Advertisement

ಶೌಚಾಲಯಕ್ಕೂ ಬಣ್ಣದ ಭಾಗ್ಯ!

10:18 AM Jun 17, 2019 | Team Udayavani |

ವೀರಾರೆಡ್ಡಿ.ಆರ್‌.ಎಸ್‌.
ಬಸವಕಲ್ಯಾಣ:
ಜೂ.27ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉಜಳಂಬ ಗ್ರಾಮಕ್ಕೆ ಗ್ರಾಮ ವಾಸ್ತವ್ಯ ಮಾಡಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಶೌಚಾಲಯಕ್ಕೂ ಬಣ್ಣ ಕಾಣುವ ಭಾಗ್ಯ ಸಿಕ್ಕಿದೆ.

Advertisement

ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಗ್ರಾಮದಲ್ಲಿ ನಿರ್ಮಾಣಗೊಂಡ ಅಂದಾಜು 700ಕ್ಕೂ ಹೆಚ್ಚು ಶೌಚಾಲಯಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಬಣ್ಣ ಹಚ್ಚುವ ಕಾರ್ಯ ಭರದಿಂದ ನಡೆದಿದೆ.

ಶೌಚಾಲಯ ನಿರ್ಮಾಣಗೊಂಡು ವರ್ಷಗಳೇ ಕಳೆದರೂ ಬಣ್ಣ ಕಾಣದಿರುವ ಶೌಚಾಲಯಗಳನ್ನು ಆಕರ್ಷಕವಾಗಿ ಮಾಡಿ, ಪ್ರತಿಯೊಬ್ಬರೂ ಅವುಗಳನ್ನು ಬಳಸುವಂತೆ ಮಾಡುವ ಉದ್ದೇಶದಿಂದ ಗ್ರಾಮದ ಎಲ್ಲ ಶೌಚಾಲಯಗಳಿಗೆ ಬಣ್ಣ ಬಳಿಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮದ ಬಹುತೇಕ ಮನೆಗಳಲ್ಲಿ ಶೌಚಾಲಯ ನಿರ್ಮಿಸಿದ್ದರೂ ಕೆಲವರು ಬಯಲಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತಿತ್ತು. ಆದರೆ ಈಗ ಮುಖ್ಯಮಂತ್ರಿ ಆಗಮನದಿಂದ ಶೌಚಾಲಯಕ್ಕೆ ಬಣ್ಣ ಬಳಿಯುತ್ತಿರುವುದು ನೋಡಿದರೆ ಶೌಚಾಲಯ ಮಹತ್ವದ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದಂತಾಗುತ್ತಿದೆ ಎಂದು ಗ್ರಾಮಸ್ಥರು ಖುಷಿಯಲ್ಲಿದ್ದಾರೆ.

ಹೀಗಾಗಿ ಸುಮಾರು 100ಕ್ಕೂ ಹೆಚ್ಚು ಕಾರ್ಮಿಕರನ್ನು ಬಳಸಿಕೊಂಡು ಗ್ರಾಮದ ಮನೆ-ಮನೆ ತಿರುಗಿ ಶೌಚಾಲಗಳನ್ನು ಸ್ವಚ್ಛ ಮಾಡುವುದು ಮತ್ತು ಬಣ್ಣ ಬಳಿಯುವ ಕೆಲಸದ ಜೊತೆಗೆ ಪ್ರತಿಯೊಂದು ಸಮಸ್ಯೆಗಳನ್ನು ಸಂಬಂಧ ಪಟ್ಟ ಆಯಾ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ನಿಂತು ಬಗೆಹರಿಸುವ ಕಾರ್ಯ ಮಾಡುವಲ್ಲಿ ತೊಡಗಿದ್ದಾರೆ.

Advertisement

ಗಡಿ ಪ್ರದೇಶದಲ್ಲಿನ ಸಮಸ್ಯೆಗಳನ್ನು ಆಲಿಸಲು ಒಂದು ದಿನ ಗ್ರಾಮ ವಾಸ್ತವ್ಯಕ್ಕೆ ಸಿಎಂ ಬರುತ್ತಿದ್ದಾರೆ. ಆದರೆ ಅವರು ಬರುವ ಮುನ್ನವೇ ಗ್ರಾಮದ ಸಮಸ್ಯೆಗಳನ್ನು ತರಾತುರಿಯಲ್ಲಿ ಬಗೆಹರಿಸುವುದನ್ನು ನೋಡಿದರೆ, ಜೂ.29ರಂದು ಮುಖ್ಯಮಂತ್ರಿಗಳು ಏನು ಮಾಡುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಲು ಬರುತ್ತಿರುವ ಹಿನ್ನೆಲೆಯಲ್ಲಿ ಮೂಲಭೂತ ಸೌಲಭ್ಯ ವಂಚಿತ ಗಡಿಭಾಗದ ಉಜಳಂಬ ಗ್ರಾಮದಲ್ಲಿ ಶಾಲೆ, ರಸ್ತೆಗಳು ಸೇರಿದಂತೆ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದು ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.

ಉಜಳಂಬ ಗ್ರಾಮದಲ್ಲಿ ನಿರ್ಮಿಸಲಾದ ಎಲ್ಲ ಶೌಚಾಲಯಗಳಿಗೆ ಬಣ್ಣ ಹಚ್ಚುವ ಕೆಲಸ ನಡೆಯುತ್ತಿದೆ. ಇದರಿಂದ ಗ್ರಾಮಸ್ಥರಲ್ಲಿ ಶೌಚಾಲಯದ ಮಹತ್ವ ಮತ್ತು ಅದರ ಬಳಕೆ ಬಗ್ಗೆ ಜಾಗೃತಿ ಮೂಡಿಸಿದಂತಾಗುತ್ತದೆ.
ಜೈಪ್ರಕಾಶ ಚವ್ಹಾಣ,
ತಾಪಂ ವ್ಯವಸ್ಥಾಪಕರು

ಮುಖ್ಯಮಂತ್ರಿಗಳ ಆಗಮನದಿಂದ ಉಜಳಂಬ ಗ್ರಾಮದ ಶಾಲೆ, ರಸ್ತೆ, ಚರಂಡಿ ಹಾಗೂ ಶೌಚಾಲಯ ಸೇರಿದಂತೆ ಪ್ರತಿಯೊಂದನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದ ಸೌಲಭ್ಯ ವಂಚಿತ ಗ್ರಾಮ ಎಂಬ ಹಣೆ ಪಟ್ಟಿಯಿಂದ ಮುಕ್ತಿ ಸಿಕ್ಕಂತಾಗಿದೆ.
ಉಜಳಂಬ ಗ್ರಾಮಸ್ಥರು

Advertisement

Udayavani is now on Telegram. Click here to join our channel and stay updated with the latest news.

Next