ಬೆಂಗಳೂರು:ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎನ್ನುವ ಕಾರಣದಲ್ಲಿ ಬಿಜೆಪಿ ಯುವ ಮೋರ್ಚಾ ನಡೆಸುತ್ತಿರುವ ಮಂಗಳೂರು ಚಲೋ ರ‍್ಯಾಲಿಗೆ ಮೊದಲ ದಿನವೇ ಪೊಲೀಸರು ತಡೆ ಒಡ್ಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ರ‍್ಯಾಲಿಗೆ ಅವಕಾಶ ನೀಡಬಾರದು. ರ‍್ಯಾಲಿ ಮಂಗಳೂರು ತಲುಪಿದರೆ ಇದೀಗ ನೆಲೆಯಾಗಿರುವ ಶಾಂತಿಗೆ ಧಕ್ಕೆಯಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ರ‍್ಯಾಲಿ ಮಂಗಳೂರು ತಲುಪಬಾರದು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಕರಾವಳಿ ಭಾಗದ ಸಚಿವರು ದೂರು ನೀಡಿದ್ದಾರೆ ಎನ್ನಲಾಗಿದೆ.
ಆರೆಸ್ಸೆಸ್ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಪಿಎಫ್ ಐ, ಕೆಎಫ್ ಡಿ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸ ಬೇಕು ಹಾಗೂ ಈ ಸಂಘಟನೆಗಳಿಗೆ ಬೆಂಬಲವಾಗಿ ನಿಂತಿರುವ ಅರಣ್ಯ ಸಚಿವ ಬಿ. ರಮಾನಾಥ ರೈ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಬಿಜೆಪಿ ಯುವ ಮೋರ್ಚಾ “ಮಂಗಳೂರು ಚಲೋ’ ಬೈಕ್ ರ‍್ಯಾಲಿ ಹಮ್ಮಿಕೊಂಡಿದೆ.
ಸೆ.5.6 ಮತ್ತು 7ರಂದು ಮಂಗಳೂರು ಚಲೋ ಹೆಸರಲ್ಲಿ ಬೃಹತ್ ಮಟ್ಟದ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಹೊರಡುವ ಬೈಕ್ ರ್ಯಾಲಿ ಸೆ.7ರಂದು ಮಂಗಳೂರಿನಲ್ಲಿ ಕೊನೆಗೊಳ್ಳಲಿದ್ದು, ಅಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪ್ರಮುಖರು ಭಾಗವಹಿಸಿಲಿದ್ದಾರೆ.
ಸೆ.5ರಂದು ಬೆಂಗಳೂರು, ಹುಬ್ಬಳ್ಳಿಯಿಂದ ಬೈಕ್ ರ‍್ಯಾಲಿ ಹೊರಡಲಿದ್ದು, ಬೆಂಗಳೂರು ರ್ಯಾಲಿಗೆ ಆರ್.ಅಶೋಕ್, ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿಯಿಂದ ಹೊರಡುವ ರ್ಯಾಲಿಯನ್ನು ಜಗದೀಶ್ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ್ ಜೋಶಿ ಉದ್ಘಾಟಿಸಲಿದ್ದಾರೆ. ಸೆ.6ರಂದು ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಿಂದ ರ್ಯಾಲಿ ಹೊರಡಲಿದೆ.
ಶಿವಮೊಗ್ಗದ ರ್ಯಾಲಿಗೆ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರೆ, ಮೈಸೂರಿನ ರ‍್ಯಾಲಿಗೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಲಿದ್ದಾರೆ. ಚಿಕ್ಕಮಗಳೂರು ರ‍್ಯಾಲಿಗೆ ಶಾಸಕ ಸಿ.ಟಿ.ರವಿ ಚಾಲನೆ ನೀಡಲಿದ್ದಾರೆ.