ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರಿಂದಲೇ ಸಮಾಜದವರು ಅವರನ್ನು ನಮ್ಮವರು ಎಂದು ಒಪ್ಪಿಕೊಂಡಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟನೆ ನೀಡಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಚುನಾವಣೆಯ ಸಂದರ್ಭದಲ್ಲಿ ಯಾರೂ ಸಹ ವಿಷಯಾಂತರ ಮಾಡಬಾರದು. ನಮ್ಮವರು ಎನ್ನುವ ಕಾರಣಕ್ಕೆ ಮೀಸಲಾತಿ ಹೋರಾಟದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು ಎಂದು ಸಮರ್ಥಿಸಿಕೊಂಡರು.
ಯಾರೊ ಒಬ್ಬರು ಏನೇನೋ ಮಾತನಾಡುತ್ತಾರೆ ಎಂದು ನಾನು ಪ್ರತಿಕ್ರಿಯೆ ಕೊಡುವದಿಲ್ಲ. ಇದರ ಬಗ್ಗೆ ಬೆಳಗಾವಿ ಜಿಲ್ಲಾ ಮುಖಂಡರು ಸ್ಪಷ್ಟನೆ ನೀಡಲಿದ್ದಾರೆ. ನಮ್ಮ ಮೀಸಲಾತಿ ಹೋರಾಟದಲ್ಲಿ ಅನೇಕರು ಗುರುತಿಸಿಕೊಂಡಿದ್ದರು. ನಮ್ಮವರು ಎನ್ನುವ ಕಾರಣಕ್ಕೆ ಅವರೆಲ್ಲಾ ನಮಗೆ ಬೆಂಬಲ ಕೊಟ್ಟಿದ್ದಾರೆ. ಹೀಗಿರುವಾಗ ವಿಷಯಾಂತರ ಮಾಡಿ ಮನಸ್ಸಿಗೆ ನೋವಾಗುವ ಹೇಳಿಕೆಯನ್ನು ಯಾರು ಕೊಡಬಾರದು ಎಂದರು.
ಲಕ್ಷ್ಮೀ ಹೆಬ್ಬಾಳ್ಕರ್ ಹೋರಾಟಕ್ಕೆ ಧುಮುಕಿದ್ದಾರೆ ಎನ್ನುವ ಕಾರಣಕ್ಕೆ ಅಭಿಮಾನ, ಗೌರವ ಇದೆ. ಹೋರಾಟದಲ್ಲಿ ಪಾಲ್ಗೊಂಡವರ ಬಗ್ಗೆ ಎಂದಿಗೂ ಒಳ್ಳೆಯ ಅಭಿಮಾನ ಇರಲಿದೆ. ಟೀಕೆ, ಟಿಪ್ಪಣಿ ಮಾಡಿದವರ ವಿರುದ್ಧ ನಾನು ಪ್ರತಿಕ್ರಿಯೆ ಕೊಡುವದಿಲ್ಲ ಎಂದು ಹೇಳಿದ ಸ್ವಾಮೀಜಿ ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಹೌದೊ ಅಲ್ಲವೋ ಎನ್ನುವ ಗೊಂದಲ ವಿಚಾರ ಇಡೀ ಜಗತ್ತಿಗೆ ಗೊತ್ತಿದೆ. ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಪಾಲ್ಗೊಂಡವರು ನಮ್ಮವರು. ಹೀಗಿದ್ದಾಗ ಅವರ ಜಾತಿ ಮೂಲದ ಬಗ್ಗೆ ಏಕೆ ಕೆದಕಬೇಕು ಎಂದು ಸಮಜಾಯಿಷಿ ನೀಡಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆಗೆ ಮಾಜಿ ಸಚಿವ ಮುರುಗೇಶ ನಿರಾಣಿ ಮಾಡಿರುವ ಒತ್ತಾಯದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಚುನಾವಣೆ ಸಂದರ್ಭದಲ್ಲಿ ಯಾವುದೇ ಪ್ರತಿಕ್ರಿಯೆ ಕೊಡಬಾರದು ಎಂದು ತೀರ್ಮಾನ ಮಾಡಿದ್ದೇನೆ. ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಿದ್ದೇನೆ. ಇದಕ್ಕೆ ಹೆಬ್ಬಾಳ್ಕರ್ ಅವರೇ ಸರಿಯಾದ ಉತ್ತರ ಕೊಡ್ತಾರೆ ಎಂದರು.
ಇದನ್ನೂ ಓದಿ: PUC Result; ಅವಳಿ ಜವಳಿಗೆ ಪಿಸಿಎಂಸಿಯಲ್ಲಿ ಅವಳಿ ಅಂಕ ವ್ಯತ್ಯಾಸ!