ವಿಜಯಪುರ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ವಿರುದ್ಧದ ಯತ್ನಾಳರ ಟೀಕಾಪ್ರಹಾರ ಹೀಗಿದೆ:
– ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣವನ್ನು ಅಣಕು ಪ್ರದರ್ಶನ ಎಂದು ಗೇಲಿ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿಯವರು, ಕರ್ನಾಟಕದ ಓವೈಸಿ ಆಗಲು ಹೊರಟಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಅವರಿಗೆ ಸರ್ಕಾರವೇ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು.
– ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿ ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿ, ಅಧಿಕಾರ ಇಲ್ಲದ ಸಂದರ್ಭದಲ್ಲಿ ರಾಜ್ಯದ ಪೊಲೀಸರ ಕುರಿತು ಮನ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿ ಹಾಗೂ ನಾಚಿಗೇಡಿನಿಂದ ಕೂಡಿದೆ.
– ಅವರ ಜೀವನ ಹಾಗೂ ರಾಜಕೀಯ ಸ್ಥಿತಿ ಅಣಕು ಪರಿಸ್ಥಿತಿಗೆ ತಲುಪಿದೆ. ಹೀಗಾಗಿ, ಮಾನಸಿಕ ಸ್ಥಿತಿ ಕಳೆದುಕೊಂಡಿರುವ ಅವರು, ನಾಗರಿಕರಿಗೆ ರಕ್ಷಣೆ ನೀಡುವ ಪೊಲೀಸರು, ದೇಶ ಕಾಯುವ ಸೈನಿಕರ ಕುರಿತು ಹಗುರವಾಗಿ ಮಾತನಾಡುವ ಮಟ್ಟಕ್ಕೆ ತಲುಪಿದ್ದಾರೆ.
– ಪೌರತ್ವ ಕಾಯ್ದೆ ವಿರೋಧಿಸಿ ಕಲಬುರಗಿಯಲ್ಲಿ ಜರುಗಿದ ಸಮಾವೇಶದಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಪಾಕಿಸ್ತಾನ ರಾಜಕೀಯ ನಾಯಕರಂತೆ ಮಾತನಾಡಿದ್ದಾರೆ. ದಾವುದ್ ಇಬ್ರಾಹಿಂ ತಮ್ಮ ಇಮ್ರಾನ್ ಖಾನ್, ಇಮ್ರಾನ್ ಖಾನ್ ತಮ್ಮ ರಾಹುಲ್ ಗಾಂಧಿ, ಇಮ್ರಾನ್ ಖಾನ್ ಅಳಿಯ ಕುಮಾರಸ್ವಾಮಿ ಎಂಬಂತೆ ಅವರು ಮಾತನಾಡಿದ್ದಾರೆ.
– ಪ್ರಧಾನಿ ಮೋದಿ ಕುಟುಂಬದ ಕುರಿತು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕೂಡ ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಮೋದಿ ಅವರ ತಂದೆಯ ಬರ್ತ್ ಸರ್ಟಿಫಿಕೇಟ್ ಮೋದಿ ಬಳಿ ಇಲ್ಲ ಎನ್ನುವ ಮೂಲಕ ಕೀಳಾಗಿ ಮಾತನಾಡಿದ್ದಾರೆ. ಮೋದಿ ತಂದೆಯ ದಾಖಲೆ ಕೇಳುವ ಇಬ್ರಾಹಿಂಗೆ ತಮ್ಮ ಮುತ್ತಜ್ಜ ಯಾರೆಂದು ಗೊತ್ತಿದ್ದರೆ ಹೇಳಲಿ.
– ಬಾಂಬ್ ಪತ್ತೆ ವಿಚಾರದಲ್ಲಿ ಗೃಹ ಇಲಾಖೆ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಬಾಂಬ್ ಇರಿಸಿದ ಆರೋಪಿ ಆದಿತ್ಯರಾವ್ ಶಂಕಿತ ಬ್ಲಾಕ್ ಮೇಲರ್ ಹಾಗೂ ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾನೆ. ಆದರೆ, ಪ್ರಕರಣದ ತನಿಖೆ ವಿಷಯದಲ್ಲಿ ಪೊಲೀಸ್ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ.