ಹುಬ್ಬಳ್ಳಿ: ನಾಡೋಜ
ಡಾ| ಪಾಟೀಲ ಪುಟ್ಟಪ್ಪನವರಿಗೆ ರಾಜ್ಯ ಸರಕಾರದಿಂದ 2017ನೇ ಸಾಲಿಗಾಗಿ ಘೋಷಿಸಿದ್ದ ರಾಷ್ಟ್ರೀಯ ಬಸವ ಪುರಸ್ಕಾರವನ್ನು ಒಂದೆರಡು ದಿನದಲ್ಲಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ
ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಕಿಮ್ಸ್‌ನಲ್ಲಿ ಕಳೆದ ಫೆ.10ರಿಂದ ಚಿಕಿತ್ಸೆ ಪಡೆಯುತ್ತಿರುವ ಡಾ| ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪುರಸ್ಕಾರದೊಂದಿಗೆ 10 ಲಕ್ಷ ನಗದನ್ನು ಕುಟುಂಬಸ್ಥರಿಗೆ ತಲುಪಿಸುವ ಕೆಲಸ ಆಗಲಿದೆ. ಡಾ| ಪಾಟೀಲ ಪುಟ್ಟಪ್ಪ ಅವರ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ. ಪಾಪು ಸದ್ಯ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದು, ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಅವರಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಅವರ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವಂತೆ ವೈದ್ಯರಿಗೆ ಸೂಚಿಸಿದ್ದೇನೆ ಎಂದರು.
ಸಂಸದೆ
ಶೋಭಾ ಕರಂದ್ಲಾಜೆ ಮಾತನಾಡಿ, ವೈದ್ಯರ ಮಾಹಿತಿ ಪ್ರಕಾರ ನಾಡೋಜ ಡಾ| ಪುಟ್ಟಪ್ಪ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಕಿಮ್ಸ್ ವೈದ್ಯರ ತಂಡ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಪಾಪು ಅವರು ನಮ್ಮೊಂದಿಗೆ ಇನ್ನಷ್ಟು ಕಾಲ ಇರಬೇಕು. ಕೊರೊನಾ ವೈರಸ್ ಕುರಿತು ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ವಿದೇಶದಿಂದ ಬಂದಿರುವವರ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡಿದೆ ಎಂದರು.
ಇದಕ್ಕೂ ಮೊದಲು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರ ಆರೋಗ್ಯದ ಕುರಿತು ವಿಚಾರಿಸಿದರು. ವಿಪರೀತ ಜ್ವರ, ಉಸಿರಾಟ ತೊಂದರೆ ಹಾಗೂ ಆಯತಪ್ಪಿ ಬಿದ್ದ ಪರಿಣಾಮ ತಲೆಗೆ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀರ್ಘ ಕಾಲದ ಪುಪ್ಪುಸ ತೊಂದರೆ ಹಾಗೂ ತಲೆಯಲ್ಲಿ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಮಾಡಲಾಗಿದೆ. ಕಿಡ್ನಿ ತೊಂದರೆ, ರಕ್ತಹೀನತೆ ಹಾಗೂ ಸೋಂಕು ಕಂಡುಬಂದಿದ್ದು ಎಲ್ಲಾ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲಾಯಿತು. ಶಸ್ತ್ರಚಿಕಿತ್ಸೆ ನಂತರ ಆರೋಗ್ಯ ಗಂಭೀರವಾಗಿದೆ. ಕೃತಕ ಉಸಿರಾಟ ಯಂತ್ರ (ವೆಂಟಿಲೇಟರ್) ಅಳವಡಿಸಲಾಗಿದೆ. ದೀರ್ಘ ಕಾಲ ಹಾಸಿಗೆ ಹಿಡಿದ ಪರಿಣಾಮ ಪಲ್ಮನರಿ ಥ್ರೆಂಬೋ ಎಂಬೋಲಿಸಂ ಆಗಿದೆ ಎಂದು ತಜ್ಞ ವೈದ್ಯ ಪ್ರೊ| ಡಿ.ಎಂ. ಕಬಾಡಿ ಅವರು ಮುಖ್ಯಮಂತ್ರಿಗೆ ವಿವರಿಸಿದರು.
ಪಾಟೀಲ ಪುಟ್ಟಪ್ಪನವರ ಮಕ್ಕಳಾದ ಅಶೋಕ, ಮಂಜುಳಾ ಹಾಗೂ ಶೈಲಜಾ ಅವರಿಂದಲೂ ಮುಖ್ಯಮಂತ್ರಿಗಳು ಮಾಹಿತಿ ಪಡೆದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೃಹತ್, ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ, ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್, ಜಿಲ್ಲಾಧಿಕಾರಿ ದೀಪಾ ಚೋಳನ್, ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ, ವೈದ್ಯಕೀಯ ನಿರ್ದೇಶಕ ಡಾ| ಅರುಣಕುಮಾರ್, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಯಶವಂತ ಮದೀನಕರ್, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ| ಸುಜಾತಾ ಹಸವಿಮಠ ಇದ್ದರು.