ಧಾರವಾಡ : ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ೨ಎ ಮೀಸಲಾತಿ ಕೊರಿ ನಡೆಯುತ್ತಿದ್ದ ಹೋರಾಟವನ್ನು ಮತ್ತೆ ಮುಂದುವರಿಸುವ ಸಂಬಂಧ ನಾಳೆ (ಗುರುವಾರ) ರಂದು ಮಧ್ಯಾಹ್ನ 3 ಗಂಟೆಗೆ ಜೋಯಿಡಾ ತಾಲೂಕಿನ ಸುಕ್ಷೇತ್ರ ಉಳವಿಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷರಾದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಮೀಸಲಾತಿಯ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಆದರೆ, ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಇದೀಗ ಮತ್ತೆ ಆರಂಭಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದೇವೆ ಎಂದರು.
2023ರಲ್ಲಿ ಸರ್ಕಾರವು ವಿಶೇಷವಾಗಿ 2ಡಿ ಮೀಸಲಾತಿ ನೀಡಿದ್ದರೂ, ಅನುಷ್ಠಾನವಾಗುವ ಸಮಯದಲ್ಲಿ ನೀತಿ ಸಂಹಿತೆ ಎದುರಾಗಿತ್ತು. ಬಳಿಕ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿದ್ದು, ಸಭೆ ನಡೆಸಿ ತೀರ್ಮಾನಿಸುತ್ತೇವೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನಿರ್ಲಕ್ಷ್ಯ ಮಾಡಿದ್ದಾರೆ. ಇದೀಗ ಲೋಕಸಭೆ ಚುನಾವಣೆಯ ನೀತಿ ಸಂಹಿತೆಯೂ ಹೋರಾಟಕ್ಕೆ ಅಡ್ಡಿಯಾಗಿತ್ತು. ಆದರೆ, ಸಮುದಾಯದವರು ಹಾಗೂ ಹೋರಾಟಗಾರರ ಮೂಲಕ ಉಳವಿಯಿಂದ ಇದೀಗ ಮತ್ತೇ ಹೋರಾಟ ಆರಂಭಿಸುತ್ತೇವೆ ಎಂದು ತಿಳಿಸಿದರು.
ಪಂಚಮಸಾಲಿ ಸಮಾಜದ ಮುಖಂಡರಾದ ನಿಂಗಣ್ಣ ಕರೀಕಟ್ಟಿ, ಪ್ರದೀಪ ಪಾಟೀಲ, ಎಸ್.ಬಿ.ಗೋಲಪ್ಪನವರ, ಮಲ್ಲಿಕಾರ್ಜುನ ಭೂಮನಗೌಡ್ರ,
ಪ್ರಕಾಶ ಭಾವಿಕಟ್ಟಿ, ಶಶಿಶೇಖರ ಡಂಗನವರ, ರಾಜು ಕೊಟಗಿ, ಮಂಜುನಾಥ ಮುಗ್ಗನವರ, ಮುತ್ತು ಬೆಳ್ಳಕ್ಕಿ ಇತರರು ಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ: KMC ವೈದ್ಯಕೀಯ ಜೆನೆಟಿಕ್ಸ್ ವಿಭಾಗದಿಂದ ಮೇ. 25ರಂದು ʼಓಪನ್ ಡೇʼ ಕಾರ್ಯಕ್ರಮ