಧ್ಯಕ್ಷ ಈಶ್ವರ ಖಂಡ್ರೆ, ಆಯ್ಕೆ ಸಮಿತಿ ಆಕಾಂಕ್ಷಿತ ಅಭ್ಯರ್ಥಿಗಳ ವರದಿಯನ್ನು ಶೀಘ್ರ ವರಿಷ್ಠರಿಗೆ ಸಲ್ಲಿಸಲಿದ್ದು, ಅರ್ಹರನ್ನು ಪಕ್ಷ ಆಯ್ಕೆ ಮಾಡಲಿದೆ. ಉಳಿದವರೆಲ್ಲರೂ ಪಕ್ಷದ ನಿರ್ಣಯಕ್ಕೆ ಬದ್ಧರಾಗಿ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಬೇಕು ಎಂದು ತಿಳಿಸಿದರು. ಸಮಿತಿ ಸದಸ್ಯರಾದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಶಾಸಕ ಶರಣಪ್ರಕಾಶ ಪಾಟೀಲ, ಸಂತೋಷ ಲಾಡ, ಮಾಜಿ ಉಪ ಸಭಾಪತಿ ಬಿಆರ್ ಪಾಟೀಲ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮಾಜಿ ಎಂಎಲ್‌ಸಿ ಅಲ್ಲಮಪ್ರಭು ಪಾಟೀಲ ಭಾಗವಹಿಸಿದ್ದರು. ಶಾಸಕ ಪ್ರಿಯಾಂಕ ಖರ್ಗೆ ಗೈರಾಗಿದ್ದರು.