Advertisement
ಕಾಪು ಪುರಸಭೆ ವ್ಯಾಪ್ತಿಯ ಮೂಳೂರು ಬಿಕ್ರಿಗುತ್ತು – ತಾವರೆ ಕೊಳದಿಂದ ಹರಿದು ಬರುವ ಮಳೆ ನೀರು ಪಡುಗ್ರಾಮದ ರಾಮ ನಗರದಲ್ಲಿ ಹಾದು ಹೋಗುವ ರಾಜಕಾಲುವೆಯಲ್ಲಿ ಹರಿದು ಸಮುದ್ರ ಸೇರುತ್ತದೆ. ಈ ರಾಜಕಾಲುವೆಗೆ ಪಶ್ಚಿಮ ದಿಕ್ಕಿನಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಶಿಫಾರಸಿನ ಮೇರೆಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ 50 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ಆದರೆ ಈ ತಡೆಗೋಡೆ ನಿರ್ಮಾಣ ಕಾಮಗಾರಿಯು ಅವೈಜ್ಞಾನಿಕವಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಕಾಪು ಪಡುಗ್ರಾಮ ರಾಮನಗರದ ದಕ್ಷಿಣ ಭಾಗದಲ್ಲಿ ಇರುವ ಈ ರಾಜ ಕಾಲುವೆಯ ಪೂರ್ವ ದಿಕ್ಕಿನಲ್ಲಿ ನೂರಾರು ಎಕರೆ ಕೃಷಿ ಭೂಮಿಯಿದ್ದು, ಬಹುತೇಕ ಗದ್ದೆಗಳಲ್ಲಿ ಭತ್ತದ ಕೃಷಿಯನ್ನು ಬೆಳೆಸಲಾಗುತ್ತದೆ. ಇಲ್ಲಿನ ರಾಜ ಕಾಲುವೆಯನ್ನು ಕಿರಿದು ಮಾಡಿ ತಡೆಗೋಡೆ ಕಟ್ಟಿದರೆ ಕಾಲುವೆಯಲ್ಲಿ ಹರಿಯುವ ನೀರು ಗದ್ದೆಗಳತ್ತ ನುಗ್ಗಿ ಭತ್ತದ ಗದ್ದೆಗಳು ಹಾನಿಗೀಡಾಗುತ್ತವೆ ಮತ್ತು ನೆರೆ ಬಂದಲ್ಲಿ ಭತ್ತದ ಬೆಳೆ ಸಂಪೂರ್ಣ ಕೊಳೆತು ಹೋಗಲಿದೆ ಎಂಬ ಭಯ ಸ್ಥಳೀಯರನ್ನು ಕಾಡುತ್ತಿರುವುದೆ ಕಾಮಗಾರಿಗೆ ವಿರೋಧಕ್ಕೆ ಮುಖ್ಯ ಕಾರಣವಾಗಿದೆ.
Related Articles
ರಾಮನಗರ ಮೂಲಕ ಹಾದು ಹೋಗುವ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಿದಲ್ಲಿ ಕಾಲುವೆಯಲ್ಲಿ ಮಳೆ ನೀರು ಹರಿದು ಹೋಗುವ ಸಂದರ್ಭ ಇಕ್ಕೆಲಗಳಲ್ಲಿನ ಸವಕಳಿಯಿಂದಾಗಿ ಉಂಟಾಗುವ ಭೂ ಕುಸಿತವನ್ನು ತಡೆಯಲು ಸಾಧ್ಯವಾಗಲಿದೆ. ರಾಮನಗರ – ಮೂಳೂರು ಬಿಕ್ರಿಗುತ್ತು ಕಾಲನಿವರೆಗಿನ ಹಲವು ಮನೆಗಳಿಗೆ ಸರಕಾರಿ ಜಾಗದಲ್ಲೇ ರಸ್ತೆ ನಿರ್ಮಿಸಿ ಕೊಡಬಹುದಾಗಿದೆ. ಪ್ರಸ್ತುತ ಈ ಭಾಗದ 20ಕ್ಕೂ ಅಧಿಕ ಮನೆಗಳ ಜನರು ಖಾಸಗಿ ರಸ್ತೆಯನ್ನೇ ಬಳಸುತ್ತಿದ್ದು ಸರಕಾರಿ ರಸ್ತೆ ನಿರ್ಮಾಣವಾದಲ್ಲಿ ಜನರಿಗೆ ವಿವಿಧ ಮೂಲ ಸೌಕರ್ಯಗಳನ್ನೂ ಸುಲಭವಾಗಿ ದೊರಕಿಸಿಕೊಡಬಹುದು ಎನ್ನುವುದು ಶಾಸಕರ ಲೆಕ್ಕಾಚಾರ.ಸ್ಥಳೀಯರಾದ ಶೇಖರ್ ಪೂಜಾರಿ, ಶೇಖರ್ ಶೆಟ್ಟಿ, ಗಣೇಶ್ ಕುಂದರ್, ಸಂತೋಷ್, ಕಿಶೋರ್, ರಘುರಾಮ ಶೆಟ್ಟಿ, ಭಾಸ್ಕರ್, ಗೀತಾ, ಸರೋಜಿನಿ, ವಿಜಯಾ, ಸುಹಾಸಿನಿ, ಪೂರ್ಣಿಮಾ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
Advertisement