ಮೈಸೂರು: ಪಟ್ಟಣದಲ್ಲಿ ಕೂಡಲ ಸಂಗಮದ ಮಾದರಿಯಲ್ಲಿ ಬಸವಭವನ ನಿರ್ಮಿಸಲಾಗಿದೆ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಕಳಲೆ ಎನ್.ಕೇಶವಮೂರ್ತಿ ಹೇಳಿದರು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಕ್ಷೇತ್ರ ವ್ಯಾಪ್ತಿಯ ಹುಲ್ಲಹಳ್ಳಿಯಲ್ಲಿ ಸಂಸದ ಆರ್.ಧ್ರುವನಾರಾಯಣ್ ಹಾಗೂ ನೂರಾರು ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಮನೆ ಮನೆಗಳಿಗೆ ತೆರಳಿ ಮತಯಾಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಸಂಸದ ಆರ್.ಧ್ರುವನಾರಾಯಣ ಅವರು ಕ್ಷೇತ್ರದಾದ್ಯಂತ ಪ್ರವಾಸ ಮಾಡಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಕೊಟ್ಟಿದ್ದಾರೆ. ದೇವನೂರು ಮಠ, ಮಲ್ಲನಮೂಲೆ ಮಠ, ಸುತ್ತೂರು, ಕಂತೆ ಮಹದೇಶ್ವರ ಮಠ, ನವಿಲೂರು ಮಠ ಸೇರಿದಂತೆ ಸ್ಥಳೀಯ ನಾಲ್ಕು ಮಠಗಳಿಗೆ ಸಾಕಷ್ಟು ಅನುದಾನ ಮಂಜೂರಾಗಿದೆ ಎಂದು ಹೇಳಿದರು.
ನಿವೇಶನ ಹಂಚಿಕೆ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಂಜನಗೂಡು ಪಟ್ಟಣದಲ್ಲಿ 150 ರಿಂದ 200 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಒಕ್ಕಲಿಗ ಸಮುದಾಯ ಭವನ, ಕನಕ ಭವನ, ವಾಲ್ಮೀಕಿ ಸಮುದಾಯ ಭವನ, ಅಂಬೇಡ್ಕರ್ ಭವನ, ಸಮಿತಾ ಸಮಾಜ, ಈಡಿಗ ಸಮಾಜದವರಿಗೆ ಸಮುದಾಯ ಭವನಗಳ ನಿರ್ಮಾಣಕ್ಕೆ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದರು.
ತಾಲೂಕಿನಾದ್ಯಂತ 10 ಶಾದಿ ಮಹಲ್ ನಿರ್ಮಾಣ, ಹೆಡಿಯಾಲ, ಹುಲ್ಲಹಳ್ಳಿ, ಹುರಾ ಹಾಗೂ ನಂಜನಗೂಡು ಪಟ್ಟಣದ ಲೋಕೋಪಯೋಗಿ ರಸ್ತೆಗಳನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಶ್ರೀಕಂಠೇಶ್ವರ ರಥೋತ್ಸವ ಸಾಗುವ ರಥಬೀದಿಯನ್ನು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. 2008ರ ನಂತರ ಮೊದಲ ಬಾರಿಗೆ ಸುಣ್ಣಬಣ್ಣ ಮಾಡಿಸಲಾಗಿದೆ.
ಪಟ್ಟಣದಲ್ಲಿ ಮಿನಿ ವಿಧಾನಸೌಧ, ಕ್ಷೇತ್ರ ವ್ಯಾಪ್ತಿಯ 125 ಹಳ್ಳಿಗಳಿಗೆ ಸಮರ್ಪಕ ಕುಡಿಯುವ ನೀರು ಒದಗಿಸುವ ಯೋಜನೆ, ನಂಜನಗೂಡು ಪಟ್ಟಣದಲ್ಲಿ 24*7 ಕುಡಿಯುವ ನೀರು ಯೋಜನೆ, ಒಳಚರಂಡಿ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ನುಗು ಜಲಾಶಯಕ್ಕೆ ಏತ ನೀರಾವರಿ ಮೂಲಕ 20 ಸಾವಿರ ಎಕರೆ ಅಚ್ಚುಕಟ್ಟಿಗೆ ನೀರು ಒದಗಿಸಲು ಯೋಜನೆ ರೂಪಿಸಲಾಗುವುದು. ಇದರಿಂದ ಕುಡಿಯುವ ನೀರು ಯೋಜನೆ ಜತೆಗೆ ಈ ಭಾಗದಲ್ಲಿ ರೈತರು ಎರಡು ಬೆಳೆ ಬೆಳೆಯಲು ಅನುಕೂಲವಾಗಲಿದೆ. ಅರಸನಕೆರೆ ಗೋಮಾಳದ 300 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸುವುದರಿಂದ ಸುತ್ತಮುತ್ತಲಿನ 30-40 ಹಳ್ಳಿಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ.
-ಕಳಲೆ ಎನ್.ಕೇಶವಮೂರ್ತಿ, ಶಾಸಕ