Advertisement

ಮಸ್ಕಿಯಲ್ಲಿ ‘ಪ್ರತಾಪ’ ತೋರಿದ ತುರುವಿನಹಾಳ: ಕಮಲ ಪಕ್ಷದ ಆಪರೇಶನ್ ಗೆ ಹಿನ್ನಡೆ?

12:03 PM May 02, 2021 | Team Udayavani |

ಮಸ್ಕಿ: ಕಾಂಗ್ರೆಸ್ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲರು ‘ದೋಸ್ತಿ ಕೂಟ’ ದೊಂದಿಗೆ ಸೇರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಮಲ ಪಾಳಯಕ್ಕೆ ಸೇರಿದ್ದರು. ನಂತರ ರಾಜ್ಯದಲ್ಲಿ ನಡೆದ ಮೊದಲ ಮತ್ತು ಎರಡನೇ ಉಪ ಚುನಾವಣೆಯಲ್ಲಿ ಕಾನೂನು ಕಾರಣಗಳಿಂದ ಮಸ್ಕಿಯಲ್ಲಿ ಚುನಾವಣೆ ನಡೆದಿರಲಿಲ್ಲ. ಆದರೆ ಈಗ ನಡೆದ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಗೆದ್ದು ‘ಪ್ರತಾಪ’ ತೋರಿಸಲು ಸಜ್ಜಾಗಿದ್ದ ಪಾಟೀಲರು ಸೋಲಿನತ್ತ ಮುಖ ಮಾಡಿದ್ದಾರೆ.

Advertisement

2018ರ ಚುನಾವಣೆಯಲ್ಲಿ ಪ್ರತಾಪ ಗೌಡ ಪಾಟೀಲರು ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರೆ, ಬಸನಗೌಡ ತುರುವಿನಹಾಳ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು ಜಿದ್ದಾಜಿದ್ದಿನಿಂದ ಕೂಡಿದ್ದ ಆ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲರು ಕೇವಲ 2013 ಮತಗಳ ಅಂತರದಿಂದ ತುರುವಿನಹಾಳ ವಿರುದ್ಧ ಜಯ ಸಾಧಿಸಿದ್ದರು.

ಆದರೆ ನಂತರ ನಡೆದ ಬೆಳವಣಿಗೆಯಲ್ಲಿ ಪ್ರತಾಪ್ ಗೌಡರು ಬಿಜೆಪಿ ಪಕ್ಷಕ್ಕೆ ಸೇರಿದರು. ಇದೇ ಕಾರಣದಿಂದ ಬಿಜೆಪಿಯಲ್ಲಿದ್ದ ಬಸನಗೌಡ ತುರುವಿನಹಾಳ ಕಾಂಗ್ರೆಸ್ ಪಕ್ಷದ ಕೈ ಹಿಡಿದರು. ಇದುವರೆಗೆ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ನ ಬಸನಗೌಡ ತುರುವಿನಹಾಳ ಭಾರಿ ಮುನ್ನಡೆ ಸಾಧಿಸಿದ್ದು, ಗೆಲುವು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ:ಮಸ್ಕಿಯಲ್ಲಿ ಬಿಜೆಪಿ ‘ಪ್ರತಾಪ’ವಿಲ್ಲ : ಸೋಲಿನ ಬಗ್ಗೆ ಟ್ವೀಟ್ ಮಾಡಿದ ವಿಜಯೇಂದ್ರ

ಸೋಲಿಗೆ ಕಾರಣವೇನು? ಸಿಎಂ ಯಡಿಯೂರಪ್ಪ, ಉಪಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಬಿಜೆಪಿ ಘಟಾನುಘಟಿಗಳು ಮಸ್ಕಿಯಲ್ಲಿ ಬಂದು ಪ್ರಚಾರ ನಡೆಸಿದ್ದರು. ರಾಜ್ಯದಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿದ್ದರೂ ಮಸ್ಕಿಯಲ್ಲಿ ಹಿನ್ನಡೆ ಅನುಭವಿಸಲು ಕಾರಣಗಳನ್ನು ಹುಡುಕುತ್ತಾ ಹೋದಾಗ ಹಲವು ಅಂಶಗಳು ಕಾಣಸಿಗುತ್ತದೆ.

Advertisement

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡರ ವಿರುದ್ಧ ಜನಾಕ್ರೋಶವಿತ್ತು ಎನ್ನಲಾಗುತ್ತದೆ. ಕಾಂಗ್ರೆಸ್ ನಿಂದ ಗೆದ್ದ ಅವರು ನಂತರ ಬಿಜೆಪಿಯ ಕೈ ಹಿಡಿದಿದ್ದು ಕ್ಷೇತ್ರದ ಜನರಲ್ಲಿ ಆಕ್ರೋಶ ಉಂಟು ಮಾಡಿತ್ತು ಎನ್ನುತ್ತದೆ ಚುನಾವಣೋತ್ತರ ಸಮೀಕ್ಷೆಗಳು. ಅದಲ್ಲದೆ ಕಳೆದ ಚುನಾವಣೆಯಲ್ಲಿ ಕೆಲವೇ ಕೆಲವು ಮತಗಳಿಂದ ಸೋಲನುಭವಿಸಿದ್ದ ತುರುವಿನಹಾಳರ ಬಗ್ಗೆ ಜನರಿಗೆ ಇದ್ದ ಅನುಕಂಪವೂ ಇಲ್ಲಿ ಕೆಲಸ ಮಾಡಿದೆ.

ಇದನ್ನೂ ಓದಿ: ಮಸ್ಕಿಯಲ್ಲಿ ಮುದುಡಿದ ಕಮಲ : ಸೋಲಿನ ಹತಾಶೆಯಿಂದ ಹೊರನಡೆದ ಪ್ರತಾಪಗೌಡ

ಪ್ರಮುಖ ವಿಚಾರವಾಗಿದ್ದ ಎನ್ಆರ್ ಬಿಸಿ 5ಎ ಕಾಲುವೆ ವಿಚಾರದಲ್ಲಿ ಪ್ರತಾಪ್ ಗೌಡ ಪಾಟೀಲರು ನಿರ್ಲಕ್ಷ್ಯ ತೋರಿದ್ದರು ಎಂಬ ಮಾತುಗಳು ಮಸ್ಕಿ ಕ್ಷೇತ್ರದಲ್ಲಿ ಜೋರಾಗಿಯೇ ಕೇಳಿಬಂದಿತ್ತು. ಇವೆಲ್ಲ ಕಾರಣಗಳಿಂದ ಬಿಜೆಪಿ ಹೆಚ್ಚು ಮತಗಳಿಸಬಹುದು ಎಂಬ ಲೆಕ್ಕಾಚಾರಗಳಿದ್ದ ಬೂತ್ ಗಳನ್ನೂ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next