Advertisement

ಬಸಾಪೂರ ಏತ ನೀರಾವರಿ ಶೀಘ್ರ ಕಾರ್ಯಾರಂಭ

09:50 AM Aug 05, 2019 | Suhan S |

ಹಾನಗಲ್ಲ: ರಾಜ್ಯ ಸರಕಾರದ ಅನುದಾನ, ಜನರ ಸಹಕಾರ ಹಾಗೂ ಜನಪ್ರತಿನಿಧಿಗಳ ಪ್ರಾಮಾಣಿಕ ಪ್ರಯತ್ನದಿಂದ ಜನಪರ ಯೋಜನೆಗಳು ಜಾರಿಯಾಗಲಿದ್ದು, ಈಗ 2ನೇ ಹಂತದ ಬಸಾಪೂರ ಏತ ನೀರಾವರಿ ಯೋಜನೆ ಆರಂಭಗೊಂಡು 2740 ಎಕರೆ ಕೃಷಿಭೂಮಿ ನೀರಾವರಿಗೊಳಪಡಲಿದೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.

Advertisement

ರವಿವಾರ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ವರದಾ ನದಿ ಬಲದಂಡೆ ಕಾಲುವೆ ಯೋಜನೆಯ 2ನೇ ಹಂತದ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ನೀರಾವರಿ ನಿಗಮ ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ವಿದ್ಯುತ್‌ ಸಂಪರ್ಕಕ್ಕೆ 72 ಲಕ್ಷ ರೂ. ಇಲಾಖೆಗೆ ಪಾವತಿಸದೆ ಯೋಜನೆ ನಿಧಾನಗತಿಯಲ್ಲಿತ್ತು. ಇಲಾಖೆ ಅಧಿಕಾರಿಗಳ ಬೇಡಿಕೆಯಂತೆ ನೀರಾವರಿ ನಿಗಮದಿಂದ 72 ಲಕ್ಷ ರೂ. ಬಿಡುಗಡೆಗೊಳಿಸಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯಿಂದ ತಾಲೂಕಿನ 2740 ಎಕರೆ ಕೃಷಿಭೂಮಿ ನೀರಾವರಿಗೊಳಪಟ್ಟಿದೆ ಎಂದ ಅವರು, ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳುವಾಗ ರೈತ ಸಮುದಾಯ ಸಹಕರಿಸಬೇಕು. ಭೂ ಸ್ವಾದೀನಕ್ಕೆ ಸಂಬಂಧಿಸಿದಂತೆ ಉಳಿದಿರುವ ಪರಿಹಾರದ ಬಾಕಿ ಶೀಘ್ರದಲ್ಲಿ ರೈತರಿಗೆ ನೀಡುವಂತೆ ಇಲಾಖೆಗೆ ಸೂಚಿಸಲಾಗಿದೆ. ಈ ಕುರಿತು ಭಯಪಡಬೇಕಾಗಿಲ್ಲ ಎಂದರು.

ತಾಲೂಕಿನ ಗುಡ್ಡದ ಭಾಗದ ಎಲ್ಲ ಕೆರೆಗಳನ್ನು ತುಂಬಿಸುವ ಆಸೆ ತಮ್ಮದಾಗಿದೆ. ಇದರಿಂದ ಅಂತರ್ಜಲ ಹೆಚ್ಚಿಸಿ ಕೊಳವೆ ಭಾವಿಗಳಲ್ಲಿ ನೀರು ಹೆಚ್ಚಿಸಲು ಸಹಕಾರಿಯಾಗುತ್ತದೆ. ಸೋಮಾಪುರದ ಹತ್ತಿರ 10 ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್‌ ನಿರ್ಮಿಸಿ ನೀರು ನಿಲ್ಲಿಸಿದರೆ ಸುಮಾರು 10 ಕಿಮೀ ವರೆಗೂ ಕೊಳವೆ ಬಾವಿಗಳು ಪುನಶ್ಚೇತನಗೊಂಡು, ಮಳೆಯ ಅನಿಶ್ಚಿತತೆಯ ಸಂದರ್ಭದಲ್ಲಿ ಇವುಗಳ ಲಾಭ ರೈತರಿಗೆ ತಲುಪಲಿದೆ. ಇದರೊಂದಿಗೆ 604 ಕೋಟಿ ರೂ.ಗಳಲ್ಲಿ ತಾಲೂಕಿನ ಬಾಳಂಬೀಡ, ಹುಲಗಡ್ಡಿ, ಗೊಂದಿ, ನರೇಗಲ್ ಸೇರಿದಂತೆ ನಾಲ್ಕು ಏತ ನೀರಾವರಿ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದೊಂದಿಗೆ ಚರ್ಚಿಸಿ, ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಶೀಘ್ರದಲ್ಲಿ ನಾಲ್ಕೂ ಯೋಜನೆಗಳು ಮಂಜೂರಾಗಿ ಕಾರ್ಯರಂಭಗೊಳ್ಳಲಿವೆ ಎಂದು ಸಿ.ಎಂ.ಉದಾಸಿ ಭರವಸೆ ನೀಡಿದರು.

ನೀರಾವರಿ ನಿಗಮದ ಅಧಿಕಾರಿ ಬಿ.ಸುರೇಶ್‌ ಮಾತನಾಡಿ, ಬಸಾಪುರ ಏತ ನೀರಾವರಿ ಯೋಜನೆಯಡಿ 0.6 ಟಿಎಂಸಿ ನೀರು ಬಳಸಿಕೊಳ್ಳುವ ಅವಕಾಶವಿದೆ. ಮೊದಲ ಹಂತದಲ್ಲಿ ತಾಲೂಕಿನ 2240 ಎಕರೆ ಭೂಮಿಗೆ ನೀರುಣಿಸುವುದರ ಜತೆಗೆ 11 ಕೆರೆಗಳಿಗೆ ನೀರು ಹರಿಸಲಾಗುವುದು. ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇನ್ನಷ್ಟು ಪೂರಕ ಕಾಮಗಾರಿ ಕೈಗೊಳ್ಳಬೇಕಿದೆ. ಬಸಾಪುರ ಏತನೀರಾವರಿಯಿಂದ ಎಲ್ಲ ಕೆರೆ-ಕಟ್ಟೆಗಳಿಗೂ ನೀರು ತುಂಬಿಸುವ ನಿರಂತರ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ ಮಾತನಾಡಿ, ಹಿಂದಿನ ಸರಕಾರದ ಅವಧಿಯಲ್ಲಿ ನಿಧಾನಗತಿಯಲ್ಲಿ ಸಾಗಿತ್ತು. ಸಿ.ಎಂ.ಉದಾಸಿ ಅವರು ಶಾಸಕರಾಗಿ ಆಯ್ಕೆಯಾದ ನಂತರ ಕಾಮಗಾರಿ ಒಂದು ವರ್ಷದ ಅವಧಿಯಲ್ಲಿ ವೇಗ ಪಡೆದುಕೊಂಡಿತ್ತು. ನೀರಾವರಿ ನಿಗಮದೊಂದಿಗೆ ಶಾಸಕರು ಚರ್ಚೆ ನಡೆಸಿ ಹಣ ಬಿಡುಗಡೆಗೊಳಿಸಿದ್ದರಿಂದ ಯೋಜನೆ ಸಾಕಾರಗೊಂಡಿದೆ. ಈ ಯೋಜನೆಯಡಿ ಇನ್ನೂ 7 ಕೋಟಿಗಳ ಕಾಮಗಾರಿ ಬಾಕಿ ಉಳಿದಿದೆ. ಹಿರೇಬಾಸೂರಿನ ಕೆರೆಗಳು ಕಾಲುವೆಗಳಿಗಿಂತ ಎತ್ತರದಲ್ಲಿರುವುದರಿಂದ ನೀರು ಹರಿಸುವುದು ತಾಂತ್ರಿಕವಾಗಿ ಕಷ್ಟದಾಯಕವಾಗಿದ್ದು, ರೈತರು ಪ್ರತ್ಯೇಕ ಮೋಟರ್‌ ಅಳವಡಿಸಿಕೊಂಡು ನೀರು ಪಡೆಯಬಹುದು ಎಂದರು.

Advertisement

ಕಾರ್ಯಕ್ರಮದಲ್ಲಿ ಮುಖಂಡರಾದ ಬಿ.ಎಸ್‌.ಅಕ್ಕಿವಳ್ಳಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಮಹೇಶ ಬಣಕಾರ, ಚಂದ್ರಣ್ಣ ಕಳ್ಳಿ, ಎಸ್‌.ಆರ್‌.ಪಾಟೀಲ, ಸುರೇಶ ಕಾಗಿನೆಲ್ಲಿ, ಮಾರ್ತಾಂಡಪ್ಪ ದೇಸಾಯಿ, ಅಶೋಕ ಪೂಜಾರ, ಚಂದ್ರಪ್ಪ ಬಣಕಾರ, ನೂರಾನಿ ಮುಲ್ಲಾ, ಭೀಮಣ್ಣ ಯಮನೂರ, ಸುರೇಶ ಸುಣಗಾರ, ಹರೀಶ ಕೊಪ್ಪದ್‌ ನೀರಾವರಿ ನಿಗಮದ ಅಧಿಕಾರಿಗಳಾದ ಮಧುಕುಮಾರ, ದೇವರಾಜ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next