Advertisement

ಇಂದಿನಿಂದ ಬಸವ ಉತ್ಸವ; ಗರಿಗೆದರಿದ ಉತ್ಸಾಹ

04:10 PM Mar 11, 2023 | Team Udayavani |

ಬೀದರ: ಬಸವ ತತ್ವದ ಪ್ರಚಾರ-ಪ್ರಸಾರದ ಜತೆಗೆ ಶರಣ ಸಂಸ್ಕೃತಿ ಪರಿಚಯಕ್ಕೆ ಮುನ್ನಡಿಯಾಗಿರುವ “ಬಸವ ಉತ್ಸವ” ಆಚರಣೆಗೆ ಕ್ಷಣಗಣನೆ ಶುರುವಾಗಿದೆ. ಪ್ರಕೃತಿ ವಿಕೋಪ ಸೇರಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕಳೆದ ಹಲವು ವರ್ಷಗಳಿಂದ ಬ್ರೇಕ್‌ ಬಿದ್ದಿದ್ದ ಉತ್ಸವ ಪರಂಪರೆಗೆ ಜಿಲ್ಲಾಡಳಿತ ಮರು ಚಾಲನೆ ನೀಡಿದ್ದು, ಮಾ.11 ಮತ್ತು 12ರಂದು ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಅರ್ಥಪೂರ್ಣ ಆಚರಿಸಲು ಸಿದ್ಧತೆ ಪೂರ್ಣಗೊಂಡಿದೆ.

Advertisement

ಬಸವ ಉತ್ಸವ ಹಿನ್ನೆಲೆ ಕಲ್ಯಾಣ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬಸವಾದಿ ಶರಣರ ಸ್ಮಾರಕಗಳು, ಐತಿಹಾಸಿಕ ಕೋಟೆ ವಿದ್ಯುತ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಜತೆಗೆ ನಗರದ ಪ್ರಮುಖ ಐತಿಹಾಸಿಕ ಕಟ್ಟಡಗಳು, ವೃತ್ತಗಳಿಗೂ ಸಹ ದೀಪಾಲಂಕಾರದಿಂದ ಮೆರಗು ನೀಡಲಾಗಿದೆ. ಕೆಲವೆಡೆ ಹದಗೆಟ್ಟ ನಗರದ ಪ್ರಮುಖ ರಸ್ತೆಗಳಿಗೆಲ್ಲ ಸುಧಾರಣೆ ಭಾಗ್ಯವೂ ಸಿಕ್ಕಿದೆ.

ಬಸವಾದಿ ಶರಣರ ವಚನ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ನೆಲದ ಸಂಸ್ಕೃತಿ ಮತ್ತು ಗತ ವೈಭವವನ್ನು ನಾಡಿಗೆ ಪ್ರತಿಬಿಂಬಿಸಲು ಶರಣರ ಪುಣ್ಯಭೂಮಿಯಲ್ಲಿ ಕಳೆದ 2010ರಿಂದ ಬಸವ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ವಿವಿಧ ಕಾರಣಗಳಿಂದ ಕೈಬಿಡುತ್ತಲೇ ಬರಲಾಗುತ್ತಿದೆ. ಕಳೆದ 12 ವರ್ಷಗಳಲ್ಲಿಐದು ಬಾರಿ ಮಾತ್ರ ಉತ್ಸವ ಆಚರಣೆ ನಡೆದಿದೆ. ಬಸವ ತತ್ವದ ಮೇಲೆ ಆಡಳಿತ ನಡೆಸುತ್ತೇವೆ ಎನ್ನುವ ಸರ್ಕಾರಗಳು ಮಾತ್ರ ಬಸವಣ್ಣನನ್ನೇ ಮರೆಯುತ್ತ ಬರುತ್ತಿದೆ ಎಂಬ ಆಕ್ರೋಶ ಬಸವ ಅಭಿಮಾನಿಗಳಲ್ಲಿತ್ತು.

ಆದರೆ, ಈ ಬಾರಿ ಬಸವ ಭಕ್ತರ ಆಶಯಕ್ಕೆ ಸರ್ಕಾರ ಸ್ಪಂದನೆ ಮಾಡಿದೆ. ಕೇಂದ್ರ ಸಚಿವ ಭಗವಂತ ಖೂಬಾ ಅವರು ವಿಶೇಷ ಕಾಳಜಿ ವಹಿಸಿ ಮುಖ್ಯಮಂತ್ರಿಗಳಿಂದ ಉತ್ಸವ ಆಚರಣೆಗೆ ಗ್ರೀನ್‌ ಸಿಗ್ನಲ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇತ್ತ ನನೆಗುದಿಗೆ ಬಿದ್ದಿದ್ದ ಬೀದರ ಉತ್ಸವವನ್ನು ಯಶಸ್ವಿಯಾಗಿ ನಡೆಸಿ ಜನ ಮೆಚ್ಚುಗೆಗೆ ಪಾತ್ರವಾಗಿರುವ ಜಿಲ್ಲಾಡಳಿತ ಈಗ ಬಸವಕಲ್ಯಾಣದಲ್ಲಿ ಬಸವಕಲ್ಯಾಣ ಉತ್ಸವನ್ನು ಐತಿಹಾಸಿಕವಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ವಿಶಾಲವಾದ ರಥ ಮೈದಾನವನ್ನು ಉತ್ಸವಕ್ಕಾಗಿ ಸಜ್ಜುಗೊಳಿಸಲಾಗಿದೆ.

ಈ ಬಾರಿ ಮುಖ್ಯ ವೇದಿಕೆಯಲ್ಲಿ ಬಸವಕಲ್ಯಾಣ ಕೋಟೆ ಮುಖ್ಯ ದ್ವಾರದ ಬ್ಯಾಕ್‌ ಡ್ರಾಪ್‌ ರೂಪ ನೀಡಲಾಗಿದ್ದು, ಕಣ್ಮನ ಸೆಳೆಯುತ್ತಿದೆ. ಹೊಸ ತಂತ್ರಜ್ಞಾನದ ಝಗಮಗಿಸುವ ವಿದ್ಯುತ್‌ ಮತ್ತು ಧ್ವನಿ ವರ್ಧಕಗಳನ್ನು ಅಳವಡಿಸಲಾಗಿದೆ. ವಿಐಪಿಗಳ ಆಸನಕ್ಕಾಗಿ ಪ್ರತ್ಯೇಕ ಗ್ಯಾಲರಿಗಳ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರಿಗಾಗಿ ಸಾವಿರಾರು ಆಸನಗಳನ್ನು ಹಾಕಲಾಗಿದೆ. ಉತ್ಸವದ ಭಾಗವಾಗಿ ಈ ಬಾರಿ ವಿವಿಧ ಕ್ರೀಡೆ, ಸಾಂಸ್ಕೃತಿಕ ಸೇರಿ ಇತರೆ ಉತ್ಸವಗಳನ್ನು ಸಹ ಸಂಘಟಿಸಿರುವುದು ವಿಶೇಷ.

Advertisement

ಬಸವ ಉತ್ಸವವು ರಾಜ್ಯದ ಇತರೆ ಉತ್ಸವಗಳಂತೆ ಬರೀ ಜಾತ್ರೆ ಅಥವಾ ಸಂಭ್ರಮಕ್ಕಾಗಿನ ಆಚರಣೆಯಲ್ಲ, ಶರಣ ಸಂಸ್ಕೃತಿಯ ಪ್ರತೀಕ.
ಶರಣರು ಸಾರಿದ ಸಮಾನತೆ, ಭಾವೈಕ್ಯತೆಯ ತತ್ವ ಪ್ರಚಾರ, ಪ್ರಸಾರವೇ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ಮೈಸೂರು ಉತ್ಸವ, ಹಂಪಿ ಮತ್ತು ಆನೆಗೊಂದಿ ಉತ್ಸವಗಳ ಮಾದರಿಯಲ್ಲಿ ವಚನ ಚಳುವಳಿಯ ಈ ನೆಲದಲ್ಲಿ ಪ್ರತಿ ವರ್ಷ ಕಡ್ಡಾಯವಾಗಿ ಬಸವ ಉತ್ಸವ ಆಚರಣೆಯನ್ನು ಜಾರಿಗೆ ತರಬೇಕಾಗಿದೆ. ಉತ್ಸವಕ್ಕಾಗಿ ಪ್ರತ್ಯೇಕ ಅನುದಾನವನ್ನು ಮೀಸಲಿಡಬೇಕಿದೆ.


~ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next