ಬಸವಕಲ್ಯಾಣ: ಬಸವ ಜಯಂತಿ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಗರಕ್ಕೆ ಆಗಮಿಸಿರುವ ಬಸವ ಭಕ್ತರಿಗೆ ಬಸವೇಶ್ವರ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ಮಾಡಲಾಗಿರುವ ಅನ್ನ ದಾಸೋಹ ವ್ಯವಸ್ಥೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ.
ನಿಮಿತ್ತ ಶರಣ ನಗರಿ ಬಸವಕಲ್ಯಾಣ ಸೇರಿದಂತೆ ಮಹಾರಾಷ್ಟ್ರ, ಆಂಧ್ರ ಮತ್ತು ತೆಲಾಂಗಣದ ಬಸವಾಭಿಮಾನಿಗಳು ಹಾಗೂ ಸಾರ್ವಜನಿಕರು ಬಸವಣ್ಣನವರ ಜಾತ್ರೆಗೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿರುತ್ತದೆ.
ಆದರೆ ನಿರ್ದಿಷ್ಟ ಸ್ಥಳದಲ್ಲಿ ಮಾರ್ಗ ಸೂರ್ಚಿ, ಬ್ಯಾನರ್ ಹಾಗೂ ದಾಸೋಹಕ್ಕೆ ಸಂಬಂಧಿಸಿದ ಯಾವುದೇ ಫಲಕ ಅಳವಡಿಸದೆ ಇರುವುದರಿಂದ ತೊಂದರೆ ಅನುಭವಿಸಿದರು. ಎಷ್ಟೋ ಭಕ್ತರು ಮಹಾಪ್ರಸಾದ ವ್ಯವಸ್ಥೆ ಇಲ್ಲ ಎಂದು ತಿಳಿದು ನಿರಾಶೆಯಿಂದ ತಮ್ಮ ಊರುಗಳಿಗೆ ತೆರಳಿದರು ಎಂಬ ಮಾತು ಕೇಳಿ ಬಂದಿದೆ.
ವಿಶ್ವಗುರು ಬಸವಣ್ಣನ ಜಾತ್ರೆ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ ಎಂಬ ಸಂಗತಿ ಮೊದಲೇ ಗೊತ್ತಿರುತ್ತದೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ದಾಸೋಹ ವ್ಯವಸ್ಥೆ ಮಾಡದೇ ಕಾಲೇಜುವೊಂದರ ಮೂಲೆಯಲ್ಲಿ ಪ್ರಸಾದ ವ್ಯವಸ್ಥೆ ಮಾಡಿರುವುದು ಬಹುತೇಕ ಭಕ್ತರಿಗೆ ಗೊತ್ತಾಗಲಿಲ್ಲ. ಹಾಗಾಗಿ ನಗರಕ್ಕೆ ಆಗಮಿಸಿದ ಭಕ್ತರು ಪ್ರಸಾದ ಸೇವಿಸಲು ಸ್ಥಳ ಹುಡುಕುವಂತಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ನಿರಂತರ ದಾಸೋಹ ಇರುತ್ತದೆ ಎಂದು ಜಾತ್ರಾ ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಲಾಗಿದೆ. ಆದರೆ ಮಂಗಳವಾರ ಸಂಜೆ 4:00 ಗಂಟೆಯಾದರೂ ಪ್ರಸಾದ ವಿತರಣೆ ಮಾಡದಿರುವುದು ಕಮಿಟಿ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂಬುದು ಭಕ್ತರ ಆರೋಪವಾಗಿದೆ.
ಜಾತ್ರಾ ಮಹೋತ್ಸವದ ಮುನ್ನಾ ದಿನವೇ ದೇವಸ್ಥಾನದ ಎದುರು ಇರುವ ಮುಖ್ಯರಸ್ತೆಗೆ ಡಾಂಬರೀಕರಣ ಮಾಡಲಾಗಿದೆ. ಬಿಸಿಲಿನಿಂದ ಡಾಂಬರ್ ಬಿಸಿಗೊಳ್ಳುತ್ತಿದೆ. ಇದರಿಂದ ಪಾದರಕ್ಷೆ ಹಾಕದ ಹರಕೆ ಹೊತ್ತ ಭಕ್ತರು ಹಾಗೂ ನಂಧ್ವಜ ಹಿಡಿದವರಿಗೆ ನುಂಗಲಾರದ ತುತ್ತಾಗಿ ಪರಿಣಿಮಿಸಿರುವುದು ಅವ್ಯವಸ್ಥೆಗೆ ಇನ್ನೊಂದು ಉದಾಹರಣೆಯಾಗಿದೆ.
ಒಟ್ಟಿನಲ್ಲಿ ಕಳೆದ ಜಾತ್ರೆಗೆ ಹೋಲಿಸಿದರೆ ಈ ವರ್ಷದ ಜಾತ್ರೆ ಬಸವಾಭಿಮಾನಿಗಳಿಗೆ ಹಾಗೂ ನಗರದ ಬಹುತೇಕ ನಿವಾಸಿಗಳಿಗೆ ಅಷ್ಟು ಸಮಾಧಾನಕಾರವಾಗಿಲ್ಲ ಎಂಬ ಮಾತುಗಳು ಅಲಲ್ಲಿ ಕೇಳಿಬಂದವು.