ಧಾರವಾಡ: ಹಾಲು ಅಮೃತ ಸಮಾನವಾಗಿದ್ದು, ಹಬ್ಬದ ನಿಮಿತ್ತ ಅದನ್ನು ಹಾವಿನ ಹುತ್ತಕ್ಕೆ ಹಾಕಿ ವ್ಯಯ ಮಾಡುವದಕ್ಕಿಂತ ಮಕ್ಕಳಿಗೆ ಕುಡಿಸಿದರೆ ಅವರಲ್ಲಿರುವ ಪೌಷ್ಟಿಕತೆಯಾದರೂ ಹೆಚ್ಚಾಗುತ್ತದೆ ಎಂದು ಬಸವ ಕೇಂದ್ರ ಅಧ್ಯಕ್ಷ ಶಿವಣ್ಣ ಶರಣ್ಣನವರ ಹೇಳಿದರು.
ನಗರದಲ್ಲಿ ಬುದ್ದರಕ್ಕಿತ ವಸತಿ ಶಾಲೆಯಲ್ಲಿ ಬಸವ ಪಂಚಮಿ ಹಾಗೂ ಅಕ್ಕನಾಗಮ್ಮ ಶರಣೆಯ ಸ್ಮರಣೋತ್ಸವ ಸಮಾರಂಭದಲ್ಲಿ ಮಕ್ಕಳಿಗೆ ಹಾಲು ಹಾಗೂ ಸಿಹಿ ತಿಂಡಿ ವಿತರಿಸಿ ಅವರು ಮಾತನಾಡಿದರು. ಬರಗಾಲದ ಪರಿಸ್ಥಿತಿಯಲ್ಲಿ ಹಸುಗಳಿಗೆ ಮೇವು ಸೇರಿದಂತೆ ನೀರಿನ ಸೌಲಭ್ಯ ಸಿಗುತ್ತಿಲ್ಲ.
ಇಂತಹ ಸಮಯದಲ್ಲೂ ಕೂಡ ಹಸುಗಳು ನಮಗೆ ಹಾಲು ಒದಗಿಸುತ್ತಿವೆ. ಹಬ್ಬದ ನೆಪದಲ್ಲಿ ಹುತ್ತಕ್ಕೆ ಹಾಲು ಹಾಕಿ ಹಾಲನ್ನು ಮಣ್ಣು ಪಾಲು ಮಾಡುವುದು ಸೂಕ್ತವಲ್ಲ. ಅದಕ್ಕೆ ಬದಲಾಗಿ ವಸತಿ ಶಾಲೆಯ ಮಕ್ಕಳಿಗೆ ಅಥವಾ ಇನ್ನಿತರರಿಗೆ ಹಾಲು ಒದಗಿಸಿದರೆ ಅದು ಅವರಿಗೆ ಹೊಟ್ಟೆಯನ್ನಾದರೂ ತುಂಬಿಸುತ್ತದೆ.
ಕಲ್ಲನಾಗರ ಹಾಲು ಮಕ್ಕಳ ಪಾಲು ಎಂಬಂತೆ ಇವತ್ತು ಬಸವ ಪಂಚಮಿಯನ್ನು ಮಕ್ಕಳಿಗೆ ಹಾಲುಣಿಸುವ ಮೂಲಕ ಆಚರಿಸುತ್ತಿದ್ದೇವೆ ಎಂದರು. ಶಾಲೆಯ ಪ್ರಾಚಾರ್ಯ ಎಂ.ಎ. ಹುಂಡೇಕಾರ ಮಾತನಾಡಿ, ವೈಚಾರಿಕತೆ ಹಿನ್ನಲೆಯಲ್ಲಿ ಮಕ್ಕಳಿಗೆ ಹಾಲು ನೀಡುವ ಮೂಲಕ ಬಸವ ಪಂಚಮಿಯನ್ನು ಆಚರಿಸುತ್ತಿರುವುದು ಸಂತಸದ ವಿಷಯ.
ಹಾವುಗಳು ಎಂದಿಗೂ ಹಾಲನ್ನು ಸೇವಿಸುವುದಿಲ್ಲ. ಗೆದ್ದಿಲು ಹುಳುಗಳು ಕಟ್ಟಿದ ಮಣ್ಣಿನ ಗೂಡಿನಲ್ಲಿ ಹಾವುಗಳು ವಾಸ ಮಾಡುತ್ತವೆ ಹೊರತು ಹಾವುಗಳು ಗೂಡು ಕಟ್ಟುವುದಿಲ್ಲ. ಹೀಗಾಗಿ ಹುತ್ತಕ್ಕೆ ಪೂಜೆ ಮಾಡಿ ಹಾಲು ಹಾಕಿದರೆ ಆಕಸ್ಮಾತ ಅದರಲ್ಲಿ ಹಾವು ವಾಸವಾಗಿದ್ದರೆ ಅದು ಸಾಯುತ್ತದೆ.
ಹಬ್ಬ ನೆಪದಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡುವ ಬದಲಾಗಿ ಮಕ್ಕಳಿಗೆ ಹಾಲುಣಿಸಿ ಮಕ್ಕಳ ಆಸೆಯನ್ನು ತೀರಿಸಬಹುದು ಎಂದರು. ಬಸವ ಕೇಂದ್ರದ ಮಲ್ಲಿಕಾರ್ಜುನ ನಡಕಟ್ಟಿ, ಫಕ್ಕೀರಗೌಡ ನಾಗನಗೌಡರ, ಶಂಕರಣ್ಣ ಕೋರಿಶೆಟ್ಟರ, ಮಲ್ಲಿಕಾರ್ಜುನ ಚೌಧರಿ, ಪ್ರಜ್ಞಾ ನಡಕಟ್ಟಿ, ಚನಬಸಪ್ಪ ಕಗ್ಗಣ್ಣವರ, ಶಿವಶರಣ ಕಲಬಶೆಟ್ಟರ, ರಾಜು ಮರಳಪ್ಪನವರ ಇದ್ದರು.
ಬಸವಂತ ತೋಟದ ಸ್ವಾಗತಿಸಿದರು. ಸುಜಾತಾ ನಾಗನಗೌಡರ ವಂದಿಸಿದರು. ಬಸವಕೇಂದ್ರದ ಸಂಚಾಲಕರಿಂದ ಮಕ್ಕಳಿಗೆ ಹಾಲು ಹಾಗೂ ಸಿಹಿ ತಿಂಡಿ ವಿತರಿಸಲಾಯಿತು.